ಹುಬ್ಬಳ್ಳಿ: ‘ಕೇಂದ್ರ ಸರ್ಕಾರವು ಮಹದಾಯಿ ಯೋಜನೆಯನ್ನು ಶೀಘ್ರ ಜಾರಿಗೊಳಿಸಬೇಕು ಹಾಗೂ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಬೇಕು’ ಎಂದು ರೈತ ಹೋರಾಟಗಾರ ವೀರೇಶ ಸೊಬರದಮಠ ಒತ್ತಾಯಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹದಾಯಿ ಮತ್ತು ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ಪ್ರಧಾನಮಂತ್ರಿ, ರಾಷ್ಟ್ರಪತಿ, ವಿರೋಧ ಪಕ್ಷದ ನಾಯಕರ ಕಚೇರಿಗೆ, ರಾಜ್ಯದ 28 ಸಂಸದರಿಗೆ ಹಾಗೂ ದೆಹಲಿಯಲ್ಲಿ ಈಚೆಗೆ ಮನವಿ ಸಲ್ಲಿಸಲಾಗಿದೆ. ಈ ಯೋಜನೆ ಜಾರಿಗೆ ಕೇಂದ್ರ ಅರಣ್ಯ ಇಲಾಖೆಯ ಅನುಮತಿ ಅಗತ್ಯವಾಗಿರುವುದರಿಂದ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿಯಾಗಿ ಮನವಿಪತ್ರ ನೀಡಲಾಗಿದೆ. ಅವರ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು.
‘ಕಳಸಾ ನಾಲೆಯಿಂದ 1.72 ಟಿ.ಎಂ.ಸಿ ನೀರು ಪಡೆಯಲು ಕೇಂದ್ರ ಅರಣ್ಯ ಇಲಾಖೆ ಹಾಗೂ ಬಂಡೂರಾ ನಾಲೆಯಿಂದ 2.18 ಟಿ.ಎಂ.ಸಿ ನೀರು ಪಡೆಯಲು ವನ್ಯಜೀವಿ ಮತ್ತು ಪರಿಸರ ಇಲಾಖೆ ಅನುಮತಿ ಬೇಕಿದೆ. ರಾಜ್ಯದ ಎಲ್ಲ ಸಂಸದರು ಪರವಾನಗಿ ಕೊಡಿಸಿ ಈ ಯೋಜನೆಗಳ ಶೀಘ್ರ ಜಾರಿಗೆ ಕೆಲಸ ಮಾಡಬೇಕಿದೆ’ ಎಂದು ಆಗ್ರಹಿಸಿದರು.
‘ಕೈಗಾರಿಕೆ, ರಾಷ್ಟ್ರೀಕೃತ ಬ್ಯಾಂಕ್, ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡದೆ ನಿರ್ಲಕ್ಷಿಸಲಾಗುತ್ತಿದೆ. ರಾಜ್ಯದಲ್ಲಿನ ಕೆಲ ಖಾಸಗಿ ಕಂಪನಿಗಳಲ್ಲಿ ಹೊರ ರಾಜ್ಯದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇದರಿಂದ ಕರ್ನಾಟಕದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಉದ್ಯೋಗದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡುವಂತೆ ರಾಜ್ಯ ಸರ್ಕಾರ ಆದೇಶಿಸಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಹೋರಾಟ ನಡೆಸಲಾಗುತ್ತದೆ. ಈ ಬಗ್ಗೆ ಆಗಸ್ಟ್ 1ರಂದು ಹುಬ್ಬಳ್ಳಿಯಲ್ಲಿ 10 ಜಿಲ್ಲೆಗಳ ರೈತ ಮುಖಂಡರು ಸಭೆ ನಡೆಸಲಾಗುವುದು’ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಮಲ್ಲಪ್ಪ ಆಲೇಕರ್, ಗುರು ರಾಯನಗೌಡ, ಮುತ್ತಣ್ಣ ಪಾಟೀಲ, ಗುರುಶಾಂತಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.