ADVERTISEMENT

ಹುಬ್ಬಳ್ಳಿ: ರೌಡಿಗಳ ಮನೆ ಮೇಲೆ ದಾಳಿ, ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 27 ಮೇ 2024, 15:12 IST
Last Updated 27 ಮೇ 2024, 15:12 IST
ಹುಬ್ಬಳ್ಳಿಯ ಗಂಗಾಧರನಗರದ ರೌಡಿಗಳ ಮನೆ ಮೇಲೆ ಸೋಮವಾರ ಬೆಂಡಿಗೇರಿ ಠಾಣೆ ಪೊಲೀಸರು ದಾಳಿ ನಡೆಸಿ ಎಚ್ಚರಿಕೆ ನೀಡಿದರು
ಹುಬ್ಬಳ್ಳಿಯ ಗಂಗಾಧರನಗರದ ರೌಡಿಗಳ ಮನೆ ಮೇಲೆ ಸೋಮವಾರ ಬೆಂಡಿಗೇರಿ ಠಾಣೆ ಪೊಲೀಸರು ದಾಳಿ ನಡೆಸಿ ಎಚ್ಚರಿಕೆ ನೀಡಿದರು   

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಮುಂದಾಗಿರುವ ಹು-ಧಾ ಮಹಾನಗರ ಪೊಲೀಸರು, ಸೋಮವಾರ ಬೆಳಿಗ್ಗೆ 12 ರೌಡಿಗಳ ಮನೆ ಮೇಲೆ ದಿಢೀರ್ ದಾಳಿ ನಡೆಸಿದರು.

ಕಮಿಷನರ್ ರೇಣುಕಾ ಸುಕುಮಾರ್‌, ಡಿಸಿಪಿ ಕುಶಾಲ ಚೌಕ್ಸಿ ಮಾರ್ಗದರ್ಶನದಲ್ಲಿ ಬೆಂಡಿಗೇರಿ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಮಾರುತಿ ಗುಳಾರಿ ನೇತೃತ್ವದಲ್ಲಿ ಠಾಣೆ ವ್ಯಾಪ್ತಿಯಲ್ಲಿನ ರೌಡಿಗಳ ಮನೆ ಮೇಲೆ ದಾಳಿ ನಡೆಸಲಾಯಿತು.

ರೋಹಿತ್‌ ಕಲಾಲ, ಇಸ್ಮಾಯಿಲ್‌ ಭಾರದ್ವಾಲೆ, ಫಜಲ್‌ ಪುಣೆವಾಲೆ, ದಾವಲಸಾಬ ಪುಣೆವಾಲೆ, ವಿನೋದ ಪರಶುರಾಮ, ಸಾಹಿಲ್‌ ಭಕ್ಷ, ಪ್ರದೀಪ ಕೂಗೋಡ, ಪುಟ್ಟರಾಜು ಕೂಗಡ ಸೇರಿ ಕೆಲವು ರೌಡಿಗಳ ಮನೆಗಳಲ್ಲಿ ಪರಿಶೀಲಿಸಲಾಯಿತು. ಕೆಲವು ರೌಡಿಗಳಿಗೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿ, ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಇನ್ನು ಕೆಲವರಿಗೆ ಗಡಿಪಾರು ಮಾಡುವ ಎಚ್ಚರಿಕೆಯನ್ನೂ ನೀಡಲಾಗಿದೆ.

ADVERTISEMENT

‘ವಿವಿಧ ಅಪರಾಧ ಕೃತ್ಯಗಳಲ್ಲಿ ಬಾಡಿ ವಾರಂಟ್‌ ಜಾರಿಯಾಗಿದ್ದರೂ ತಲೆಮರೆಸಿಕೊಂಡಿದ್ದ ಇಬ್ಬರು ರೌಡಿಗಳನ್ನು ಬಂಧಿಸಲಾಗಿದೆ. ಮಹಿಳೆಯೊಬ್ಬರ ಮಾನಭಂಗ ಪ್ರಕರಣಕ್ಕೆ ಸಂಬಂಧಿಸಿ ಪರಾರಿಯಾಗಿದ್ದ ಸೆಟ್ಲಮೆಂಟ್‌ನ ಅಭಿಷೇಕ ಭಜಂತ್ರಿ ಮತ್ತು ಗಾಂಜಾ ಪ್ರಕರಣದ ಆರೋಪಿ ಕೆ.ಬಿ. ನಗರದ ಅರುಣ ಹಲಗಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನಗರದಲ್ಲಿ ರೌಡಿಸಂ, ಪುಂಡಾಟ ಹಾಗೂ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶವಿಲ್ಲ. ಅಂತಹ ಚಟುವಟಿಕೆಗಳು ಕಂಡುಬಂದರೆ, ಮುಲಾಜಿಲ್ಲದೆ ಕಠಿಣಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.