ADVERTISEMENT

ಹುಬ್ಬಳ್ಳಿ | ಕೃಷಿಯಲ್ಲಿ ಖುಷಿ ಕಾಣುವ ಸುನಂದಾ; ಲಕ್ಷಾಂತರ ರೂಪಾಯಿ ಲಾಭ

ಎಂಟು ವರ್ಷದಿಂದ ಸಮಗ್ರ ಕೃಷಿಯಲ್ಲಿ ತೊಡಗಿರುವ ಸುಳ್ಳದ ರೈತ ಮಹಿಳೆ

ಗೌರಮ್ಮ ಕಟ್ಟಿಮನಿ
Published 7 ಜೂನ್ 2024, 7:05 IST
Last Updated 7 ಜೂನ್ 2024, 7:05 IST
ಹುಬ್ಬಳ್ಳಿ ತಾಲ್ಲೂಕಿನ ಸುಳ್ಳದ ರೈತ ಮಹಿಳೆ ಸುನಂದ ಉಳ್ಳಾಗಡ್ಡಿ ತಾವು ಬೆಳೆದ ಜೋಳದ ಬೆಳೆಯೊಂದಿಗೆ
ಹುಬ್ಬಳ್ಳಿ ತಾಲ್ಲೂಕಿನ ಸುಳ್ಳದ ರೈತ ಮಹಿಳೆ ಸುನಂದ ಉಳ್ಳಾಗಡ್ಡಿ ತಾವು ಬೆಳೆದ ಜೋಳದ ಬೆಳೆಯೊಂದಿಗೆ   

ಹುಬ್ಬಳ್ಳಿ: ‘ಓದು ತಲಿಗ ಹತ್ಲಿಲ್ಲಲ್ರಿ ಆದ್ರ ಭೂಮ್ತಾಯಿ ಕೈ ಬಿಡ್ಲಿಲ್ಲ...ಆಕಿಯಿಂದನ ಇವತ್ತ ಬದುಕು ಹಸನಾಗೇತಿ, ತುತ್ತಿನ ಚೀಲ ತುಂಬಾಕತ್ತದ ಜೊತಿಗ ಆರ್ಥಿಕವಾಗಿ ಸಬಲರಾಗಿ, ಸ್ವಾವಲಂಬಿಯಾಗಿ ಜೀವನ ಮಾಡಾಕತ್ತೇನೆ’...

ಹೀಗೆ ಆತ್ಮವಿಶ್ವಾಸದಿಂದ ಮಾತನಾಡಿದವರು ಹುಬ್ಬಳ್ಳಿ ತಾಲ್ಲೂಕಿನ ಸುಳ್ಳ ಗ್ರಾಮದ ರೈತ ಮಹಿಳೆ ಸುನಂದಾ ಉಳ್ಳಾಗಡ್ಡಿ.

ಚಿಕ್ಕ ವಯಸ್ಸಿನಲ್ಲೇ ಓದು ಬಿಟ್ಟು ತಂದೆಯೊಟ್ಟಿಗೆ ಕೃಷಿ ಚಟುವಟಿಕೆಯಲ್ಲಿ ಭಾಗಿಯಾದ ಅವರು, ಎಂಟು ವರ್ಷದಿಂದ ರೈತ ಮಹಿಳೆಯಾಗಿ ಹತ್ತು ಎಕರೆಯಲ್ಲಿ ಸಮಗ್ರ ಕೃಷಿಯಲ್ಲಿ ತೊಡಗಿದ್ದಾರೆ. ಋತುಮಾನಕ್ಕೆ ತಕ್ಕಂತೆ ಬೆಳೆ ಬೆಳೆಯುವ ಅವರು ಕೃಷಿ ಕೆಲಸಕ್ಕೆ ತಕ್ಕಂತೆ ನಾಲ್ಕಾರು ಜನಕ್ಕೆ ಕೆಲಸವನ್ನು ನೀಡುತ್ತಿದ್ದಾರೆ.

ADVERTISEMENT

ಸದ್ಯ ಮುಂಗಾರು ಹಂಗಾಮು ಶುರುವಾಗಿದ್ದರಿಂದ 6 ಎಕರೆಯಲ್ಲಿ ಹೆಸರು, ಕಡಲೆ, ಜೋಳ, ಮಡಕೆ, ಅಲಸಂದಿ, ಗೋವಿನ ಜೋಳ, ಶೇಂಗಾ, ಹೆಸರು, ಉದ್ದು ಹಾಗೂ ಇನ್ನುಳಿದ ನಾಲ್ಕು ಎಕರೆ ಹೊಲ ನೀರಾವರಿಯಿದ್ದು ಮೆಂತ್ಯೆ, ಕೊತ್ತಂಬರಿ ಹಾಗೂ ಕಿರಿಕ್‌ ಸಾಲಿ ಬೆಳೆಯುತ್ತಿದ್ದಾರೆ. ಜೊತೆಗೆ ಹೈನುಗಾರಿಕೆಯೂ ಮಾಡುತ್ತಿದ್ದಾರೆ. ಮನೆಗೆ ಬೇಕಾದಷ್ಟು ಹಾಲನ್ನು ಬಳಸಿ, ಉಳಿದ ಹಾಲನ್ನು ಡೇರಿಗೆ ಮಾರುತ್ತಾರೆ. ತರಕಾರಿಯನ್ನು ಬೆಳೆಯುವ ಅವರು ವರ್ಷಪೂರ್ತಿ ಹೊಲದಲ್ಲಿ ದುಡಿಯುತ್ತಾರೆ. ಅದರಿಂದಲೇ ವರ್ಷಪೂರ್ತಿ ಆದಾಯವನ್ನೂ ಪಡೆಯುತ್ತಾರೆ.

‘ಕಾಳುಗಳನ್ನು ಹುಬ್ಬಳ್ಳಿಯ ಎಪಿಎಂಸಿಗೆ ಹಾಗೂ ಉತ್ತಮ ಬೆಲೆ ಇದ್ದಾಗ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಮಾರಾಟ ಮಾಡುತ್ತೇನೆ. ಮಾರಾಟಗಾರರು ಒಮ್ಮೊಮ್ಮೆ ನೇರವಾಗಿ ಹೊಲಕ್ಕೆ ಬಂದು ಖರೀದಿಸುತ್ತಾರೆ. ಸೊಪ್ಪನ್ನು ಬಾಡಿಗೆ ವಾಹನದ ಮೂಲಕ ಎಪಿಎಂಸಿಗೆ ಕಳಿಸುತ್ತೇನೆ. ಸಾವಯುವ ಗೊಬ್ಬರ ಬಳಸುವುದರಿಂದ ಉತ್ತಮ ಫಸಲು ದೊರೆಯುತ್ತದೆ’ ಎನ್ನುತ್ತಾರೆ ರೈತ ಮಹಿಳೆ ಸುನಂದಾ ಉಳ್ಳಾಗಡ್ಡಿ.

‘ಹೊಲ ಹದಗೊಳಿಸುವುದು, ಬಿತ್ತನೆ, ಕೀಟನಾಶಕ ಸಿಂಪಡಣೆ, ಬಾಡಿಗೆ ವಾಹನ, ಕೂಲಿಕಾರರು ಸೇರಿ ₹ 50 ಸಾವಿರ ಖರ್ಚಾಗಿ, ವಾರ್ಷಿಕ ₹2ರಿಂದ ₹3 ಲಕ್ಷ ಆದಾಯ ಉಳಿಯುತ್ತದೆ. 25 ದಿನಕ್ಕೆ ಸೊಪ್ಪಿನ ಫಸಲು ಬರುತ್ತದೆ, ನಂತರ ಆ ಜಾಗವನ್ನು ಖಾಲಿ ಬಿಟ್ಟು, ಸ್ವಲ್ಪ ದಿನದ ನಂತರ ಬೇರೆ ಬೆಳೆ ಬೆಳೆಯುತ್ತೇವೆ. ಇದರಿಂದ ವರ್ಷಪೂರ್ತಿ ಆದಾಯ ದೊರೆಯುತ್ತದೆ’ ಎಂದು ಅವರು ಹೇಳಿದರು.

‘ಕೃಷಿ ಭೂಮಿ ಲಾಟ್ರಿ ಇದ್ದಂಗ್ರಿ, ಕೈ ಹಿಡಿದ್ರೆ ಲಕ್ಷಾಂತರ ರೂಪಾಯಿ ಲಾಭ ಬರ್ತದ. ಹವಾಮಾನ ವೈಪರೀತ್ಯದಿಂದ ಒಮ್ಮೊಮ್ಮೆ ನಷ್ಟಾನೂ ಅನುಭವಿಸ್ತಿವಿ. ಆದ್ರ ಕೃಷಿ ಭೂಮಿ ಮೇಲೆ ನಂಬಿಕಿ ಇಟ್ಟು ಕೆಲಸ ಮಾಡಿದ್ರ ಖಂಡಿತ ಕೈ ಹಿಡಿತಾಳ’ ಎನ್ನುವ ಅವರು ಮಾತು ರೈತ ಮಹಿಳೆಯರಿಗೆ ಪ್ರೇರಣೆಯಾಗಿದೆ.

ರೇಷ್ಮೆ ಕೃಷಿಯಲ್ಲೂ ಸೈ...

ಸದ್ಯ ಸಮಗ್ರ ಕೃಷಿಯಲ್ಲಿ ತೊಡಗಿರುವ ಸುನಂದಾ ಈ ಮುಂಚೆ ಐದು ವರ್ಷ ರೇಷ್ಮೆ ಕೃಷಿ ಮಾಡಿ ಸೈ ಎನಿಸಿಕೊಂಡಿದ್ದಾರೆ. ರೇಷ್ಮೆಯಲ್ಲಿ ಉತ್ತಮ ಆದಾಯ ಪಡೆಯುತ್ತಿದ್ದ ಅವರು ಒಂಟಿಯಾಗಿ ರೇಷ್ಮೆ ಕೃಷಿ ಮಾಡುವುದು ಕಷ್ಟ ಎನ್ನುವ ಕಾರಣಕ್ಕೆ ಈಗ ನಿಲ್ಲಿಸಿದ್ದಾರೆ. ಆದರೆ ರೇಷ್ಮೆಯಲ್ಲಿನ ಅವರ ಸಾಧನೆಗೆ ‘ಕೃಷಿ ಪಂಡಿತ’ ಪ್ರಶಸ್ತಿ ಲಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.