ADVERTISEMENT

ಹುಬ್ಬಳ್ಳಿ | ಪ್ರೋತ್ಸಾಹದ ಕೊರತೆ: ಬಣ್ಣ ಕಳೆದುಕೊಂಡ ವೃತ್ತಿ ರಂಗಭೂಮಿ

ನೇಪಥ್ಯೆಕ್ಕೆ ಸರಿಯುತ್ತಿರುವ ಕಲಾವಿದರು

ಸಿದ್ದನಗೌಡ ಪಾಟೀಲ
Published 4 ನವೆಂಬರ್ 2024, 5:31 IST
Last Updated 4 ನವೆಂಬರ್ 2024, 5:31 IST
<div class="paragraphs"><p>ಹುಬ್ಬಳ್ಳಿ ಸುಜಾತಾ ಟಾಕೀಸ್‌ ಬಳಿ ಕಮತಗಿ ಹೊಳೆಹುಚ್ಚೇಶ್ವರ ನಾಟ್ಯಸಂಘದವರು ಹಾಕಿರುವ ರಂಗಸಜ್ಜಿಕೆಯಲ್ಲಿ ಪ್ರದರ್ಶನಗೊಳ್ಳುತ್ತಿರುವ ನಾಟಕವೊಂದರ ದೃಶ್ಯ </p></div>

ಹುಬ್ಬಳ್ಳಿ ಸುಜಾತಾ ಟಾಕೀಸ್‌ ಬಳಿ ಕಮತಗಿ ಹೊಳೆಹುಚ್ಚೇಶ್ವರ ನಾಟ್ಯಸಂಘದವರು ಹಾಕಿರುವ ರಂಗಸಜ್ಜಿಕೆಯಲ್ಲಿ ಪ್ರದರ್ಶನಗೊಳ್ಳುತ್ತಿರುವ ನಾಟಕವೊಂದರ ದೃಶ್ಯ

   

ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಹುಬ್ಬಳ್ಳಿ: ಗಂಡು ಮೆಟ್ಟಿನ ನಾಡು ಹುಬ್ಬಳ್ಳಿ ರಂಗಕಲೆಗೂ ಅಷ್ಟೇ ಪ್ರಸಿದ್ಧಿ. ಇಲ್ಲಿನ ರಂಗ ಕಲಾವಿದರು ರಾಜ್ಯ, ಹೊರ ರಾಜ್ಯದಲ್ಲಿಯೂ ಹೆಸರು ಮಾಡಿದವರು. ಒಂದು ಕಾಲದಲ್ಲಿ ಸಮೃದ್ಧವಾಗಿ ಮೆರೆದಿದ್ದ ರಂಗಭೂಮಿ ಆಧುನಿಕ ಭರಾಟೆಗೆ ಸಿಲುಕಿ ಗುಟುಕು ಜೀವ ಹಿಡಿದಿದೆ.

ADVERTISEMENT

ವೃತ್ತಿ ರಂಗಭೂಮಿ ತನ್ನ ಮೊದಲಿನ ಸುವರ್ಣಯುಗವನ್ನು ಕಳೆದುಕೊಂಡಿದೆ. ಇದಕ್ಕೆ ಕಾರಣ ಹಲವು ಇದ್ದರೂ ಜನರ ಆಸಕ್ತಿಗಳಲ್ಲಿ ಬದಲಾವಣೆ, ಸಾಂಸ್ಕೃತಿಕ ನಾಯಕತ್ವ ಹಾಗೂ ಇಚ್ಛಾಶಕ್ತಿ ಕೊರತೆಯಿಂದ ಶೇ 80ರಷ್ಟು ನಶಿಸಿ ಹೋಗಿದೆ. ವೃತ್ತಿ ರಂಗಭೂಮಿ ಕಾಲವಿದರಿಗೆ ‘ಹುಬ್ಬಳ್ಳಿ’ ಹಾಲಿವುಡ್‌ ಇದ್ದ ಆಗಿತ್ತು. ರಾಜ್ಯದ ಯಾವುದೇ ಕಡೆಗೆ ಸೋತರು ಇಲ್ಲಿಗೆ ಬಂದು ಕ್ಯಾಂಪ್‌ ಹಾಕಿದರೆ ಹೆಸರು, ಹಣ ಮಾಡುತ್ತಿದ್ದ ಕಾಲವೊಂದಿತ್ತು. ಈಗ ಸುಸಜ್ಜಿತ ರಂಗಮಂದಿರಗಳ ಕೊರತೆಯಿಂದಾಗಿ ನಾಟಕ ಪ್ರದರ್ಶನ ಸಾಧ್ಯವಾಗದೆ ಕಲಾವಿದರು ಪರದಾಡುತ್ತಿದ್ದಾರೆ.

ಜಿಲ್ಲೆಯ ರಂಗಭೂಮಿ ಇತಿಹಾಸ: ಅಭಿವಿಜಿತ ಧಾರವಾಡ ಜಿಲ್ಲೆಯ ರಂಗಭೂಮಿ ತನ್ನದೇ ಆದ ವೈಭವವನ್ನು ಹೊಂದಿತ್ತು. ಗದುಗಿನ ಶಾಂತ ಕವಿಗಳು 1877ರಲ್ಲಿ ಆರಂಭಿಸಿದ ಶ್ರೀ ವೀರನಾರಾಯಣ ಕೃಪಾಪೋಷಿತ ನಾಟಕ ಮಂಡಳಿಯಿಂದ ಹಿಡಿದು ಕುಂದಗೋಳ ತಾಲ್ಲೂಕಿನ ಶಿರೂರು ಗ್ರಾಮದ ಬಸವರಾಜ ಬೆಂಗೇರಿ ಅವರ ವಿಶ್ವಭಾರತಿ ರಮ್ಯ ನಾಟಕ ಸಂಘದವರೆಗೆ ಸುಮಾರು 30ಕ್ಕೂ ಹೆಚ್ಚು ನಾಟಕ ಕಂಪೆನಿಗಳು ಜಿಲ್ಲೆಯಲ್ಲಿ ಆಗಿ ಹೋಗಿವೆ.

ಖ್ಯಾತ ಹಿಂದೂಸ್ತಾನಿ ಸಂಗೀತಗಾರ ಬಸವರಾಜ ಮನ್ಸೂರ ಅವರ ಕಲಾ ಪ್ರಕಾಶ ಸಂಗೀತ ನಾಟಕ ಮಂಡಳಿ, ಅರ್ಜುನಸಾ ನಾಕೋಡ ಅವರ ಜಗದಂಬಾ ಸಂಗೀತ ನಾಟಕ ಮಂಡಳಿ, ಗುಡಿಗೇರಿಯ ಎನ್‌.ಬಸವರಾಜ ಅವರ ಸಂಗಮೇಶ್ವರ ನಾಟ್ಯ ಸಂಘ, ಗದುಗಿನಲ್ಲಿ ಪಂಚಾಕ್ಷರಿ ಶಿವಯೋಗಿಗಳು ಆರಂಭಿಸಿದ ಹಾನಗಲ್‌ ಕುಮಾರೇಶ್ವರ ಕೃಪಾ ಪೋಷಿತ ನಾಟಕ ಮಂಡಳಿ ತಮ್ಮದೇ ಆದ ಹೆಸರು ಮಾಡಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಹೆಸರು ಮಾಡಿದ ನಾಟಕ ಕಂಪೆನಿಗಳಾಗಿದ್ದವು.

ಕಲಾ ದಿಗ್ಗಜರಾದ ಗರುಡ ಸದಾಶಿವರಾಯರು, ಶಿರಹಟ್ಟಿ ವೆಂಕೋಬರಾಯರು, ಬಚ್ಚಾಸಾನಿ ದೊಡಮನಿ, ವಾಮನರಾವ ಮಾಸ್ತರ, ಯರಾಶಿ ಭರಮಪ್ಪ, ಪುಟ್ಟರಾಜ ಗವಾಯಿಗಳು ರಂಗಭೂಮಿ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದರು.

ರಂಗಮಂದಿರ ಕೊರತೆ: ಜಿಲ್ಲೆಯಲ್ಲಿ ಅಳಿದುಳಿದ ಕೆಲವೇ ಕೆಲವು ಕಲಾವಿದರು ಕಷ್ಟದಿಂದ ರಂಗಭೂಮಿ ಕ್ಷೇತ್ರವನ್ನು ಜೀವಂತವಾಗಿ ಇಡಲು ಇಂದಿಗೂ ಶ್ರಮಿಸುತ್ತಿದ್ದಾರೆ. ಆದರೆ ದುಬಾರಿ ವೆಚ್ಚದ ಬಾಡಿಗೆ, ಸ್ವತಂತ್ರವಾಗಿ ರಂಗಸಜ್ಜಿಕೆ ಹಾಕಲು ಬೇಕಾಗುವ ಆರ್ಥಿಕ ಸಂಪನ್ಮೂಲವಿಲ್ಲದೆ ಕೈಚೆಲ್ಲಿ ಕುಳಿತಿದ್ದಾರೆ. ಇದರಿಂದ ನಾಟಕ ಮಾಡುವ ಸಾಹಸಕ್ಕೆ ಹೋಗದೆ ಕೊರಗುವಂತೆ ಆಗಿದೆ.

ಹುಬ್ಬಳ್ಳಿ ನಗರದ ಟೌನ್‌ಹಾಲ್‌ ರಂಗಮಂದಿರ ಮಾಡಲು ಸೂಕ್ತವಾದ ವೇದಿಕೆಯಾಗಿದೆ. ವಿಶ್ವೇಶ್ವರ ನಗರದ ಕನ್ನಡ ಭವನ, ಸವಾಯಿ ಗಂಧರ್ವ ಹಾಲ್‌ ದುಬಾರಿಯಾಗಿದೆ. ಬಾಡಿಗೆ ಕೊಟ್ಟರೂ ರಂಗ ಪರಿಕರ, ಧ್ವನಿ ವ್ಯವಸ್ಥೆ, ಮೈಕ್‌, ಲೈಟಿಂಗ್‌ ಬಾಡಿಗೆ ಪಡೆದೇ ಪ್ರದರ್ಶನ ನೀಡಬೇಕಿರುವುದರಿಂದ ಬಡ ಕಲಾವಿದರಿಗೆ ಅದು ಸಾಧ್ಯವಾಗುತ್ತಿಲ್ಲ.

ಈಗಿರುವ ರಂಗಮಂದಿರಗಳು ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತಿವೆ. ಮಹಾನಗರ ಪಾಲಿಕೆ ಅಡಿಯಲ್ಲಿ ಬರುವ ಈ ರಂಗಮಂದಿರಗಳು ಸೂಕ್ತ ನಿರ್ವಹಣೆ ಕೊರತೆ ಇದೆ. ಅಲ್ಲದೆ ಸಲಕರಣೆ ಸೌಲಭ್ಯಗಳು ಕೂಡಾ ಇಲ್ಲ. ಸರ್ಕಾರದ ಮಹತ್ವದ ಕಾರ್ಯಕ್ರಮಗಳು ಇದ್ದರೆ ನಾಟಕ ಪ್ರದರ್ಶನಕ್ಕೆ ಸಭಾಂಗಣ ನೀಡುವುದಿಲ್ಲ. ಈ ಹಿಂದೆ ಶಾಶ್ವತ ರಂಗಮಂದಿರಕ್ಕೆ ಆಗ್ರಹಿಸಿ ಹಿರಿಯ ನಾಟಕಕಾರ ಡಾ.ಗೋವಿಂದ ಮಣ್ಣೂರು, ಸುನಂದಾ ಹೊಸಕೇರಿ, ಐ.ಜಿ.ಸನದಿ, ಬಸವರಾಜ ಬೆಂಗೇರಿ ಸೇರಿದಂತೆ ಅನೇಕರು ಹೋರಾಟ ಮಾಡಿ ಟೌನ್‌ ಹಾಲ್‌ ಅನ್ನು ಪಡೆದುಕೊಂಡರು.

ಆನಂತರ ಅದು ಆಧಾರ್‌, ಪಡಿತರ ಚೀಟಿ ಪಡೆಯುವ ಕೇಂದ್ರವಾಗಿ ಬದಲಾಯಿತು. ಅಲ್ಲದೆ ಯಾವುದೇ ಮೂಲಸೌಕರ್ಯವಿಲ್ಲದೇ ಹಾಳಾಗುವ ಹಂತಕ್ಕೆ ಬಂದಿದೆ.

ಮಾಡಬೇಕಾದ ಕೆಲಸವೇನು: ವೃತ್ತಿರಂಗಭೂಮಿ ತವರೂರು ಎಂದೇ ಹೆಸರಾದ ಧಾರವಾಡ ಜಿಲ್ಲೆ ಕಲೆ, ಕಲಾವಿದರಿಗೂ ಹೆಸರುವಾಸಿ. ಹವ್ಯಾಸಿ ನಾಟಕ ಕಂಪೆನಿಗಳು ಅನೇಕ ಇವೆ. ನಿರಂತರ ನಡೆದುಕೊಂಡು ಬರುತ್ತಿವೆ. ಸೀಮಿತ ಸಂಖ್ಯೆಯ ಆಸಕ್ತರ ಮಧ್ಯೆ ಹವ್ಯಾಸಿ ರಂಗ ಇನ್ನೂ ಉಸಿರಾಡುತ್ತಿದೆ.

ಆದರೆ ವೃತ್ತಿರಂಗಭೂಮಿ ವೇದಿಕೆಯೇ ವಿಭಿನ್ನ. ರಂಗಮಂದಿರ ದೊರೆಯದಿದ್ದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಭವ್ಯವಾದ ರಂಗಸಜ್ಜಿಕೆಯನ್ನು ಹಾಕಬೇಕು. ಅದು ನಗರದ ಹೃದಯಭಾಗದಲ್ಲಿಯೇ ಇರಬೇಕು. ಬಸ್‌, ರೈಲು ನಿಲ್ದಾಣ, ಪ್ರಮುಖ ಮಾರುಕಟ್ಟೆಯ ಸ್ಥಳಗಳಿಗೆ ಬೇಡಿಕೆ ಇರುತ್ತದೆ. ಹೊರವಲಯದಲ್ಲಿ ರಂಗಸಜ್ಜಿಕೆ ನಿರ್ಮಿಸಿದರೆ ಜನರೂ ಬರುವುದು ಕಡಿಮೆ.

ಇಷ್ಟೆಲ್ಲ ತೊಂದರೆ, ತಾಪತ್ರಯಗಳ ಮಧ್ಯೆ ನಾಟಕಮಂದಿರ ನಿರ್ಮಿಸಿದರೆ ಪ್ರಾಕೃತಿಕ ವಿಕೋಪದಿಂದ ನಾಟಕಕ್ಕೆ ಕಲಾ ಪ್ರೇಕ್ಷಕರ ಕೊರತೆ ಕಾಡುತ್ತಿದೆ. ಮಳೆಗಾಲದಲ್ಲಿ ನಾಟಕ ಆಡುವುದು ಕಡಿಮೆ. ಹುಬ್ಬಳ್ಳಿಯಲ್ಲಿ ನಾಟಕ ಪ್ರದರ್ಶನಗಳು ವರ್ಷದ 324 ದಿನವೂ ನಡೆದ ಉದಾಹರಣೆ ಇದೆ. ಆದ್ದರಿಂದ ಕಲಾವಿದರು ಶಾಶ್ವತ ರಂಗಮಂದಿರಕ್ಕೆ ಬೇಡಿಕೆ ಇಡುತ್ತಲೇ ಇದ್ದಾರೆ. ಆದರೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನೂ ಅತ್ತ ಕಣ್ಣು ಹಾಯಿಸಿಲ್ಲ.

ಮಹಾನಗರ ಪಾಲಿಕೆ ಮನಸ್ಸು ಮಾಡಿದರೆ ಉತ್ತಮ ರಂಗಮಂದಿರ ನಿರ್ಮಿಸಿ ಕೊಡಬಹುದು. ಕಲಾವಿದರ ಸಂಘಕ್ಕೆ ನಿರ್ವಹಣೆ ಜವಾಬ್ದಾರಿ ಹಾಗೂ ಉಚಿತ ಬಾಡಿಗೆ ಪಡೆದುಕೊಂಡು ನೀಡಿದರೆ ನಾಟಕ ಕಂಪೆನಿಗಳಿಗೆ ಅನುಕೂಲವಾಗಲಿದೆ ಎಂಬುವುದು ಕಲಾವಿದರ ಆಶಯವಾಗಿದೆ.

ಬದುಕಿನ ರಂಗು ಇಲ್ಲದ ಕಲಾವಿದರು

ವೃತ್ತಿರಂಗಭೂಮಿ ಕಲಾವಿದರು ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸೂಕ್ತ ವೇತನ ಮಾಸಾಶನ ಮನೆ ಇಲ್ಲದೆ ಬಡವರಾಗಿಯೇ ಇದ್ದಾರೆ. ಟಿವಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಹಾವಳಿಯಿಂದ ಅವಕಾಶವೇ ಇಲ್ಲದೆ ಕುಳಿತುಕೊಳ್ಳುವಂತೆ ಆಗಿದೆ. ಮಾಗುತ್ತಿರುವ ವಯಸ್ಸು ಕಡಿಮೆಯಾದ ಅವಕಾಶದಿಂದ ಬದುಕಿನ ಬಂಡಿ ಸಾಗಿಸುವುದೇ ಕಷ್ಟವಾಗಿದೆ. ಸರ್ಕಾರ ಹಾಗೂ ನಾಟಕ ಅಕಾಡೆಮಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಅಲ್ಪ ಮಾಸಾಶನದಲ್ಲಿಯೇ ಜೀವನ ಸಾಗಿಸುವಂತೆ ಆಗಿದೆ. ಇಂದಿಗೂ ಕಲಾವಿದರು ನಗರದ ಗಣೇಶಪೇಟೆ ಬೆಂಗೇರಿ ನೇಕಾರನಗರಗಳಲ್ಲಿ ಚಿಕ್ಕಚಿಕ್ಕ ಬಾಡಿಗೆ ಮನೆಯಲ್ಲಿಯೇ ಜೀವನ ಕಳೆಯುತ್ತಿದ್ದಾರೆ. ಕೆಲವು ಕಲಾವಿದರು ಬದಲಾದ ಸನ್ನಿವೇಶದಲ್ಲಿ ಧಾರವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಅನೇಕರಿಗೆ ಇನ್ನೂ ಮಾಸಾಶನ ಮನೆ ಕೂಡಾ ಇಲ್ಲದೇ ವೈಭವದ ರಂಗ ಬದುಕನ್ನು ಮೆಲುಕು ಹಾಕುತ್ತಾ ಕುಳಿತುಕೊಂಡಿದ್ದಾರೆ. ಸಂಬಂಧಿಸಿದವರು ಇಂತಹವರನ್ನು ಗುರುತಿಸಿ ಸಹಾಯಹಸ್ತ ಚಾಚಬೇಕಿದೆ.

ಕಲಾವಿದರ ಸಂಘಟನೆ ಕೊರತೆ

ವೃತ್ತಿರಂಗಭೂಮಿ ಕಲಾವಿದರಲ್ಲಿ ಸಂಘಟನೆ ಕೊರತೆ ಎದ್ದು ಕಾಣುತ್ತಿದೆ. ಈ ಹಿಂದೆ ಉತ್ತರ ಕರ್ನಾಟಕದ ವೃತ್ತಿರಂಗಭೂಮಿ ಕಲಾವಿದರ ಸಂಘ ಅಸ್ತಿತ್ವಕ್ಕೆ ಬಂದಿದ್ದರೂ ಅಷ್ಟೊಂದು ಪರಿಣಾಮಕಾರಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಕಲಾವಿದರ ನೋಂದಣಿ ಅವರ ಸಮಸ್ಯೆ ಆಲಿಸುವ ಕೆಲವು ಸಭೆಗೆ ಅಷ್ಟೇ ಸೀಮಿತವಾಯಿತು. ನಾಟಕಕ್ಕಾಗಿ ಹೆಚ್ಚಾಗಿ ಹೊರಗೆ ಇರುವ ಕಲಾವಿದರು ಸಭೆ ಸೇರುವುದು ಬಹಳ ಕಡಿಮೆ. ಅಲ್ಲದೇ ಕೆಲವು ಪ್ರತಿಷ್ಠೆಗಳಿಂದ ಸಂಘಗಳು ಯಶಸ್ವಿಯಾದ ನಿದರ್ಶನವಿಲ್ಲ. ಆದ್ದರಿಂದ ಸಹಕಾರ ಇಲಾಖೆ ಅಡಿ ಸರ್ಕಾರದ ಸಹಯೋಗದೊಂದಿಗೆ ಸಂಘ ಆರಂಭಿಸಿ ಅವರ ಸಮಸ್ಯೆಗಳ ಅಹವಾಲು ಆಲಿಸಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ಅಲ್ಲದೆ ಮಧ್ಯವರ್ತಿಗಳ ಹಾವಳಿಯಿಂದ ಪ್ರಶಸ್ತಿ ಮಾಸಾಶನಕ್ಕೆ ಇರುವ ಅಲ್ಪಹಣವನ್ನು ಕಲಾವಿದರು ಕಳೆದುಕೊಂಡ ಉದಾಹರಣೆ ಇದೆ. ಲಕ್ಷಾಂತರ ವೆಚ್ಚ ಮಾಡಿ ನಾಟಕ ಪ್ರದರ್ಶನ ಮಾಡಿದ ಕೆಲವು ಸಾಹಸಿ ಕಲಾವಿದರು ಪ್ರೇಕ್ಷಕರ ಕೊರತೆಯಿಂದ ಎದೆಗುಂದಿ ಹೋಗಿರುವ ಉದಾಹರಣೆಗಳು ಕೂಡಾ ಸಾಕಷ್ಟು ಇವೆ.

ಕೋವಿಡ್‌ ನೀಡಿದ ಹೊಡೆತ

‘ಕೋವಿಡ್-19 ಕಾರಣದಿಂದ ಎರಡು ವರ್ಷಗಳಿಂದ ನಾಟಕಗಳ ಪ್ರದರ್ಶನ ಇರಲಿಲ್ಲ. ನಾಟಕ ಕಂಪನಿಗಳು ಕಲಾವಿದರು ಬೀದಿ ಪಾಲಾಗಬೇಕಾಯಿತು. ಬಾದಾಮಿ ಬನಶಂಕರಿದೇವಿ ಜಾತ್ರೆಯಿಂದ ಮಾತ್ರ ವೃತ್ತಿ ರಂಗಭೂಮಿ ಕಲಾವಿದರ ಹೊಟ್ಟೆ ತುಂಬಿಸಿತು. ರಂಗಭೂಮಿ ಕಲಾವಿದರಿಗೆ ರಂಗಾಸಕ್ತರು ಪ್ರೋತ್ಸಾಹಿಸಿದರೆ ಮಾತ್ರ ಸಾಂಸ್ಕೃತಿಕ ಲೋಕ ಶ್ರೀಮಂತಗೊಳಿಸಿದ ರಂಗಕಲೆಯನ್ನು ಉಳಿಸಬಹುದು‘ ಎನ್ನುತ್ತಾರೆ ರಂಗ ಕಲಾವಿದ ಭರತ್ ತಾಳಿಕೋಟಿ. ಕೋವಿಡ್‌ನಿಂದ 2 ವರ್ಷ ನಾಟಕ ಕಂಪೆನಿ ಕಲಾವಿದರು ಹೊಟ್ಟೆ ಹೊರೆಯಲು ಅತ್ಯಂತ ಪ್ರಯಾಸ ಪಡಬೇಕಾಯಿತು. ಕೆಲವು ದಾನಿಗಳು ಆಹಾರದ ಕಿಟ್‌ ನೀಡಿದರು. ಅನೇಕರಿಗೆ ಆ ಕಿಟ್‌ಗಳು ಕೂಡಾ ದೊರೆಯಲಿಲ್ಲ. ಪ್ರದರ್ಶನಗಳು ಇಲ್ಲದೇ ಜೀವನ ನಿರ್ವಹಣೆ ದೊಡ್ಡ ಸಮಸ್ಯೆ ಆಯಿತು. ಜನ ಅನಿವಾರ್ಯವಾಗಿ ಮೊಬೈಲ್‌ಗೆ ಹೊಂದಿಕೊಂಡರು. ನಾಟಕ ಥೇಟರ್‌ಗೆ ಬರುವುದು ಕೂಡಾ ಕಡಿಮೆಯಾಗಿದೆ. 

ಕೋವಿಡ್ ನಂತರ ಹಲವು ನಾಟಕ ಕಂಪನಿಗಳು ಮುಚ್ಚಿದವು. ಕಲಾವಿದರು ರಂಗಭೂಮಿಯಿಂದ ವಿಮುಖರಾದರು. ಈ ಪರಂಪರೆಯನ್ನು ಮುಂದುವರಿಸುವ ಉದ್ದೇಶದಿಂದ ಮತ್ತೆ ಕಂಪನಿ ಆರಂಭಿಸಲಾಗಿದೆ. ರಂಗಭೂಮಿ ಕಲಾವಿದರಿಗೆ ನಿಯಮಿತವಾಗಿ ಮಾಸಾಶನ ಬರುತ್ತಿಲ್ಲ. ಅಲ್ಲದೆ ಮಾಸಾಶನ ಹೆಚ್ಚಳ ಮಾಡಿಲ್ಲ. ವೃತ್ತಿ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸಬೇಕು
-ಪಾಪು ಕಲ್ಲೂರು, ಮಾಲೀಕ ಹೊಳೆಹುಚ್ಚೇಶ್ವರ ನಾಟ್ಯಸಂಘ ಕಮತಗಿ
ವೃತ್ತಿರಂಗಭೂಮಿ ಕ್ಷೇತ್ರಕ್ಕೆ ಐದು ವರ್ಷವಿದ್ದಾಗಲೇ ಪ್ರವೇಶ ಮಾಡಿದ್ದೇನೆ. ಸುಮಾರು 50 ವರ್ಷಗಳ ಕಾಲ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ್ದೇನೆ. ಮೊದಲಿಗೆ ಇದ್ದ ವೈಭವ ಈಗ ಇಲ್ಲ. ಈಗಿನ ಯುವ ಕಲಾವಿದರಲ್ಲಿ ಬದ್ಧತೆಯ ಕೊರತೆ ಇದೆ. ಅಲ್ಲದೇ ಸಹೃದಯ ಕಲಾಪ್ರೇಕ್ಷಕರು ಕಡಿಮೆಯಾಗಿದ್ದಾರೆ. ನನ್ನ ಕುಟುಂಬದ ಪ್ರೋತ್ಸಾಹದಿಂದ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನಾಟಕ ನಮ್ಮ ತಾಯಿ ಇದ್ದ ಹಾಗೆ ಈಗ ಹೆಚ್ಚಿನ ಸಮಯಗಳಲ್ಲಿ ಧಾರವಾಹಿಯಲ್ಲಿ ಅಭಿನಯಿಸುತ್ತಿದ್ದೇನೆ. ಬೆಂಗಳೂರು–ಹುಬ್ಬಳ್ಳಿ ಓಡಾಟ ನಿರಂತರವಿದೆ. ಸರ್ಕಾರ ವೃತ್ತಿ ರಂಗಭೂಮಿಯನ್ನು ಉಳಿಸಲು ಪ್ರೋತ್ಸಾಹ ನೀಡಬೇಕು.
-ಸುನಂದಾ ಹೊಸಪೇಟೆ ವೃತ್ತಿರಂಗಭೂಮಿ ಕಲಾವಿದೆ
ವೃತ್ತಿರಂಗ ಭೂಮಿ ಕ್ಷೇತ್ರ ಉಳಿಸಲು ಹಾಗೂ ಜೀವಂತವಾಗಿಡಲು ಸುಮಾರು 50 ವರ್ಷ ಶ್ರಮಿಸಿದ್ದೇನೆ. ಆರಂಭದಲ್ಲಿ ಇದ್ದ ಸಂಸ್ಕೃತಿ ಕಳಕಳಿ ಈಗಿಲ್ಲ. ಇದರ ಮಧ್ಯೆಯೂ ಕಲಾವಿದರ ಸಂಕಷ್ಟಕ್ಕೆ ಸಾಕಷ್ಟು ಶ್ರಮಿಸಿದ್ದೇನೆ. ಹಿರಿಯರಾದ ಮಾಜಿ ಸಂಸದ ಐ.ಜಿ.ಸನದಿ ಸೇರಿದಂತೆ ಅನೇಕರ ಸಹಯೋಗದೊಂದಿಗೆ ಉತ್ತಮ ರಂಗಮಂದಿರ ಪಡೆಯಲು ಹೋರಾಟ ನಡೆದಿದೆ. ಈ ಹಿಂದೆ ಕಲಾವಿದರಿಗಾಗಿ ನಿವೇಶನಗಳನ್ನು ಕೊಡಿಸಿದ್ದೇವೆ. ಸಂಬಂಧಿಸಿದ ಇಲಾಖೆ ಕಲೆ ಕಲಾವಿದರನ್ನು ಉಳಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು.
ಡಾ.ಗೋವಿಂದ ಮಣ್ಣೂರು ಹಿರಿಯ ರಂಗಕರ್ಮಿ
ವೃತ್ತಿರಂಗಭೂಮಿ ಕಲಾವಿದರಿಗೆ ತರಬೇತಿಯ ಅಗತ್ಯವಿದೆ. ನಾಟಕ ಮಾಧ್ಯಮಕ್ಕೆ ಒಂದು ರೀತಿ ಶಿಸ್ತು ತರಬೇಕಿದೆ. ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳ ಜೊತೆ ಸ್ಪರ್ಧಿಸಬೇಕಾದ ಅನಿವಾರ್ಯತೆ ಇದೆ. ಸಿನಿಮಾ ರಂಗ ನಾಟಕ ಲೋಕಕ್ಕೆ ದೊಡ್ಡ ಹೊಡೆತ ನೀಡಿದೆ. ವೃತ್ತಿರಂಗಭೂಮಿಯ ಕಲಾವಿದರು ಆಧುನಿಕತೆಗೆ ತಕ್ಕಂತೆ ಹೊಂದಿಕೊಂಡು ಪ್ರದರ್ಶನ ನೀಡಬೇಕಿದೆ. ಪ್ರೇಕ್ಷಕರ ಕೊರತೆ ನಾಟಕ ರಂಗ ಕಾಡುತ್ತಿದೆ. ಮೊದಲ ವೈಭವ ತರಲು ಮತ್ತೆ ಶ್ರಮಿಸುತ್ತಿದ್ದೇವೆ
-ಬಸವರಾಜ ಬೆಂಗೇರಿ ಹಿರಿಯ ರಂಗ ಸಂಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.