ADVERTISEMENT

ಧಾರವಾಡ | ಕೃಷಿ ಮೇಳ: ಅಲ್ಪ‌ ನೀರಾವರಿ ಭೂಮಿಗೆ ‘ಕಾಗ್ಜಿ’ ವರದಾನ

ವಿಶಿಷ್ಟ ಸುವಾಸನೆ, ಕಡಿಮೆ ಬೀಜಗಳನ್ನು ಹೊಂದಿರುವುದು ವಿಶೇಷ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2023, 8:39 IST
Last Updated 11 ಸೆಪ್ಟೆಂಬರ್ 2023, 8:39 IST
‘ಕಾಗ್ಜಿ’ ತಳಿಯ ಲಿಂಬೆ
‘ಕಾಗ್ಜಿ’ ತಳಿಯ ಲಿಂಬೆ   

ಕಲಾವತಿ ಬೈಚಬಾಳ

ಧಾರವಾಡ: ಲಿಂಬೆ ಬೆಳೆಗಾರರಿಗೆ ಇದೀಗ ‘ಕಾಗ್ಜಿ’ ಎಂಬ ಹೊಸ ತಳಿ ವರದಾನವಾಗಿದೆ. ಧಾರವಾಡದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಈ ತಳಿಯ ಲಿಂಬೆಯನ್ನು ಪ್ರದರ್ಶನಕ್ಕಿಡಲಾಗಿದ್ದು, ಐಸಿಎಆರ್‌–ಇಂಡಿಯಾ ಕೃಷಿ ವಿಜ್ಞಾನ ಕೇಂದ್ರದ ಮಳಿಗೆಗೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. 

ಲಿಂಬೆ ಕಣಜ ವಿಜಯಪುರದಲ್ಲಿ ಈ ತಳಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದ್ದು, 2023ರ ಜೂನ್‌ನಲ್ಲಿ ಭೌಗೋಳಿಕ ಮಾನ್ಯತೆ (ಜಿಯೋಗ್ರಫಿಕಲ್‌ ಟ್ಯಾಗ್‌) ಕೂಡ ಸಿಕ್ಕಿದೆ.

ADVERTISEMENT

ಅಸ್ಸಾಂ ಲಿಂಬೆಯ ಬಳಿಕ ‘ಜಿಐ ಟ್ಯಾಗ್‌’ ಪಡೆದ ಎರಡನೇ ಲಿಂಬೆ ತಳಿ ಎಂಬ ಹೆಗ್ಗಳಿಕೆಗೆ ‘ಇಂಡಿ ಲಿಂಬೆ‘ (ಕಾಗ್ಜಿ) ಪಾತ್ರವಾಗಿದೆ. ಇಂಡಿ ತಾಲ್ಲೂಕಿನಲ್ಲಿ 5,300ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಇದನ್ನು ಬೆಳೆಯಲಾಗಿದೆ. ಈ ತಳಿಯ ಹಣ್ಣುಗಳು ದುಂಡಗಿದ್ದು, ಹಣ್ಣಿನ ಸಿಪ್ಪೆ (2 ಎಂಎಂ) ತೆಳುವಾಗಿರುತ್ತದೆ. ವಿಶಿಷ್ಟ ಸುವಾಸನೆ, ಕಡಿಮೆ ಬೀಜಗಳನ್ನು ಹೊಂದಿರುವುದು ಇದರ ವಿಶೇಷ.

ಈ ಲಿಂಬೆಯಲ್ಲಿ ಸಿಟ್ರಿಕ್ ಆ್ಯಸಿಡ್ ಪ್ರಮಾಣ ಹೆಚ್ಚಾಗಿರುತ್ತದೆ. ಸಾಮಾನ್ಯ ತಳಿಯ ಲಿಂಬೆ 16 ಎಂ.ಎಲ್ ರಸ ನೀಡಿದರೆ, ಕಾಗ್ಜಿ ತಳಿಯ ಒಂದು‌ ಲಿಂಬೆಯಿಂದ 20 ಎಂ.ಎಲ್ ರಸ ಪಡೆಯಬಹುದು. ವರ್ಷಕ್ಕೆ ಎರಡು ಬಾರಿ ಇಳುವರಿ ಬರುತ್ತದೆ.

10 ಟನ್ ಇಳುವರಿ: ಕಡಿಮೆ ಫಲವತ್ತತೆ ಇರುವ ಜಮೀನಿನಲ್ಲಿ ಕಡಿಮೆ ನೀರಿದ್ದರೂ ಈ ಬೆಳೆ ಬೆಳೆಯಬಹುದು. ಈ ತಳಿಯ ಕೃಷಿಗೆ ಎಕರೆಗೆ ₹15,000 ಖರ್ಚು ತಗುಲುತ್ತದೆ. ಒಂದು ಎಕರೆಗೆ 6*6 ಅಂತರದಲ್ಲಿ 112 ಗಿಡಗಳನ್ನು ನೆಡಬಹುದು. ಸಸಿ ನೆಟ್ಟು ಮೂರು ವರ್ಷಕ್ಕೆ ಕಾಯಿ ಬಿಡಲು ಪ್ರಾರಂಭವಾಗುತ್ತದೆ. ಇದಕ್ಕೆ ರೋಗಬಾಧೆಯೂ ಕಡಿಮೆ. ಒಂದು ಗಿಡದಿಂದ ಸರಿಸುಮಾರು 10 ಟನ್ ಇಳುವರಿ ಪಡೆಯಬಹುದು. ಇತರ ತಳಿಯ ಲಿಂಬೆಯಿಂದ ಎಕರೆಗೆ 4 ಟನ್‌ಗಿಂತ ಕಡಿಮೆ ಇಳುವರಿ ಬರುತ್ತದೆ. 25 ವರ್ಷಗಳ ಕಾಲ ಫಲ ಪಡೆಯಬಹುದು.

₹2,500 ದರ: ಒಂದು ಸಾವಿರ ಲಿಂಬೆ ಇರುವ ಒಂದು ಡಾಗ್‌ಗೆ (ಚೀಲ) ಸದ್ಯ ಮಾರುಕಟ್ಟೆಯಲ್ಲಿ ₹2,500 ದರವಿದೆ. ಕೆವಿಕೆ ಇಂಡಿಯಲ್ಲಿ ಈ ತಳಿಯ ಸಸಿಗಳು ಲಭ್ಯವಿದ್ದು, ಒಂದು ಸಸಿಗೆ ₹30 ದರವಿದೆ.

‘ಕಾಗ್ಜಿ’ ತಳಿಯ ಲಿಂಬೆ
ಧಾರವಾಡದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಐಸಿಎಆರ್‌–ಇಂಡಿಯ ಕೃಷಿ ವಿಜ್ಞಾನ ಕೇಂದ್ರದ ಮಳಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದರು. ಸಚಿವ ಸಂತೋಷ್‌ ಲಾಡ್‌ ಇದ್ದಾರೆ
ಕಳೆದ ಎರಡು ದಿನಗಳಲ್ಲಿ ಮಳಿಗೆಗೆ ಅಂದಾಜು 35000 ಜನ ರೈತರು ಭೇಟಿ ನೀಡಿದ್ದಾರೆ. ಕಾಗ್ಜಿ ತಳಿಯ ಲಿಂಬೆ ಬಗ್ಗೆ ಮಾಹಿತಿ ಪಡೆದು ಅವರು ಬೆಳೆಯಲು ಆಸಕ್ತಿ ತೋರಿದ್ದಾರೆ
ಡಾ. ಪ್ರಕಾಶ ಜಿ. ವಿಜ್ಞಾನಿ (ಅಗ್ರೋನಾಮಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.