ಹುಬ್ಬಳ್ಳಿ: ಕಬ್ಬಿನ ಕಸ ಮತ್ತು ಎಲೆ ಸುಡುವುದನ್ನು ತಪ್ಪಿಸಿ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ಬಹುಪಯೋಗಿ ಸುಧಾರಿತ ‘ಬಾಹುಬಲಿ’ ಹಾಗೂ ‘ಅವಂತಿ’ ಎಂಬ ಯಂತ್ರಗಳನ್ನು ವಿನ್ಯಾಸ ಮಾಡಲಾಗಿದೆ ಎಂದು ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಶೆಟ್ಟರ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕೃಷಿ ಭೂಮಿಯಲ್ಲಿಯೇ ಕಸ ಸುಡುವುದರಿಂದ ಪರಿಸರ, ಭೂಮಿಯ ಕಣಜ ಮತ್ತು ತೇವಾಂಶ ಹಾಳಾಗುತ್ತದೆ. ಹರಿಯಾಣ ಮತ್ತು ಪಂಜಾಬ್‌ನಲ್ಲಿ ರೈತರು ಕಸ ಸುಟ್ಟಿದ್ದರಿಂದ ಸುತ್ತಮುತ್ತಲಿನ ವಾತಾವರಣ ಕಲ್ಮಶವಾಗಿದೆ’ ಎಂದರು.
‘ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಸಂಶೋಧನಾ ಮತ್ತು ಉತ್ಪನ್ನ ಅಭಿವೃದ್ಧಿ ವಿಭಾಗ, ಚೆರಶ್ ಟ್ರಸ್ಟ್ ಮತ್ತು ಈಐಡಿ ಪ್ಯಾರಿ ಇಂಡಿಯಾ ಲಿಮಿಟೆಡ್ ಸಹಯೋಗದಲ್ಲಿ ಬಿಯೊಕಾನ್ ಎನ್ನುವ ಯೋಜನೆ ಆರಂಭಿಸಲಾಗಿದ್ದು, ಇದರಿಂದ ವೈಜ್ಞಾನಿಕವಾಗಿ ಕಸ ಸುಡುವ ಯಂತ್ರದ ವಿನ್ಯಾಸ ಮಾಡಲಾಗಿದೆ. ಧಾರವಾಡದಲ್ಲಿ ನಡೆಯುವ ಕೃಷಿ ಮೇಳದಲ್ಲಿ ಯಂತ್ರಗಳ ಉದ್ಘಾಟನೆ ನಡೆಯಲಿದೆ’ ಎಂದರು.
‘ಹತ್ತಿ ಕಟ್ಟಿಗೆ, ಅಡಿಕೆ ಸಿಪ್ಪೆ, ಕಬ್ಬಿನ ತರಗು ಮತ್ತು ಉದ್ಯಾನದ ಕಸವನ್ನು ಯಂತ್ರದ ಸಹಾಯದಿಂದ ಸಣ್ಣ ಗಾತ್ರದ ತುಂಡುಗಳಾಗಿ ಕತ್ತರಿಸಿ ಗೊಬ್ಬರವಾಗಿಸಲು ಯಂತ್ರ ನೆರವಾಗುತ್ತದೆ. ಗ್ರಾಮೀಣ ಪ್ರದೇಶದ ರೈತರು ಮತ್ತು ಯುವಕರು ಇದನ್ನು ಉಪ ಆದಾಯದ ಉದ್ಯೋಗ ಮಾಡಿಕೊಳ್ಳಬಹುದು’ ಎಂದರು.
‘ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದ ಕಬ್ಬು ಬೆಳೆಯುವ ಭಾಗದಲ್ಲಿ ಕಬ್ಬಿನ ಕಸ ಮತ್ತು ಎಲೆಗಳನ್ನು ಸುಡುವುದು ಹೆಚ್ಚಾಗುತ್ತಿದೆ. ಇದರಿಂದ ಮಾಲಿನ್ಯವೂ ಹೆಚ್ಚಾಗುತ್ತದೆ. ಇದನ್ನು ತಡೆಯಲು ಬಯೊಮಾಸ್ ಬಳಕೆ ಉತ್ತಮವಾದದು’ ಎಂದರು.
ಸಂಶೋಧನಾ ವಿಭಾಗದ ನಿರ್ದೇಶಕ ಡಾ. ರವಿ ಸಿ. ಗುತ್ತಲ ಮಾತನಾಡಿ ‘ಹಳಿಯಾಳ ಮತ್ತು ಸುತ್ತಮುತ್ತ ಕಬ್ಬು ಬೆಳೆಯುವ ಪ್ರದೇಶದಲ್ಲಿ 11 ದಿನ 9 ಟನ್ ಕಸ ಸಂಗ್ರಹಿಸಿ ಧಾರವಾಡದಲ್ಲಿನ ಬಯೊಮಾಸ್ ಬ್ರಿಕೆಟ್‌ಗಳನ್ನು ತಯಾರಿಸುವ ಘಟಕಕ್ಕೆ ಕಳುಹಿಸಲಾಯಿತು. ಇದೇ ಮಾದರಿಯ ಯಂತ್ರ ಬಳಸಿ ಕಸ ಸಂಸ್ಕರಣೆಗೆ ಹತ್ತು ಸಾವಿರಕ್ಕೂ ಹೆಚ್ಚು ರೈತರು ಮುಂದೆ ಬಂದಿದ್ದಾರೆ’ ಎಂದು ಹೇಳಿದರು.
‘ಮಾರುಕಟ್ಟೆಯಲ್ಲಿ ಸಿಗುವ ಬಯೊಮಾಸ್ ಶ್ರೆಡ್ಡಿಂಗ್ ಯಂತ್ರಗಳಿಗಿಂತ ಸುಧಾರಿತ ಯಂತ್ರಗಳಲ್ಲಿ ಬ್ಲೇಡ್‌ಗಳನ್ನು ವಿಶೇಷವಾಗಿ ಜೋಡಣೆ ಮಾಡಲಾಗಿದೆ. ಬಾಹುಬಲಿ ಯಂತ್ರವು ಒಂದು ಗಂಟೆಗೆ 750 ಕೆ.ಜಿ.ಯಿಂದ 1,250 ಕೆ.ಜಿ. ಮತ್ತು ಅವಂತಿ ಯಂತ್ರ 175 ಕೆ.ಜಿ.ಯಿಂದ 375 ಕೆ.ಜಿ. ವರೆಗೆ ಕಸ ಸಂಸ್ಕರಣೆ ಮಾಡುತ್ತವೆ. ಸಂಸ್ಕರಿಸದ ಕಸವನ್ನು ಜಾನುವಾರುಗಳಿಗೆ ಆಹಾರ ಉದ್ಯಮ, ಡೈರಿ, ಮಿಶ್ರಗೊಬ್ಬರ ತಯಾರಿಕೆ, ಮರುಬಳಕೆ, ಗಿಡಮೂಲಿಕೆಗಳ ಸಂಸ್ಕರಣಾ ಘಟಕಗಳಿಗೆ ನೀಡಬಹುದಾಗಿದೆ’ ಎಂದರು.
ಯಂತ್ರಗಳ ವಿನ್ಯಾಸಕರಾದ ಟಿ. ರಮೇಶ, ಜಗದೀಶ ಪತ್ತಾರ, ರಾಜೇಶ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.