ADVERTISEMENT

ಹುಬ್ಬಳ್ಳಿ: ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ತಂದ ಸೋಯಾಬೀನ್

ಕಲಾವತಿ ಬೈಚಬಾಳ
Published 21 ಜೂನ್ 2024, 8:12 IST
Last Updated 21 ಜೂನ್ 2024, 8:12 IST
ಸೋಯಾಬಿನ್‌ ಬೆಳೆ
ಸೋಯಾಬಿನ್‌ ಬೆಳೆ   

ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಕೃಷಿ ಎಂದಾಕ್ಷಣ ನಷ್ಟ ಅನುಭವಿಸುವುದೇ ಹೆಚ್ಚು ಎನ್ನುವಂತಾಗಿದೆ. ಸಕಾಲಕ್ಕೆ ಮಳೆಯಾಗದಿದ್ದರೆ, ಬೆಳೆದ ಬೆಳೆಗೆ ಉತ್ತಮ ದರ ಸಿಗದಿದ್ದರೆ ರೈತರ ಕಷ್ಟ ಹೇಳತೀರದ್ದು. ಇಂಥದ್ದರ ನಡುವೆಯೂ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಪಡೆಯುತ್ತ, ಸಮಗ್ರ ಕೃಷಿಯಲ್ಲಿ ನೆಲೆ ಕಂಡುಕೊಂಡವರು ಸಾವಯವ ಕೃಷಿಕ, ಧಾರವಾಡ ತಾಲ್ಲೂಕಿನ ಮದನಭಾವಿ ಗ್ರಾಮದ ಫಕೀರಪ್ಪ ಮುರಾರಿ.

ಸ್ವಂತದ 42 ಎಕರೆ ಮತ್ತು ಪಾಲುದಾರಿಕೆಯಲ್ಲಿ 28 ಎಕರೆ ಭೂಮಿಯಲ್ಲಿ ನೀರಾವರಿ ಹಾಗೂ ಒಣಭೂಮಿ ಬೇಸಾಯ ಮಾಡುತ್ತಿರುವ ಇವರು, ಕಳೆದ 20 ವರ್ಷಗಳಿಂದ ಸೋಯಾಬಿನ್‌ ಹಾಗೂ ಕಬ್ಬನ್ನೇ ಹೆಚ್ಚಾಗಿ ಬೆಳೆಯುತ್ತ ಬಂದಿದ್ದಾರೆ. ಈ ಮೂಲಕ ಶ್ರಮವಹಿಸಿ ದುಡಿದಲ್ಲಿ, ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆಯಬಹುದು ಎಂಬುದನ್ನು ಕಂಡುಕೊಂಡು, ಇತರ ರೈತರಿಗೂ ಮಾದರಿಯಾಗಿದ್ದಾರೆ. 

ಸೋಯಾಬೀನ್ 50 ಎಕರೆ, ಕಬ್ಬು 25 ಎಕರೆ, ಆಲೂಗಡ್ಡೆ 2 ಎಕರೆ, ಹೆಸರುಕಾಳು, ಶೇಂಗಾ, ತಲಾ 1 ಎಕರೆ ಸೇರಿದಂತೆ ಬೀನ್ಸ್‌, ಟೊಮೆಟೊ, ಹಿರೇಕಾಯಿ ಮುಂತಾದ ಕಾಯಿಪಲ್ಯಗಳನ್ನು ಬೆಳೆಯುತ್ತಿದ್ದಾರೆ. 

ADVERTISEMENT

‘ಎಕರೆಗೆ ₹10 ಸಾವಿರ ಖರ್ಚು ಮಾಡಿ ಸೋಯಾಬಿನ್‌ ಬೆಳೆದಿರುವೆ. ಎಕರೆಗೆ 8 ಕ್ವಿಂಟಲ್‌ ಇಳುವರಿ ಬಂದಿದೆ. ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ಅಂದಾಜು ₹4,500 ದರವಿದೆ. ಧಾರವಾಡದಲ್ಲೇ ಮಾರುಕಟ್ಟೆ ವ್ಯವಸ್ಥೆ ಕಂಡುಕೊಂಡಿರುವೆ. ಎಕರೆಗೆ ಒಂದು ಟ್ರ್ಯಾಕ್ಟರ್‌ನಷ್ಟು ಸೋಯಾಬಿನ್‌ ಒಣಬಳ್ಳಿ, ಒಂದು ಟ್ರ್ಯಾಕ್ಟರ್‌ನಷ್ಟು ಮೇವು ಉಪ ಉತ್ಪನ್ನವಾಗಿ ಸಿಗುತ್ತಿದೆ’ ಎಂದು ಫಕೀರಪ್ಪ ಮುರಾರಿ ವಿವರಿಸಿದರು.

‘ಸಾವಯವ ಕೃಷಿಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದು, ಕಾಲಕಾಲಕ್ಕೆ ಬೀಜೋಪಚಾರ ಮಾಡಿ, ಬೆಳೆಗಳಿಗೆ ಜೀವಾಮೃತ ನೀಡಿ, ಹೊಲಕ್ಕೆ ತಿಪ್ಪೆಗೊಬ್ಬರ, ಕುರಿ ಗೊಬ್ಬರ ಹಾಕುವುದರಿಂದ ಭೂಮಿಯ ಫಲವತ್ತತೆ ಹೆಚ್ಚಾಗಿ ಇಳುವರಿ ಚೆನ್ನಾಗಿ ಬರುತ್ತಿದೆ’ ಎಂದು ತಿಳಿಸಿದರು.

15 ಕೊಳವೆಬಾವಿಗಳಿದ್ದು, 2 ಕೃಷಿ ಹೊಂಡಗಳಿವೆ. ಹನಿ ನೀರಾವರಿ ಪದ್ಧತಿಯನ್ನೂ ಅಳವಡಿಸಿಕೊಂಡಿದ್ದಾರೆ. ಇದರಿಂದ ಕಬ್ಬು ಬೆಳೆಯಲು ಅನುಕೂಲವಾಗಿದ್ದು, ಎಕರೆಗೆ 80 ಟನ್‌ನಿಂದ 100 ಟನ್‌ ಇಳುವರಿ ಪಡೆಯುತ್ತಿದ್ದಾರೆ. 

‘20 ವರ್ಷಗಳಿಂದ ಕಬ್ಬು ಬೆಳೆಯುತ್ತಿರುವೆ. ಈ ವರ್ಷ ಎಕರೆಗೆ 80 ಟನ್‌ನಿಂದ 90 ಟನ್‌ ಇಳುವರಿ ಬಂದಿದೆ. ಟನ್‌ಗೆ ಅಂದಾಜು ₹2,700ರಿಂದ ₹3,000 ವರೆಗೆ ದರವಿದೆ. ಸಕಾಲಕ್ಕೆ ಮಳೆಯಾಗಿದ್ದರೆ ಅಧಿಕ ಇಳುವರಿ ಪಡೆಯಬಹುದಾಗಿತ್ತು’ ಎಂದು ತಿಳಿಸಿದರು. 

ಹೈನುಗಾರಿಕೆಗೂ ಒತ್ತು
‘50 ಜನರಿರುವ ಕೃಷಿ ಕುಟುಂಬದಲ್ಲಿ 20 ಎಮ್ಮೆ 6 ಆಕಳು ಮತ್ತು 4 ಕರುಗಳಿವೆ. ಮನೆ ಬಳಕೆಯಾಗಿ ಉಳಿದ 10 ಲೀಟರ್‌ ಹಾಲನ್ನು ಡೇರಿಗೆ ಕೊಡುತ್ತೇವೆ. ನಮ್ಮದೇ 30 ಡೇರಿಗಳಿವೆ. ಈ ಮೂಲಕ ಹೈನುಗಾರಿಯಲ್ಲೂ ತೊಡಗಿಸಿಕೊಂಡಿದ್ದೇವೆ’ ಎಂದು ಫಕೀರಪ್ಪ ಮುರಾರಿ ಹೇಳಿದರು.  ‘ಕೃಷಿಗೆ ಕುಟುಂಬದ ಸಹಕಾರ ತೀರ ಅವಶ್ಯ. ಮನೆಯವರೆಲ್ಲ ಸೇರಿ ಕೃಷಿಯಲ್ಲಿ ತೊಡಗಿಸಿಕೊಂಡಿರುವುದರಿಂದಲೇ ಆಳು ತೆಗೆದುಕೊಳ್ಳುವ ಪ್ರಮಾಣ ತೀರ ಕಡಿಮೆ. ಹಾಗಾಗಿ ಆಳಿನ ಖರ್ಚು ಉಳಿದಂತಾಗುತ್ತದೆ’ ಎಂದೂ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.