ADVERTISEMENT

ನವಲಗುಂದ | ಅವ್ಯವಹಾರ ಆರೋಪ: ಅಧಿಕಾರಿಗಳಿಗೆ ಘೇರಾವು ಹಾಕಿದ ಪ್ರತಿಭಟನಕಾರರು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 15:49 IST
Last Updated 11 ಸೆಪ್ಟೆಂಬರ್ 2024, 15:49 IST
ನವಲಗುಂದ ತಾಲ್ಲೂಕಿನ ಅಳಗವಾಡಿ ಸಹಕಾರ ಸಂಘದಲ್ಲಿ ನಡೆದ ಅವ್ಯವಹಾರದ ತನಿಖೆ ನಡೆಸುವುದಾಗಿ ಅಧಿಕಾರಿಗಳು ಪ್ರತಿಭಟನಾನಿರತ ಹಿತರಕ್ಷಣಾ ಸಮಿತಿಯವರಿಗೆ ಲಿಖಿತ ಭರವಸೆ ನೀಡಿದರು
ನವಲಗುಂದ ತಾಲ್ಲೂಕಿನ ಅಳಗವಾಡಿ ಸಹಕಾರ ಸಂಘದಲ್ಲಿ ನಡೆದ ಅವ್ಯವಹಾರದ ತನಿಖೆ ನಡೆಸುವುದಾಗಿ ಅಧಿಕಾರಿಗಳು ಪ್ರತಿಭಟನಾನಿರತ ಹಿತರಕ್ಷಣಾ ಸಮಿತಿಯವರಿಗೆ ಲಿಖಿತ ಭರವಸೆ ನೀಡಿದರು   

ನವಲಗುಂದ: ‘ತಾಲ್ಲೂಕಿನ ಅಳಗವಾಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸುಮಾರು ₹3 ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿದೆ. ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮದ ಹಿತರಕ್ಷಣಾ ಸಮಿತಿ ವತಿಯಿಂದ ಸಹಕಾರ ಸಂಘದ ಆವರಣದಲ್ಲಿ ಬುಧವಾರ ಧರಣಿ ನಡೆಸಿದರು.

ಸ್ಥಳಕ್ಕೆ ಭೇಟಿ ನೀಡಿದ ಕೆಸಿಸಿ ಬ್ಯಾಂಕ್ ಹಾಗೂ ಸಹಕಾರ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವವರೆಗೆ ಬಿಡುವುದಿಲ್ಲ ಎಂದು ಘೇರಾವು ಹಾಕಿದರು.

ತನಿಖೆ ನಡೆಸಿ ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರೂ ಬಗ್ಗದ ಗ್ರಾಮಸ್ಥರು, ‘9 ವರ್ಷಗಳಿಂದ ರೈತರಿಗೆ ಯಾವುದೇ ಸೌಲಭ್ಯ ದೊರೆತಿಲ್ಲ. ಅವ್ಯವಹಾರದ ಕುರಿತು ಲೆಕ್ಕ ಪರಿಶೋಧಕರು ವರದಿ ನೀಡಿದ್ದರೂ ಕ್ರಮ ಗೈಕೊಂಡಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

ADVERTISEMENT

ನವಲಗುಂದ ಠಾಣೆಯ ಸಿಪಿಐ ರವಿ ಕಪ್ಪತ್ತನವರ ಪ್ರತಿಭಟನಕಾರರ ಮನವೊಲಿಸಿ ಕೆಸಿಸಿ ಬ್ಯಾಂಕ್ ಹಾಗೂ ಸಹಕಾರ ಸಂಘದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

‘5 ತಿಂಗಳೊಳಗೆ ಈ ಹಿಂದಿನ 7 ವರ್ಷಗಳ ಲೆಕ್ಕ ಪರಿಶೋಧನಾ ವರದಿಯನ್ನು ಮರು ಪರಿಶೀಲಿಸಿ ಕ್ರಮ ಜರುಗಿಸಲಾಗುವುದು. ಇನ್ನುಳಿದ ಎರಡು ವರ್ಷಗಳ ಲೆಕ್ಕ ಪರಿಶೋಧನಾ ವರದಿ ಕುರಿತಾಗಿ ನ್ಯಾಯಾಲಯದಲ್ಲಿರುವ ಪ್ರಕರಣ ಇತ್ಯರ್ಥಗೊಂಡ ಬಳಿಕ ಕ್ರಮ ಜರುಗಿಸಲಾಗುವುದು’ ಎಂದು ಸಹಕಾರ ಇಲಾಖೆ ಅಧಿಕಾರಿಗಳು ಭರವಸೆ ನೀಡಿದರು.

ಸಂಘದ ಅಭಿವೃದ್ಧಿಗಾಗಿ ಸಹಕಾರ ನೀಡುವುದಾಗಿ ಲಿಖಿತ ಭರವಸೆ ನೀಡಿದ ನಂತರ ಧರಣಿ ಅಂತ್ಯಗೊಂಡಿತು.

ಎಸ್ಐ ಜನಾರ್ಧನ ಭಟ್ರಹಳ್ಳಿ, ಹಿತರಕ್ಷಣಾ ಸಮಿತಿ ಅಧ್ಯಕ್ಷ ಫಕ್ಕೀರಗೌಡ ಬಮ್ಮನಗೌಡ್ರ, ರಘುನಾಥ ನಡುವಿನಮನಿ, ಸೋಮಶೇಖರ ಈರೇಶನವರು, ವಿಠಲ ತಿರ್ಲಾಪೂರ, ಶಿವಪ್ಪ ನಾಯ್ಕರ, ವಿಠಲ ಒಕ್ಕುಂದ, ಮಲ್ಲನಗೌಡ ತಡಹಾಳ, ಬಾಬು ಜೈನರ, ನಾಗಪ್ಪ ಯಾವಗಲ್, ಗುರಪ್ಪ ಈರೇಶನವರ, ರಮೇಶ ನಾಗಮ್ಮನವರ, ಬಿ.ಕೆ.ಕುಲಕರ್ಣಿ, ಎಂ.ಎಸ್. ಪಾಟೀಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.