ADVERTISEMENT

ವಾಯು, ಶಬ್ದ ಮಾಲಿನ್ಯ ಪ್ರಮಾಣ ಹೆಚ್ಚಳ: ಹಸಿರು ಪಟಾಕಿಗೂ ತಗ್ಗದ ಮಾಲಿನ್ಯ

ಸತೀಶ ಬಿ.
Published 17 ನವೆಂಬರ್ 2023, 4:26 IST
Last Updated 17 ನವೆಂಬರ್ 2023, 4:26 IST
<div class="paragraphs"><p>ವಾಯು ಮಾಲಿನ್ಯ </p></div>

ವಾಯು ಮಾಲಿನ್ಯ

   

ಹುಬ್ಬಳ್ಳಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅವಳಿ ನಗರದಲ್ಲಿ ಪಟಾಕಿ ಸಿಡಿಸುವುದರ ಜೊತೆಗೆ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಪ್ರಮಾಣವೂ ಹೆಚ್ಚಿದೆ.

ದೀಪಾವಳಿಯಲ್ಲಿ ರಾತ್ರಿ 8 ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಬೇಕು. ಹಸಿರು ಪಟಾಕಿಯಲ್ಲದೇ ನಿಷೇಧಿತ ಪಟಾಕಿಗಳನ್ನು ದಾಸ್ತಾನು ಹಾಗೂ ಮಾರಾಟ ಮಾಡಬಾರದು ಎಂದು ನಿರ್ಬಂಧವೂ ಇತ್ತು. ಇದೆಲ್ಲದರ ನಡುವೆಯೂ ಪಟಾಕಿ ಸಿಡಿಸುವ ಪ್ರಮಾಣ ಹೆಚ್ಚಾಗಿದ್ದು, ವಾಯು ಮಾಲಿನ್ಯಕ್ಕೆ ಕಾರಣವಾಗಿದೆ.

ADVERTISEMENT

ಹುಬ್ಬಳ್ಳಿಯ ದೇಪಾಂಡೆನಗರದ ಮಾಪಕ ಕೇಂದ್ರದಲ್ಲಿ ನವೆಂಬರ್ 12, 13 ಮತ್ತು 14ರಂದು ವಾಯು ಗುಣಮಟ್ಟ ಸೂಚ್ಯಂಕ 101 ರಿಂದ 200ರ ಒಳಗೆ ದಾಖಲಾಗಿದೆ. ಉಳಿದ ಎರಡು ಕೇಂದ್ರಗಳಲ್ಲಿ ಸಮಾಧಾನಕರ (51 ರಿಂದ 100) ಹಂತದಲ್ಲಿದೆ. ಆದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾಲಿನ್ಯ ಪ್ರಮಾಣ ಹೆಚ್ಚಾಗಿರುವುದು ಕಂಡು ಬಂದಿದೆ.

‘ಈ ವರ್ಷ ನವೆಂಬರ್‌ 11 ರಿಂದ 14ವರೆಗೆ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶವಿತ್ತು. ಪರಿಶೀಲನೆ ವೇಳೆ ಹಸಿರು ಪಟಾಕಿ ಬಿಟ್ಟು ನಿಷೇಧಿತ ಪಟಕಿಗಳು ಎಲ್ಲಿಯೂ ಕಂಡು ಬಂದಿರಲಿಲ್ಲ. ನಿಷೇಧಿತ ಪಟಾಕಿಗಳನ್ನು ಮಾರಾಟಗಾರರೇ ಕಂಪನಿಗೆ ವಾಪಸ್ ಕಳಿಸಿದ್ದರು’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹೇಳಿದರು.

‘ಹೆಚ್ಚಿನ ಜಾಗೃತಿ ಮೂಡಿಸಿದ್ದರಿಂದ ಬಹುತೇಕ ಕಡೆ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸಿದ್ದಾರೆ. ಒಂದು ವೇಳೆ ನಿಷೇಧಿತ ಪಟಾಕಿಗಳನ್ನು ಹೆಚ್ಚು ಬಳಸಿದ್ದರೆ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಪ್ರಮಾಣ ಇನ್ನೂ ಹೆಚ್ಚಾಗುತ್ತಿತ್ತು’ ಎಂದು ಮಾಹಿತಿ ನೀಡಿದರು.

ಶಬ್ದ ಮಾಲಿನ್ಯವೂ ಹೆಚ್ಚಳ: ಧಾರವಾಡದ ಮಂಗಳವಾರಪೇಟೆಯಲ್ಲಿ ಅಳವಡಿಸಲಾಗಿರುವ ಶಬ್ದ ಪ್ರಮಾಣ ಅಳೆಯುವ ಮಾಪಕದಲ್ಲಿ ದಾಖಲಾದ ಮಾಹಿತಿ ಪ್ರಕಾರ, ಶಬ್ದ ಮಾಲಿನ್ಯವೂ ಹೆಚ್ಚಾಗಿದೆ.

ಜನವಸತಿ ಪ್ರದೇಶದಲ್ಲಿ ಶಬ್ದ ಮಾಲಿನ್ಯ ಪ್ರಮಾಣ 55 ಡೆಸಿಬಲ್ಸ್ ಮೀರಬಾರದು. ಆದರೆ, ಈ ಬಾರಿ ಮಾಲಿನ್ಯ ಪ್ರಮಾಣ 71.6 ಡೆಸಿಬಲ್ಸ್ ಇದೆ.

ಐವರಿಗೆ ಗಾಯ: ಪಟಾಕಿ ಸಿಡಿಸುವ ವೇಳೆ ಐವರಿಗೆ ಕಣ್ಣಿಗೆ ಗಾಯಗಳಾಗಿದ್ದು, ಅವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

‘ಮೂವರು ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ನವನಗರದ 11 ವರ್ಷದ ಬಾಲಕನ ಎಡಗಣ್ಣಿಗೆ ಹಾನಿಯಾಗಿತ್ತು. ಆತನನ್ನು ಒಳರೋಗಿ ವಿಭಾಗದಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗಿದೆ. ಧಾರವಾಡದ 35 ವರ್ಷದ ಮಹಿಳೆಯ ಎಡಗಣ್ಣಿನ ಕಣ್ಣು ಗುಡ್ಡೆ ಒಡೆದಿದ್ದು, ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಕಿಮ್ಸ್ ಆಸ್ಪತ್ರೆಯ ನೇತ್ರ ತಜ್ಞ ಡಾ. ರಾಜಶೇಖರ ದ್ಯಾಬೇರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.