ADVERTISEMENT

ಕೃಷಿ ಯಂತ್ರಧಾರೆ: ಹೊಣೆ ಯಾರಿಗೆ?

ಒಪ್ಪಂದಿಂದ ಹಿಂದೆ ಸರಿದ ಎಸ್‌ಕೆಡಿಆರ್‌ಪಿ, ಜಾನ್ ಡೀರ್

ಗಣೇಶ ವೈದ್ಯ
Published 6 ಜುಲೈ 2024, 6:17 IST
Last Updated 6 ಜುಲೈ 2024, 6:17 IST
<div class="paragraphs"><p>ಸಂಗ್ರಹ ಚಿತ್ರ( ಸಾಂಕೇತಿಕ )</p></div>

ಸಂಗ್ರಹ ಚಿತ್ರ( ಸಾಂಕೇತಿಕ )

   

 – ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ

ಹುಬ್ಬಳ್ಳಿ: ಬಡ ರೈತರು ಮತ್ತು ಚಿಕ್ಕ ಹಿಡುವಳಿದಾರರ ಅನುಕೂಲಕ್ಕೆ ಸರ್ಕಾರ 10 ವರ್ಷಗಳ ಹಿಂದೆ ಕೃಷಿ ಯಂತ್ರಧಾರೆ ಯೋಜನೆ ಜಾರಿಗೆ ತಂದಿತು. ಆದರೆ, ಧಾರವಾಡ ಜಿಲ್ಲೆಯಲ್ಲಿ ಈ ಯೋಜನೆಗೆ ಹಿನ್ನಡೆ ಉಂಟಾಗಿದೆ.

ADVERTISEMENT

ಕೃಷಿ ಕೂಲಿ ಕಾರ್ಮಿಕರ ಕೊರತೆ, ಎತ್ತುಗಳ ನಿರ್ವಹಣೆ ಸಂಕಷ್ಟ ಎದುರಿಸುತ್ತಿದ್ದ ಸಣ್ಣ ರೈತರಿಗೆ ಕೃಷಿ ಯಂತ್ರೋಪಕರಣನು ಖಾಸಗಿಯವರಿಗಿಂತ ಕಡಿಮೆ ದರದಲ್ಲಿ ಈ ಯೋಜನೆಯಡಿ ನೀಡಲಾಗುತಿತ್ತು.

2014ರಲ್ಲಿ ಯೋಜನೆ ಆರಂಭವಾದಾಗಿನಿಂದ ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. 2019ರವರೆಗೆ ಸರ್ಕಾರ ಅನುದಾನ ನೀಡುತ್ತಿತ್ತು. ನಂತರದ ವರ್ಷಗಳಲ್ಲಿ ಸರ್ಕಾರದಿಂದ ಅನುದಾನ ಹಂಚಿಕೆ ಆಗದ ಕಾರಣ ಯೋಜನೆ ನಿರ್ವಹಿಸುತ್ತಿರುವ ಸಂಸ್ಥೆಗಳು ನಷ್ಟದತ್ತ ಮುಖಮಾಡಿವೆ. ಸರ್ಕಾರದ ಜೊತೆ ಒಪ್ಪಂದ ಮುಂದುವರಿಸುತ್ತಿಲ್ಲ.

ಜಿಲ್ಲೆಯಲ್ಲಿ 14 ಕೃಷಿ ಯಂತ್ರಧಾರೆ ಕೇಂದ್ರಗಳಿವೆ. ಅವುಗಳಲ್ಲಿ ಅಳ್ನಾವರ, ಶರೇವಾಡ, ದುಮ್ಮವಾಡ, ಸಂಶಿ, ಅಣ್ಣಿಗೇರಿ ಕೇಂದ್ರಗಳ ನಿರ್ವಹಣೆಯ ಗುತ್ತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಪಿ) ಪಡೆದಿದೆ.

ಆರಂಭದಲ್ಲಿ ಯಂತ್ರೋಪಕರಣಗಳು ಹೊಸದಾಗಿದ್ದವು; ರೈತರು ನಿರಂತರವಾಗಿ ಬಳಸಿದರು. ಕ್ರಮೇಣ ಯಂತ್ರಗಳು ಹಳೆಯದಾದಂತೆ ಹೆಚ್ಚು ದುರಸ್ತಿಗೆ ಬರುತ್ತಿದ್ದ ಕಾರಣ ನಿರ್ವಹಣಾ ವೆಚ್ಚ ಆದಾಯಕ್ಕಿಂತ ಹೆಚ್ಚಾಗತೊಡಗಿತು. ಸರ್ಕಾರದ ಅನುದಾನವೂ ಸ್ಥಗಿತಗೊಂಡ ಪರಿಣಾಮ ಎಸ್‌ಕೆಡಿಆರ್‌ಪಿ ನಷ್ಟ ಅನುಭವಿಸುವಂತಾಗಿದೆ. ಒಂಬತ್ತು ವರ್ಷಗಳ ಬಳಿಕ ಒಪ್ಪಂದದಿಂದ ಹಿಂದೆ ಸರಿದಿದೆ. ಅಮ್ಮಿನಭಾವಿ ಕೇಂದ್ರದ ಗುತ್ತಿಗೆ ಪಡೆದಿದ್ದ ಜಾನ್ ಡೀರ್ ಕಂಪನಿ ಕೂಡ ಒಪ್ಪಂದ ಅಂತ್ಯಗೊಳಿಸಿದೆ. 2017–18ರಿಂದ ಒಂಬತ್ತು ವರ್ಷಗಳ ಗುತ್ತಿಗೆ ಆರಂಭಿಸಿದ ವರ್ಷಾ ಅಸೋಸಿಯೇಟ್ಸ್ ಸಂಸ್ಥೆ ಮಾತ್ರ ಎಂಟು ಕೇಂದ್ರಗಳನ್ನು ನಿರ್ವಹಣೆ ಮಾಡುತ್ತಿದೆ.

ಒಪ್ಪಂದ ಮುಗಿದ ಕೇಂದ್ರಗಳನ್ನು ರೈತ ಉತ್ಪಾದಕ ಸಂಸ್ಥೆಗೆ ಹಸ್ತಾಂತರಿಸುವ ಕುರಿತೂ ಚಿಂತನೆ ನಡೆಸಿದೆ. ಆದರೆ ನಷ್ಟದಲ್ಲಿ ನಡೆಯುತ್ತಿರುವ ಯೋಜನೆಯೊಂದನ್ನು ಮುಂದುವರಿಸಲು ರೈತ ಉತ್ಪಾದಕ ಸಂಸ್ಥೆಗಳು ಮುಂದೆ ಬರುತ್ತವೆಯೇ ಎಂಬುದೇ ಪ್ರಶ್ನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.