ಅಣ್ಣಿಗೇರಿ: ‘ಅಣ್ಣಿಗೇರಿಯಲ್ಲಿ ಪಂಪ ಪ್ರಶಸ್ತಿ ನೀಡಲು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ. ಆದಷ್ಟು ಬೇಗ ತಾಲ್ಲೂಕಿನಲ್ಲಿ ಪಂಪ ಪ್ರಶಸ್ತಿ ನೀಡಲು ಪ್ರಾಮಾಣಿಕವಾಗಿ ಯತ್ನಿಸುವೆ’ ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಭರವಸೆ ನೀಡಿದರು.
ತಾಲ್ಲೂಕಿನ ಶಲವಡಿ ಗ್ರಾಮದ ವರಸಿದ್ದಿ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರ ನಡೆದ ಅಣ್ಣಿಗೇರಿ ತಾಲ್ಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.
‘ತಾಲ್ಲೂಕಿನಲ್ಲಿ ನೂತನ ಸಾಹಿತ್ಯ ಭವನ ನಿರ್ಮಾಣಕ್ಕೆ ಜಾಗ ಗುರುತಿಸಿ ಕೊಟ್ಟರೆ, ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಆರ್ಥಿಕ ನೆರವು ಒದಗಿಸಲಾಗುವುದು’ ಎಂದರು.
ಸಮ್ಮೇಳನ ಅಧ್ಯಕ್ಷರ ಮೆರವಣಿಗೆಗೆ ಶಲವಡಿ ವಿರಕ್ತಮಠದ ಗುರುಶಾಂತ ಸ್ವಾಮೀಜಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಸ್ಥಳೀಯ ಕೆಪಿಎಸ್ ಶಾಲೆಯ 108 ವಿದ್ಯಾರ್ಥಿನಿಯರು ಪೂರ್ಣಕುಂಭ ಹೊತ್ತು ಸಾಗಿದ್ದು ವಿಶೇಷವಾಗಿತ್ತು. ಡೊಳ್ಳಿನ ಕುಣಿತ, ಜಗ್ಗಲಗಿ, ಕರಡಿ ಮಜಲು, ಕೋಲಾಟ, ಗೊಂಬೆ ಕುಣಿತ ಸೇರಿದಂತೆ ಇತರೆ ರೂಪಕಗಳು ಮೆರವಣಿಗೆ ಮೆರುಗು ಹೆಚ್ಚಿಸಿದ್ದವು.
ಮೊದಲ ಮಹಿಳಾ ಗೋಷ್ಠಿಯಲ್ಲಿ ಮಹಿಳಾ ಜಾನಪದ ಕುರಿತು ಡಾ.ದ್ರಾಕ್ಷಾಯಣಿ ಉಡಕೇರಿ ವಿಷಯ ಮಂಡಿಸಿದರು. ಡಾ.ಸುಧಾ ಕೌಜಗೇರಿ ಅಧ್ಯಕ್ಷತೆ ವಹಿಸಿದ್ದರು.
2ನೇ ಗೋಷ್ಠಿಯಲ್ಲಿ ಕೌಶಲಾಧಾರಿತ ಗ್ರಾಮೀಣಾಭಿವೃದ್ದಿ ವಿಷಯದ ಕುರಿತು ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಸವಿಸ್ತಾರವಾಗಿ ಮಾತನಾಡಿದರು. ನಿವೃತ್ತ ಶಿಕ್ಷಕ ಎಂ.ಎಸ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. 3ನೇ ಗೋಷ್ಠಿಯಾದ ಕವಿಗೋಷ್ಠಿಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ಕವಿಗಳು ಕವನ ವಾಚಿಸಿದರು. ಡಾ.ಪ್ರಕಾಶ ಹೂಗಾರ ಅಧ್ಯಕ್ಷತೆ ವಹಿಸಿದ್ದರು. ಇದಾದ ಬಳಿಕ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ, ಡಾ.ಎ.ಸಿ.ವಾಲಿ ಮಹಾರಾಜ, ಅಡ್ನೂರಿನ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ವೀರಪ್ಪ ಜಡಿ, ಕೆ.ಎಸ್.ಕೌಜಲಗಿ, ವಿನೋದ ಅಸೂಟಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ರವಿರಾಜ ವೆರ್ಣೆಕರ, ನಿಕಟಪೂರ್ವ ಅಧ್ಯಕ್ಷ ಪ್ರಕಾಶ ಅಂಗಡಿ, ಬಿಇಒ ಶಿವಾನಂದ ಮಲ್ಲಾಡ, ಜೆ.ಕೆ.ಅಣ್ಣೀಗೇರಿ, ಸಿದ್ಧನಗೌಡ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.