ADVERTISEMENT

ಅವನೇ ಶ್ರೀಮನ್ನಾರಾಯಣನ ಗಳಿಕೆ ಕಿರಿಕ್ ಪಾರ್ಟಿಗಿಂತ 4 ಪಟ್ಟು ಹೆಚ್ಚು

ಚಿತ್ರಮಂದಿರಕ್ಕೆ ಭೇಟಿ ನೀಡಿದ ನಟ ರಕ್ಷಿತ್ ಶೆಟ್ಟಿ, ನಿರ್ದೇಶಕ ಸಚಿನ್ ರವಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2020, 12:39 IST
Last Updated 5 ಜನವರಿ 2020, 12:39 IST
ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ   

ಹುಬ್ಬಳ್ಳಿ: ‘400 ಚಿತ್ರಮಂದಿರಗಳಲ್ಲಿ ತೆರೆ ಕಂಡಿರುವ ‘ಅವನೇ ಶ್ರೀಮನ್ನಾರಾಯಣ’ ಚಿತ್ರ, ಮೊದಲ ವಾರವೇ ಹಿಂದಿನ ‘ಕಿರಿಕ್‌ ಪಾರ್ಟಿ’ ಸಿನಿಮಾಗಿಂತ ನಾಲ್ಕು ಪಟ್ಟು ಹೆಚ್ಚು ಗಳಿಸಿದೆ’ ಎಂದು ನಟ ರಕ್ಷಿತ್ ಶೆಟ್ಟಿ ಹೇಳಿದರು.

ಹುಬ್ಬಳ್ಳಿಯಲ್ಲಿ ಚಿತ್ರತಂಡದೊಂದಿಗೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿತ್ರವು ಮಾಸ್ ಪ್ರೇಕ್ಷಕರ ಜತೆಗೆ, ಕೌಟುಂಬಿಕ ಪ್ರೇಕ್ಷಕರನ್ನು ಥಿಯೇಟರ್‌ನತ್ತ ಸೆಳೆಯುತ್ತಿದೆ. ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲಿ ನಿರೀಕ್ಷಿಸಿದಷ್ಟು ಪ್ರತಿಕ್ರಿಯೆ ಸಿಗದಿದ್ದರೂ, ಒಳ್ಳೆಯ ವಿಮರ್ಶೆ ಬಂದಿದೆ. ಸಿನಿಮಾ ವೀಕ್ಷಿಸಿದವರು ಮಾಡುತ್ತಿರುವ ಪ್ರಚಾರವೂ ಥಿಯೇಟರ್‌ನತ್ತ ಹೆಚ್ಚು ಜನರನ್ನು ಕರೆ ತರುತ್ತಿದೆ. ಮುಂದಿನ ವಾರ ಹಿಂದಿಯಲ್ಲಿ ಸಿನಿಮಾ ಬಿಡುಗಡೆ ಮಾಡಲಾಗುವುದು’ ಎಂದರು.

‘ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಪೈರಸಿ ಕಾಟ ಹೆಚ್ಚು. ಅದರ ತಡೆಗಾಗಿ, ಐ.ಟಿ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿದ್ದೇವು. ಯಾರಾದರೂ ವೆಬ್‌ಸೈಟ್‌ಗಳಲ್ಲಿ ಸಿನಿಮಾ ಹರಿಬಿಟ್ಟರೆ, ಐ.ಟಿ ತಂಡ ತಕ್ಷಣ ಅದನ್ನು ಡೆಲಿಟ್ ಮಾಡುತ್ತಿದೆ’ ಎಂದು ಪೈರಸಿ ತಡೆಗೆ ಕೈಗೊಂಡಿರುವ ಕ್ರಮದ ಬಗ್ಗೆ ತಿಳಿಸಿದರು.

ADVERTISEMENT

‘ಮುಂದಿನ ಚಿತ್ರ ‘777 ಚಾರ್ಲಿ’ ಚಿತ್ರೀಕರಣ ಅರ್ಧದಷ್ಟು ಮುಗಿದಿದೆ. ‘ಪುಣ್ಯಕೋಟಿ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ಸಿದ್ಧತೆ ನಡೆಸುತ್ತಿದ್ದೇನೆ. ಈ ಸಿನಿಮಾಗೆ ಉತ್ತರ ಕರ್ನಾಟಕ ಭಾಗದ ಕಲಾವಿದರನ್ನು ಹೆಚ್ಚಾಗಿ ಬಳಸಿಕೊಳ್ಳುವ ಆಲೋಚನೆ ಇದೆ’ ಎಂದು ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ವಿವರಿಸಿದರು.

17 ನಿಮಿಷ ಟ್ರಿಮ್:ಚಿತ್ರದ ನಿರ್ದೇಶಕ ಸಚಿನ್ ರವಿ, ‘ಅವನೇ ಶ್ರೀಮನ್ನಾರಾಯಣ ಸಿನಿಮಾ ವೀಕ್ಷಿಸಿದ ಅನೇಕ ಮಂದಿ, ಸಿನಿಮಾ ಅವಧಿ (3 ಗಂಟೆ 6 ನಿಮಿಷ) ತುಂಬಾ ಹೆಚ್ಚಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ, ಚಿತ್ರದ ಅವಧಿಯನ್ನು 17 ನಿಮಿಷ ಕಡಿತಗೊಳಿಸಿ ಪ್ರದರ್ಶಿಸಲಾಗುತ್ತಿದೆ’ ಎಂದರು.

‘ಈ ಸಿನಿಮಾ ಸತತ ಮೂರು ವರ್ಷಗಳ ಶ್ರಮದ ಫಲ. ಈ ಮಧ್ಯೆ ನೂರಾರು ಸಲ ಸಿನಿಮಾ ನೋಡಿದ್ದೇವೆ. ‌ಅದರೊಳಗೆ ಮುಳುಗಿರುವ ನಮಗೆ ಚಿತ್ರ ಎಂದೂ ಬೋರ್ ಎನಿಸಿಲ್ಲ. ಆದರೆ, ಅಂತಿಮವಾಗಿ ಪ್ರೇಕ್ಷಕ ಹೇಗೆ ಸ್ವೀಕರಿಸುತ್ತಾನೆ ಎಂಬುದು ಮುಖ್ಯ. ಹಾಗಾಗಿ, ಅವರ ಅಭಿಪ್ರಾಯ ಹಾಗೂ ಸಲಹೆ ಆಧರಿಸಿ, 15 ನಿಮಿಷ ಕಡಿತ ಮಾಡಿದ್ದೇವೆ’ ಎಂದರು.

ನಟರಾದ ಪ್ರಮೋದ ಶೆಟ್ಟಿ ಹಾಗೂ ಬಾಲಾಜಿ, ಈ ಸಿನಿಮಾ ಹೊಸ ಅನುಭವವನ್ನು ನೀಡಿದೆ. ವಿದೇಶಗಳಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.