ADVERTISEMENT

ಧಾರವಾಡದ ಖ್ಯಾತಿ ಹೆಚ್ಚಿಸಿದ ‘ಪೇಢಾ’

ಹುಬ್ಬಳ್ಳಿ–ಧಾರವಾಡ ಮೆಟ್ರೊ

ಬಸೀರ ಅಹ್ಮದ್ ನಗಾರಿ
Published 16 ಅಕ್ಟೋಬರ್ 2019, 8:49 IST
Last Updated 16 ಅಕ್ಟೋಬರ್ 2019, 8:49 IST
ಧಾರವಾಡ ಪೇಢಾ
ಧಾರವಾಡ ಪೇಢಾ   

ಧಾರವಾಡ ಎಂದಾಕ್ಷಣ ಥಟ್ಟನೆ ಹೊಳೆಯೋದು ‘ಪೇಢಾ’. ಅಷ್ಟರ ಮಟ್ಟಿಗೆ ಇಲ್ಲಿನ ಪೇಢಾ ಜಗದ್ವಿಖ್ಯಾತ. ವಿಶಿಷ್ಟ ರುಚಿಯಿಂದಾಗಿ ಎಲ್ಲ ಮನ ಸೆಳೆಯುವ, ‘ಜಿಯಾಗ್ರಫಿಕಲ್‌ ಇಂಡಿಕೇಷನ್’ (ಜಿ.ಐ– ಭೌಗೋಳಿಕ ಸೂಚಿಕೆ) ಮಾನ್ಯತೆಯನ್ನೂ ದಕ್ಕಿಸಿಕೊಂಡ ‘ಸಿಹಿ ತಿನಿಸು’. ಹಾಲಿನ ಖಾದ್ಯವಾಗಿರುವ ಇದು ತನ್ನ ಓಡಾಟದೊಂದಿಗೆ ಧಾರವಾಡ ಹೆಸರು, ಕೀರ್ತಿಯನ್ನು ಅಷ್ಟದಿಕ್ಕುಗಳಲ್ಲೂ ಪಸರಿಸಿದೆ.

ಇಂಥ ‘ಪೇಢಾ’ ಕಾಲಾಂತರದಲ್ಲಿ ವ್ಯಾಪಾರದ ಮಾರ್ಗವಾಗಿ ಬದಲಾಗಿದೆ. ಗ್ರಾಹಕರು ಬಯಸಿದಲ್ಲೆಲ್ಲ ಸಿಗುವ ಸಿಹಿ ತಿನಿಸು ಎನಿಸಿದೆ. ರೈಲು ನಿಲ್ದಾಣ, ಬಸ್‌ ನಿಲ್ದಾಣ ಸೇರಿದಂತೆ ಹುಬ್ಬಳ್ಳಿ– ಧಾರವಾಡದ ಹಲವು ಪ್ರದೇಶಗಳಲ್ಲಿ ‘ಪೇಡಾ’ ಆವರಿಸಿಕೊಂಡಿದೆ. ಹಾಗಾದರೆ, ಇಷ್ಟೊಂದು ವ್ಯಾಪಿಸಿರುವ, ಜನರಲ್ಲಿ ಕುತೂಹಲ ಹುಟ್ಟಿಸಿರುವ, ನೆನದೊಡನೆ ನಾಲಿಗೆಯಲ್ಲಿ ನೀರೂರಿಸುವ ಈ ‘ಧಾರವಾಡ ಪೇಢಾ’ ಮುನ್ನೆಲೆಗೆ ಬಂದಿದ್ದು ಹೇಗೆ? ಅದರ ವಿಶೇಷವೇನು?

****

ADVERTISEMENT

ಬರೀ ಹಾಲು–ಸಕ್ಕರೆಯ ಹದಭರಿತ ಮಿಶ್ರಣವೇ ‘ಧಾರವಾಡ ಪೇಢಾ’. ಅದರ ಇತಿಹಾಸ ಕೆದಕುತ್ತ ಹೋದರೆ, ಅದು ನಮ್ಮನ್ನು 19ನೇ ಶತಮಾನಕ್ಕೆ ಕರೆದೊಯ್ಯುತ್ತದೆ. 19ನೇ ಶತಮಾನದ ಆರಂಭದಲ್ಲಿ ಈಗಿನ ಉತ್ತರ ಪ್ರದೇಶದ ಉನ್ನಾವೊದಲ್ಲಿ ಪ್ಲೇಗ್‌ ಎಂಬ ರೋಗ ಉತ್ತುಂಗದಲ್ಲಿತ್ತು. ಅಂಥ ಸಂದರ್ಭದಲ್ಲಿ ಅಲ್ಲಿಂದ ವಲಸೆ ಬಂದ ಕುಟುಂಬವೊಂದು ಧಾರವಾಡದಲ್ಲಿ ನೆಲೆ ನಿಂತಿತು. ಆ ಕುಟುಂಬವೇ ಇಂಥ ‘ಪೇಢಾ’ ತಯಾರಿಕೆಯಲ್ಲಿ ತೊಡಗಿತು. ಅದು ಕ್ರಮೇಣ ‘ಧಾರವಾಡ ‘ಪೇಢಾ’ ಎಂದು ಗುರುತಿಸಿಕೊಂಡಿತು.

20ನೇ ಶತಮಾನದಲ್ಲಿ ಧಾರವಾಡದ ಲೈನ್‌ಬಜಾರ್‌ನಲ್ಲಿ ಜನರು ಸಾಲುಗಟ್ಟಿ ನಿಂತು, ಕೊಳ್ಳುತ್ತಿದ್ದ ಸಿಹಿ ತಿನಿಸಿನ ಖ್ಯಾತಿಯನ್ನು ಈ ‘ಪೇಢಾ’ ಪಡೆಯಿತು. 21ನೇ ಶತಮಾನದಲ್ಲಿ ಅದಕ್ಕೆ ಭೌಗೋಳಿಕ ಸೂಚಿಕೆ ಮಾನ್ಯತೆಯೂ ದಕ್ಕಿದೆ. ಅದರೊಂದಿಗೆ ದೇಶ–ವಿದೇಶದಲ್ಲೂ ತನ್ನ ವಿಶಿಷ್ಟ ಸ್ವಾದದಿಂದ ವಿಶೇಷ ಸ್ಥಾನವನ್ನು ಪೇಡಾ ಗಳಿಸಿಕೊಂಡಿದೆ.

ಹೀಗೆ ಸಿದ್ಧಗೊಳ್ಳುತ್ತದೆ ಪೇಢಾ:ಪೇಢಾದಲ್ಲಿ ತಯಾರಿಕೆಗೆ ಬಳಕೆಯಾಗುವುದು ಹಾಲು ಮತ್ತು ಸಕ್ಕರೆ ಮಾತ್ರ. ಹೀಗಾಗಿ ಈ ಸಿಹಿ ತಿನಿಸನ್ನು ಪ್ರಮುಖವಾಗಿ ಹಾಲಿನ ಖಾದ್ಯ ಎನ್ನಬಹುದು. ಹಾಲು ಪೇಢಾ ಆಗಿ ಸಿದ್ಧಗೊಳ್ಳಲು ಕನಿಷ್ಠ 6 ಗಂಟೆಯಷ್ಟು ಪ್ರಕ್ರಿಯೆ ನಡೆಯುತ್ತದೆ. ಹಾಲನ್ನು ಹಲವು ಗಂಟೆ ಕಾಲ ಕಾಯಿಸಿ–ಕಾಯಿಸಿ ಕದಡುತ್ತ ಬಂದಾಗ, ಬಿಳಿ ಖೋವಾ ಸಿಗುತ್ತದೆ. ಅದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ ಹುರಿಯಲಾಗುತ್ತದೆ. ಆಗ ಅದು ಕಂದು ಬಣ್ಣ ಪಡೆದುಕೊಳ್ಳುತ್ತದೆ. ಬಳಿಕ ಮತ್ತೆ ಒಂದು ಗಂಟೆ ಅದನ್ನು ಆರಲು ಬಿಡಲಾಗುತ್ತದೆ. ನಂತರ ಅದಕ್ಕೆ ಸಕ್ಕರೆ ಸೇರಿಸಿ ಹುರಿಯಲಾಗುತ್ತದೆ. ಆಗ ಅದು ಪೇಢಾ ಕಟ್ಟುವ ಹದ ಹಾಗೂ ಸ್ವಾದಕ್ಕೆ ಬರುತ್ತದೆ. ನಂತರ ಅದನ್ನು ಪೇಢಾ ಕಟ್ಟಿ, ಅದನ್ನು ಸಕ್ಕರೆ ಪುಡಿಯಲ್ಲಿ ಹೊರಳಾಡಿಸುತ್ತಾರೆ. ಒಂದರಿಂದ ಎರಡು ಗಂಟೆಯ ಕಾಲ ಒಣಗಿಸಿದ ಬಳಿಕ ಆ ಪೇಢಾ ಪ್ಯಾಕಿಂಗ್‌ಗೆ ಸಿದ್ಧಗೊಳ್ಳುತ್ತದೆ.

‘ಪೇಢಾ ಸಿದ್ಧತೆ ಎಂಬುದೊಂದು ತಪಸ್ಸು. ಸ್ವಲ್ಪ ಹದ ಆಚೀಚೆ ಆದರೂ ಸ್ವಾದದ ಮೇಲೆ ಪರಿಣಾಮ ಬೀರಿ, ಗುಣಮಟ್ಟದಲ್ಲಿ ಎದ್ದು ತೋರುತ್ತದೆ. ಬಳಿಕ ನಾವೇ ಮಾಡಿದರೂ, ಅದು ಧಾರವಾಡ ಪೇಢಾ ಅಲ್ಲ ಎಂಬಂತಾಗುತ್ತದೆ. ಹೀಗಾಗಿ ಬಹಳ ಜಾಗರೂಕತೆಯಿಂದೇ ಈ ಇದನ್ನು ತಯಾರಿಸುತ್ತೇವೆ’ ಎಂದು 170ಕ್ಕೂ ಹೆಚ್ಚು ವರ್ಷಗಳಿಂದ ಪೇಢಾ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಧಾರವಾಡದ ಬಾಬೂ ಸಿಂಗ್ ಠಾಕೂರ್‌ ಕುಟುಂಬದ ಸದಸ್ಯ ಉಮೇಶ ಸಿಂಗ್‌ ಠಾಕೂರ್‌ ಹೇಳುತ್ತಾರೆ.

ಪೇಢಾ ತಯಾರಿಕೆಯಲ್ಲಿ 6ನೇ ತಲೆಮಾರು...‘ಪೇಢಾಗೂ ನಮ್ಮ ಠಾಕೂರ್‌ ಕುಟುಂಬಕ್ಕೂ ಆರು ತಲೆಮಾರುಗಳ ನಂಟಿದೆ. ಪೇಢಾದ ಜೊತೆಗೆ ಧಾರವಾಡ ಊರಿನ ಹೆಸರು ಹಾಗೂ ಠಾಕೂರ್‌ ಕುಟುಂಬದ ಹೆಸರು ಗುರುತಿಸಿಕೊಂಡಿರುವುದರ ಹಿಂದೆ ನಮ್ಮ ಕುಟುಂಬದ ‘ಕೈಚಳ’ದ(ಪಾಕ) ಶ್ರಮವಿದೆ. ನಮ್ಮ ಕುಟುಂಬ ತಯಾರಿಸುತ್ತಿದ್ದ ಪೇಢಾ ವಿಶಿಷ್ಟ ಸ್ವಾದ ಹಾಗೂ ರುಚಿಯಿಂದಾಗಿ ವರ್ಷಾಂತರಗಳಲ್ಲಿ ‘ಧಾರವಾಡ ಪೇಢೆ’ ಆಗಿ ಗುರುತಿಸಿಕೊಂಡಿತು. ನಮ್ಮ ಕುಟುಂಬದ ಪೂರ್ವಜರು ಆರಂಭಿಸಿದ ಈ ಪೇಢಾ ತಯಾರಿಕೆಯಲ್ಲಿ ನಮ್ಮದೀಗ ಆರನೇ ತಲೆಮಾರು’ ಎಂದು ಬಾಬುಸಿಂಗ್‌ ಠಾಕೂರ್‌ ಕುಟುಂಬದ ಉಮೇಶಸಿಂಗ್‌ ಠಾಕೂರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಧಾರವಾಡದ ಲೈನ್‌ ಬಜಾರ್‌ನಲ್ಲಿ ನಾವು ಈಗಲೂ ಪೇಢಾ ಮಾರುತ್ತೇವೆ. ಬೇಡಿಕೆ ಸಾಕಷ್ಟಿದ್ದರೂ, 10–15 ವರ್ಷಗಳ ಹಿಂದಿನವರೆಗೂ ನಾವು ಪೇಢಾವನ್ನು ಸೀಮಿತ ಪ್ರಮಾಣದಲ್ಲಿ ತಯಾರಿಸಿ ಮಾರುತ್ತಿದ್ದೆವು. ನಿತ್ಯ ಬೆಳಿಗ್ಗೆ 9ರಿಂದ 10 ಗಂಟೆ ನಡುವಣ ಅವಧಿಯಲ್ಲಷ್ಟೇ ವ್ಯಾಪಾರ. ಈಗಿನಂತೆ ಪ್ಯಾಕ್‌ ಕೂಡ ಮಾಡುತ್ತಿರಲಿಲ್ಲ. ಪರಾತ್‌ನಲ್ಲಿ ಇಟ್ಟು ವ್ಯಾಪಾರ ನಡೆಸುತ್ತಿದ್ದೆವು’.

‘ಅಷ್ಟೋತ್ತಿಗೆ, ಧಾರವಾಡ ಪೇಢಾ ಹಲವರಿಗೆ ವ್ಯಾಪಾರದ ಸರಕಾಗಿತ್ತು. ಆಗಲೂ, ನಮ್ಮ ಕುಟುಂಬದವರ ಅಭಿಪ್ರಾಯವೇ ಬೇರೆಯೇ ಆಗಿತ್ತು. ಧಾರವಾಡ ಪೇಢಾ ಎಂದರೆ ಜನರು ಧಾರವಾಡದ ನಮ್ಮ ಅಂಗಡಿಗೇ ಬಂದು ಕೊಂಡು ಒಯ್ಯುವ ಪೇಢಾ. ಅದು ಬೇರೆಡೆಗೆ ಸಿಕ್ಕರೆ, ಅದು ಧಾರವಾಡ ಪೇಢಾ ಹೇಗಾಗುತ್ತದೆ? ಅದರ ಮೌಲ್ಯಕ್ಕೆ ಕಂದುಂಟಾಗುತ್ತದೆ’ ಎನ್ನುತ್ತಿದ್ದರು. ಎಲ್ಲಡೆ ಪೇಢಾ ಸಿಗುತ್ತಿದ್ದರೂ, ಧಾರವಾಡದ ಲೈನ್‌ ಬಜಾರ್‌ನ ನಮ್ಮ ಅಂಗಡಿ ಎದುರು ಜನರು ಸಾಲುಗಟ್ಟುತ್ತಿದ್ದರು’ ಎಂದು ಉಮೇಶಸಿಂಗ್‌ ನೆನಪಿಸಿಕೊಳ್ಳುತ್ತಾರೆ.

‘ಗ್ರಾಹಕರ ಒತ್ತಾಸೆ ಹಾಗೂ ಜನರಿಗೆ ಅಸಲಿ ಪೇಢೆಯ ಸ್ವಾದ ತಲುಪಿಸಲು ಅಂತಿಮವಾಗಿ ನಾವೂ ಫ್ರಾಂಚೈಸಿಗಳನ್ನು ಆರಂಭಿಸಬೇಕಾಯಿತು. ಅದರ ಫಲವಾಗಿ ಹುಬ್ಬಳ್ಳಿಯ ಹಳೇ ಬಸ್‌ ನಿಲ್ದಾಣದ ಬಳಿ ಮೊದಲ ಅಂಗಡಿ ಶುರುಮಾಡಿದೆವು. ಇದೀಗ ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸುಮಾರು 20 ಫ್ರಾಂಚೈಸಿಗಳನ್ನು ಹೊಂದಿದ್ದೇವೆ. ಇದೀಗ ನಿತ್ಯ 380 ಕೆ.ಜಿಯಷ್ಟು ಪೇಢೆ ತಯಾರಿಸುತ್ತೇವೆ. ಇದೀಗ ವ್ಯಾಪಾರ ವೃದ್ಧಿಗೊಂಡಿದೆ, ಜೊತೆಗೆ ಜನರಿಗೆ ಓರಿಜಿನಲ್‌(ಅಸಲಿ) ಧಾರವಾಡ ಪೇಢೆ ನೀಡುತ್ತಿರುವ ತೃಪ್ತಿಯೂ ಇದೆ’ ಎಂದರು.

‘‌ಪೇಢಾ ತಯಾರಿಕೆಯಲ್ಲಿ ತಲೆಮಾರುಗಳಿಂದ ಬಂದ ಸ್ವಾದವನ್ನು ಈಗಲೂ ಉಳಿಸಿಕೊಂಡಿದ್ದೇವೆ. ಕಚ್ಚಾ ಪದಾರ್ಥಗಳ ಗುಣಮಟ್ಟದ ವ್ಯತ್ಯಾಸದ (ಮೊದಲಿಗೆ ಸಿಗುತ್ತಿದ್ದ ಎಮ್ಮೆಹಾಲಿನ ಗುಣಮಟ್ಟ ಇದೀಗ ಸಿಗುವುದೇ ಇಲ್ಲ. ಸಿಕ್ಕರೂ ದೊಡ್ಡ ಪ್ರಮಾಣದಲ್ಲಿ ಸಿಗಲಾರದು) ಫಲವಾಗಿ ಹಲವು ದಶಕಗಳಲ್ಲಿ ಸ್ವಾದದಲ್ಲಿ ಕೆಲ ಅಂಶ ಬದಲಾವಣೆ ಆಗಿರಬಹುದಷ್ಟೆ. ಅದನ್ನು ಹೊರತು ಪಡಿಸಿ ಶತಮಾನಗಳ ಹಿಂದಿನ ವಿಧಾನದಲ್ಲೇ ಈಗಲೂ ‍ಪೇಢೆ ಸಿದ್ಧಗೊಳಿಸುತ್ತೇವೆ. ಅದೇ ಸ್ವಾದ, ಗುಣಮಟ್ಟವನ್ನೂ ಇಂದಿಗೂ ಉಳಿಸಿಕೊಂಡಿದ್ದೇವೆ’ ಎಂದು ಉಮೇಶಸಿಂಗ್‌ ನುಡಿದರು.

ಮೂಲೆ–ಮೂಲೆಗೂ ತಲುಪಿಸಿದ ಮಿಶ್ರಾ:ಧಾರವಾಡ ಪೇಢೆ ಖ್ಯಾತಿಗೆ ಪಂಡಿತ್ ಅವಧ್‌ಬಿಹಾರಿ ಮಿಶ್ರಾ ಅವರ ಕುಟುಂಬ ಕೊಡುಗೆಯೂ ದೊಡ್ಡದಿದೆ. ಉತ್ತರ ಪ್ರದೇಶದ ಗೌರಿಗಂಜನಿಂದ ಧಾರವಾಡಕ್ಕೆ ವಲಸೆ ಬಂದ ಪಂಡಿತ್ ಅವಧ್‌ಬಿಹಾರಿ ಮಿಶ್ರಾ ಅವರು ಲೈನ್‌ಬಜಾರ್‌ನಲ್ಲಿ 1933ರಲ್ಲಿ ಸಿಹಿ ತಿನಿಸುಗಳ ವ್ಯಾಪಾರದಲ್ಲಿ ತೊಡಗಿದರು. ಅದಾಗಲೇ ಹೆಸರು ಮಾಡಿದ್ದ ಪೇಢೆಯೂ ಅವರ ಖಾದ್ಯಗಳ ಪಟ್ಟಿ ಸೇರಿತು.

ಪೇಢೆಗೆ ತಯಾರಿಕೆಗೆ ಒತ್ತು ನೀಡಿದ ಮಿಶ್ರಾ ಕುಟುಂಬ ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ಉತ್ಪಾದನೆ ಹೆಚ್ಚಿಸುತ್ತ ಹೋಯಿತು. 1970ರ ಹೊತ್ತಿಗೆ ಅವಧ್‌ಬಿಹಾರಿ ಅವರ ಮಗ ಗಣೇಶ ಮಿಶ್ರಾ ಈ ವ್ಯಾಪಾರವನ್ನು ಹುಬ್ಬಳ್ಳಿಗೆ ವಿಸ್ತರಿಸಿದರು. 1983ರಲ್ಲಿ ಗಣೇಶ ಅವರ ಮಗ ಸಂಜಯ ಮಿಶ್ರಾ ಅವರೂ ಈ ವ್ಯಾಪಾರದಲ್ಲಿ ಜೊತೆಯಾದರು. ಇಬ್ಬರೂ ಸೇರಿ ಧಾರವಾಡದ ಕ್ಯಾರಕೊಪ್ಪದಲ್ಲಿ ‘ಧಾರವಾಡ ಮಿಶ್ರಾ ಪೇಢಾ ಮತ್ತು ಆಹಾರ ಸಂಸ್ಕರಣಾ ಕೈಗಾರಿಕೆ’ ಸ್ಥಾಪಿಸಿದರು. ಅಲ್ಲಿಂದ ತಂದೆ– ಮಗ ಧಾರವಾಡ ಪೇಢೆಯನ್ನು ದೊಡ್ಡ ಮಟ್ಟದಲ್ಲಿ ಉತ್ಪಾದಿಸಿ, ಅದಕ್ಕೆ ಮಾರುಕಟ್ಟೆ ಕಂಡುಕೊಂಡಿದ್ದಾರೆ. ರಾಜ್ಯ ಮಾತ್ರವಲ್ಲದೇ ನೆರೆಯ ಗೋವಾ ಹಾಗೂ ಮಹಾರಾಷ್ಟ್ರದಲ್ಲೂ ವ್ಯಾಪಾರ ವಿಸ್ತರಿಸಿದ್ದಾರೆ.

‘ಪೇಢಾ ತಯಾರಿಕೆಯಲ್ಲಿ ನಮ್ಮದು ಮೂರನೇ ತಲೆಮಾರು. ಮೊದಲಿನಿಂದಲೂ ಧಾರವಾಡ ಪೇಢೆಗೆ ಇದ್ದ ಬೇಡಿಕೆಯನ್ನು ಅರಿತು ಸೂಕ್ತ ಮಾರುಕಟ್ಟೆಯನ್ನು ವಿಸ್ತರಿಸುತ್ತ ಬಂದಿದ್ದೇವೆ. ಇದೀಗ 130ಕ್ಕೂ ಹೆಚ್ಚು ಫ್ರಾಂಚೈಸಿಗಳಲ್ಲಿ ನಮ್ಮ ಪೇಢಾ ದೊರೆಯುತ್ತದೆ. ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ನಿತ್ಯ 1,200ರಿಂದ 2,000 ಕೆ.ಜಿಗಳಷ್ಟು ಪೇಢೆ ತಯಾರಿಸುತ್ತೇವೆ. 2018–19ನೇ ಆರ್ಥಿಕ ವರ್ಷದಲ್ಲಿ ನಾವು 6.40 ಲಕ್ಷ ಕೆ.ಜಿಗಳಷ್ಟು ಪೇಢೆ ಮಾರಾಟ ಮಾಡಿದ್ದು, ₹20.10 ಕೋಟಿ ವಹಿವಾಟು ನಡೆಸಿದ್ದೇವೆ’ ಎಂದು ‘ಧಾರವಾಡ ಮಿಶ್ರಾ ಪೇಢಾ ಮತ್ತು ಆಹಾರ ಸಂಸ್ಕರಣಾ ಕೈಗಾರಿಕೆ’ಯ ಸಹ ಸಂಸ್ಥಾಪಕ ಸಂಜಯ ಮಿಶ್ರಾ ಹೇಳುತ್ತಾರೆ.

‘ನಮ್ಮ ತಂದೆಯವರು ಏಳು ಜನ ಸಹೋದರರು. ಅವರಲ್ಲಿ ಬಹುತೇಕರು ಪೇಢಾ ತಯಾರಿಸುತ್ತಿದ್ದಾರೆ. ಹೀಗಾಗಿ ಗ್ರಾಹಕರಿಗೆ ಗುಣಮಟ್ಟ ಹಾಗೂ ಹೆಸರಿನ ಗೊಂದಲ ಆಗಿತ್ತು. ಹೀಗಾಗಿ ನಾವು ಕೆಲವು ವರ್ಷಗಳ ಹಿಂದೆ ಮಿಶ್ರಾ ಪೇಢಾ ಅನ್ನು ‘ಬಿಗ್‌ಮಿಶ್ರಾ ಪೇಢಾ’ ಎಂದು ಬ್ರ್ಯಾಂಡ್‌ ಮಾಡಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.