ಧಾರವಾಡ: ಆಟೊಮೊಬೈಲ್ ಕ್ಷೇತ್ರದ ಪೂರಕ ಕೈಗಾರಿಕೆಗಳೇ ತುಂಬಿರುವ ಇಲ್ಲಿನ ಬೇಲೂರು ಕೈಗಾರಿಕಾ ಘಟಕವೂ ಆರ್ಥಿಕ ಹಿಂಜರಿತಕ್ಕೆ ತತ್ತರಿಸಿದೆ. ಕೈಗಾರಿಕೋದ್ಯಮಿಗಳು ಸಾಲದ ಸುಳಿಗೆ ಸಿಲುಕುವ ಹಾಗೂ ಉದ್ಯೋಗಿಗಳು ನೌಕರಿ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
ಟಾಟಾ ಮಾರ್ಕೊಪೊಲೊ, ಟಾಟಾ ಹಿಟಾಚಿ ಹಾಗೂ ಟಾಟಾ ಮೋಟಾರ್ಸ್‌ನ ವಾಹನಗಳ ಬಿಡಿ ಭಾಗಗಳು ಜೋಡಿಸುವ ಕಾರ್ಖಾನೆಗಳು ಇಲ್ಲಿಗೆ ಸಮೀಪದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿವೆ.
ಇವುಗಳಿಗೆ ನೇರವಾಗಿ, ಇಲ್ಲವೇ ಬೇರೆ ಕಂಪನಿಗಳ ಮೂಲಕ ಅನೇಕ ಬಿಡಿ ಭಾಗಗಳನ್ನು ತಯಾರಿಸಿ ನೀಡುವ ಸಣ್ಣಪುಟ್ಟ ಕೈಗಾರಿಕೆಗಳು ಸಾಕಷ್ಟಿವೆ. ಇವುಗಳೆಲ್ಲವೂ ಈ ಮೂರು ದೊಡ್ಡ ಕೈಗಾರಿಕೆಗಳನ್ನೇ ನೆಚ್ಚಿಕೊಂಡಿವೆ.
ಆದರೆ, ದೇಶದ ಆರ್ಥಿಕ ಹಿಂಜರಿತದಿಂದಾಗಿ ಈ ಕೈಗಾರಿಕೆಗಳಲ್ಲಿ ಶೇ 30ರಿಂದ 70ರವರೆಗೂ ಉತ್ಪಾದನೆ ಕುಂಠಿತಗೊಂಡಿದೆ. ಇಲ್ಲಿ ಸುಮಾರು 300ಕ್ಕೂ ಅಧಿಕ ಆಕ್ಸಿಲರಿ ಕಂಪನಿಗಳು ಇವೆ. ತಿಂಗಳು ಪೂರ್ತಿ ಕೆಲಸ ಮಾಡುತ್ತಿದ್ದ ಈ ಕೈಗಾರಿಕೆಗಳಿಗೆ ಸದ್ಯ ಸಿಗುತ್ತಿರುವುದು 20 ದಿನಗಳ ಕೆಲಸ ಮಾತ್ರ. ಮುಂದಿನ ತಿಂಗಳು ಇನ್ನೂ 5ರಿಂದ 10 ದಿನ ಕೆಲಸ ಕಡಿತಗೊಳ್ಳುವ ಮುನ್ಸೂಚನೆ ಇದೆ ಎಂದು ಉದ್ಯಮಿಯೊಬ್ಬರು ತಿಳಿಸಿದರು.
ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಕಂಪನಿಗಳಲ್ಲಿ, ಪಾಳಿ ಕಡಿತಗೊಳಿಸಲಾಗಿದೆ. ಇನ್ನೂ ಕೆಲವೆಡೆ ತಮ್ಮ ಕಂಪನಿಯ ಎದುರಿನ ರಸ್ತೆ ಶುಚಿಗೊಳಿಸುವುದು, ಕಂಪನಿ ಆವರಣ ಶುಚಿಗೊಳಿಸುವ ಕೆಲಸವನ್ನು ನೌಕರರಿಗೆ ನೀಡುತ್ತಿದ್ದಾರೆ. ರಾತ್ರಿ ಪಾಳಿಯ ನೌಕರರಿಗೆ ಭಗವದ್ಗೀತೆ ಪ್ರವಚನ ಆಯೋಜಿಸಿರುವ ಉದಾಹರಣೆಗಳೂ ಇಲ್ಲಿವೆ.
ಈ ಕುರಿತು ಪ್ರತಿಕ್ರಿಯಿಸಿದ ಧಾರವಾಡ ಬೆಳವಣಿಗೆ ಕೇಂದ್ರ, ಉದ್ಯಮಿಗಳ ಸಂಘದ ಅಧ್ಯಕ್ಷ ಶ್ರೀಕಾಂತ ಹುಲಮನಿ, ‘ಆರ್ಥಿಕ ಹಿಂಜರಿತ ಬಿಸಿ ಇಲ್ಲಿಯೂ ತಟ್ಟಿದೆ. ದೊಡ್ಡ ಕಂಪನಿಗಳ ಬೇಡಿಕೆಗೆ ಅನುಗುಣವಾಗಿ, ಸಣ್ಣ ಕಂಪನಿಗಳ ತಯಾರಿಕೆಯೂ ಗಣನೀಯವಾಗಿ ಇಳಿಮುಖವಾಗಿದೆ. ಬೇಡಿಕೆ ಹೆಚ್ಚಾಗದ ಹೊರತೂ, ಕೈಗಾರಿಕೆ ಮೇಲೇಳುವ ಯಾವ ಸಾಧ್ಯತೆಯೂ ಕಂಡುಬರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಕೈಗಾರಿಕೋದ್ಯಮಿಗಳು ಮಾಡಿಕೊಂಡಿರುವ ಸಾಲ ಮರುಪಾವತಿಯೂ ಕಷ್ಟವಾಗುವ ಸಾಧ್ಯತೆ ಇದೆ. ಬಹಳಷ್ಟು ಗುತ್ತಿಗೆ ನೌಕರರನ್ನು ಮನೆಗೆ ಕಳುಹಿಸಲಾಗಿದೆ. ಕಂಪನಿ ನೌಕರರೂ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಸರ್ಕಾರ ಗಂಭೀರ ಚಿಂತನೆ ನಡೆಸದಿದ್ದರೆ ಇಡೀ ಉದ್ಯಮವೇ ಭಾರೀ ಸಮಸ್ಯೆಗೆ ಸಿಲುಕುವ ಸಾಧ್ಯತೆ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.