ಧಾರವಾಡ: ಡಾ. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ನೀಡಲಾಗುವ ಅಂಬಿಕಾತನಯದತ್ತ ಪ್ರಶಸ್ತಿಯು ಹಿರಿಯ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಅವರಿಗೆ ಲಭಿಸಿದೆ.
ಈ ಪ್ರಶಸ್ತಿಯು ₹1ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಈ ವಿಷಯವನ್ನು ಶನಿವಾರ ತಿಳಿಸಿದ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ, ‘ಡಾ. ಗುರುಲಿಂಗ ಕಾಪಸೆ ಅವರ ಅಧ್ಯಕ್ಷತೆಯ ಸಮಿತಿಯು 2019ನೇ ಸಾಲಿನ ಪ್ರಶಸ್ತಿಗೆ ಡಾ. ಭೈರಪ್ಪ ಅವರ ಹೆಸರನ್ನು ಅಂತಿಮಗೊಳಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಭೈರಪ್ಪ ಅವರೊಂದಿಗೆ ಸಾಹಿತ್ಯ ಸಂವಾದ ಜ. 31ರಂದು ಇಲ್ಲಿನ ಸಾಧನಕೇರಿಯ ಬೇಂದ್ರೆ ಭವನದಲ್ಲಿ ಜರುಗಲಿದೆ’ ಎಂದರು.
‘ಎಲ್ಲಾ ಟ್ರಸ್ಟ್‌ಗಳ ಮೂಲಕ ನೀಡಲಾಗುವ ಪ್ರಶಸ್ತಿ ಮೊತ್ತವನ್ನು ಸರ್ಕಾರ ₹10ಸಾವಿರಕ್ಕೆ ಇಳಿಸಿದೆ. ಟ್ರಸ್ಟ್ ಆರಂಭದಲ್ಲಿಬೇಂದ್ರೆ ಕುಟುಂಬದವರು ಹಾಗೂ ಸ್ನೇಹಿತರು ಸೇರಿ ನೀಡಿದ್ದ ₹1.24ಲಕ್ಷ ಇಡಿಗಂಟಿಗೆ ಬಂದ ಬಡ್ಡಿ ಮತ್ತು ಸರ್ಕಾರ ನೀಡುವ ಹಣ ಒಟ್ಟುಗೂಡಿಸಿ ಹಿಂದಿನಂತೆಯೇ ₹1ಲಕ್ಷಪ್ರಶಸ್ತಿ ಮೊತ್ತ ನೀಡಲಾಗುತ್ತಿದೆ’ ಎಂದರು.
‘ಕುವೆಂಪು ಅವರ ಜನ್ಮದಿನವನ್ನು ‘ವಿಶ್ವ ಮಾನವ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ಹಾಗೆಯೇ ವರಕವಿ ಬೇಂದ್ರೆ ಅವರ 125ನೇ ಜನ್ಮದಿನ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಅವರ ಜನ್ಮದಿನವನ್ನು ‘ಕವಿ ದಿನ’ ಎಂದು ಘೋಷಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದು ಡಾ. ಹಿರೇಮಠ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ, ಟ್ರಸ್ಟ್ ಸದಸ್ಯ ರಾಜೇಂದ್ರ ನಾಯಕ, ಪ್ರಕಾಶ ಬಾಳಿಕಾಯಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.