ADVERTISEMENT

ಅಂಜಲಿ ಕೊಲೆ ಪ್ರಕರಣ; ಮುಂದುವರಿದ ವಿಚಾರಣೆ

ಆರೋಪಿ ಗಿರೀಶ ಪರ ವಕಾಲತು ನಡೆಸದಿರಲು ವಕೀಲರ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 26 ಮೇ 2024, 15:49 IST
Last Updated 26 ಮೇ 2024, 15:49 IST
   

ಹುಬ್ಬಳ್ಳಿ: ಇಲ್ಲಿಯ ವೀರಾಪುರ ಓಣಿಯ ಯುವತಿ ಅಂಜಲಿ ಕೊಲೆ ಪ್ರಕರಣದ ಆರೋಪಿ ಗಿರೀಶ ಸಾವಂತನ ವಿಚಾರಣೆ ಮುಂದುವರಿದಿದೆ. ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ಸಿಐಡಿ ಅಧಿಕಾರಿಗಳು ಬೆಳಿಗ್ಗೆಯಿಂದ ಸಂಜೆವರೆಗೂ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ಆರೋಪಿ ಹೇಳಿಕೆ ಬದಲಿಸುತ್ತಿರುವುದರಿಂದ ಸಿಐಡಿ ಪೊಲೀಸರಿಗೆ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಕೃತ್ಯಕ್ಕೆ ಬಳಸಿದ್ದ ಚಾಕು ಸಹ ಪತ್ತೆಯಾಗದಿರುವುದು ಸಾಕ್ಷ್ಯದ ಕೊರತೆ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಮತ್ತಷ್ಟು ಆಳದ ತನಿಖೆ ನಡೆಸಲು ಮುಂದಾಗಿರುವ ಪೊಲೀಸರು, ಮತ್ತೊಮ್ಮೆ ಆರೋಪಿಯ ಸ್ನೇಹಿತರ, ಸಂಬಂಧಿಕರ ಹಾಗೂ ಪೋಷಕರನ್ನು ಠಾಣೆಗೆ ಕರೆಸಿ ಇನ್ನಷ್ಟು ಮಾಹಿತಿ ಸಂಗ್ರಹಿಸಲು ಸಿದ್ಧತೆ ನಡೆಸಿದ್ದಾರೆ. ಅಂದು ಆರೋಪಿ ಯಾರ ಆಟೊದಲ್ಲಿ ಬಂದಿದ್ದ ಎನ್ನುವ ಜಾಡು ಹಿಡಿದು, ಆಟೊ ಚಾಲಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಮೇ 15ರಂದು ಬೆಳಿಗ್ಗೆ 5.10ಕ್ಕೆ ಅಂಜಲಿ ಮನೆಗೆ ಆರೋಪಿ ಗಿರೀಶ ಆಟೊದಲ್ಲಿ ಬಂದು ಕೊಲೆ ಮಾಡಿದ್ದ. ಆಟೊ ಚಾಲಕ ಲೋಹಿಯಾ ನಗರದವರಾಗಿದ್ದು, ಹೊಸ ಬಸ್‌ ನಿಲ್ದಾಣದಿಂದ ಆಟೊ ಬಾಡಿಗೆ ಓಡಿಸುತ್ತಿದ್ದರು. ಅಲ್ಲಿಂದ ಬೆಳಿಗ್ಗೆ 4.45ರ ವೇಳೆ ಆಟೊ ಬಾಡಿಗೆ ಮಾಡಿಕೊಂಡು ವೀರಾಪುರ ಓಣಿಗೆ ಬಂದಿದ್ದ. ಚಾಲಕ ಅವನನ್ನು ಅಂಜಲಿ ಮನೆ ಬಳಿ ಬಿಟ್ಟು ತೆರಳಿದ್ದರು. ಹೊಸ ಬಸ್‌ ನಿಲ್ದಾಣದಿಂದ ವೀರಾಪುರ ಓಣಿಯ ಅಂಜಲಿ ಮನೆವರೆಗೆ ಲಭ್ಯವಿರುವ ಎಲ್ಲ ಸಿಸಿ ಟಿವಿ ಕ್ಯಾಮೆರಾಗಳನ್ನು ಸಿಐಡಿ ಪೊಲೀಸರು ಪರಿಶೀಲಿಸಿದ್ದಾರೆ.

ADVERTISEMENT

ಆಟೊ ಚಾಲಕರನ್ನು ಬೆಂಡಿಗೇರಿ ಠಾಣೆಗೆ ಕರೆಸಿ ವಿಚಾರಣೆ ನಡೆಸಿರುವ ಪೊಲೀಸರು, ಆರೋಪಿ ಜೊತೆ ಇರುವ ಸಂಬಂಧದ ಕುರಿತು ಪ್ರಶ್ನಿಸಿದ್ದಾರೆ. ಆದರೆ, ಅವರಿಗೂ ಆರೋಪಿಗೂ ಯಾವುದೇ ಸಂಬಂಧವಿಲ್ಲದಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ತನಿಖೆಗೆ ಸಹಕರಿಸುವಂತೆ ಆಟೊ ಚಾಲಕರಿಗೆ ಪೊಲೀಸರು ತಿಳಿಸಿದ್ದು, ಅವರಿಂದ ಮುಚ್ಚಳಿಕೆ ಸಹ ಬರೆದುಕೊಂಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬೇರೊಂದು ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಗಿರೀಶ ವಿರುದ್ಧ ಬೆಂಡಿಗೇರಿ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಅಪ್ರಾಪ್ತೆಯಿಂದ ಹಣ ಹಾಗೂ ಚಿನ್ನಾಭರಣಗಳನ್ನು ಪಡೆದಿದ್ದು, ಅದನ್ನು ವಾಪಸ್‌ ನೀಡದೆ ವಂಚಿಸಿದ ಪ್ರಕರಣ ಅದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಶನಿವಾರ ದೂರುದಾರ ಮಹಿಳೆ ಹಾಗೂ ಚಿನ್ನಾಭರಣ ಕೊಡುವ ಸಂದರ್ಭದಲ್ಲಿದ್ದ ಇಬ್ಬರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ.

ವಕಾಲತಿಗೆ ಬರದಿರಲು ತೀರ್ಮಾನ: ಆರೋಪಿ ಗಿರೀಶ ಪರ ವಕಾಲತು ವಹಿಸಲು ವಕೀಲರು ಮುಂದೆ ಬರದಿರಲು ನಿರ್ಧರಿಸಿದ್ದಾರೆ. ಸಮಾಜ ಘಾತುಕ ಶಕ್ತಿಗಳ ಪರವಾಗಿ ವಾದ ಮಂಡಿಸಲು ಮುಂದಾದರೆ, ಅಂತಹ ಮನಸ್ಥಿತಿಯವರಿಗೆ ಪ್ರಚೋದನೆ ನೀಡಿದಂತಾಗುತ್ತದೆ ಎನ್ನುತ್ತಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹುಬ್ಬಳ್ಳಿ ವಕೀಲರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಅಶೋಕ ಅಣ್ವೇಕರ, ‘ಅಂಜಲಿ ಕೊಲೆ ಆರೋಪಿ ಪರ ಯಾರೂ ವಕಲಾತು ವಹಿಸಬಾರದು ಎಂದು ನಾವು ಈಗಾಗಲೇ ಮೌಖಿಕವಾಗಿ ಚರ್ಚಿಸಿ ತೀರ್ಮಾನ ತೆಗೆದುಕೊಂಡಿದ್ದೇವೆ. ಅಂತವರ ಪರ ನಾವು ವಾದ ಮಂಡಿಸಿದರೆ, ಕೊಲೆ ಮಾಡಿದರು ಸಹ ವಕೀಲರು ಸಹಾಯಕ್ಕೆ ಬರುತ್ತಾರೆ ಎನ್ನುವ ಹುಂಬುತನ ಪ್ರದರ್ಶಿಸಬಹುದು. ಒಂದು ವೇಳೆ ಯಾವ ವಕೀಲರು ಅವನ ಪರ ವಾದ ಮಂಡಿಸದಿದ್ದರೆ, ಕೋರ್ಟ್‌ ಮೂಲಕ ಕಾನೂನು ಸೇವಾ ಪ್ರಾಧಿಕಾರ ಒಬ್ಬ ವಕೀಲರನ್ನು ನೇಮಕ ಮಾಡುತ್ತದೆ. ಚಾರ್ಚ್‌ಶೀಟ್‌ ಸಲ್ಲಿಕೆಯಾದ ನಂತರ ವಾದ–ಪ್ರತಿವಾದ ನಡೆಸಲು ವಕೀಲರು ಬೇಕೇ ಬೇಕಾಗುತ್ತದೆ’ ಎಂದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.