ADVERTISEMENT

ತ್ಯಾಗ, ಬಲಿದಾನದ ಪ್ರತೀಕ ಬಕ್ರೀದ್‌

ಹಬ್ಬ ಆಚರಣೆಗೆ ಸಿದ್ಧತೆ: ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 5:38 IST
Last Updated 17 ಜೂನ್ 2024, 5:38 IST
<div class="paragraphs"><p>ಬಕ್ರೀದ್ ಅಂಗವಾಗಿ&nbsp;ಹುಬ್ಬಳ್ಳಿಯ ನ್ಯೂ ಮ್ಯಾದಾರ ಓಣಿಯಲ್ಲಿ ಮುಸ್ಲಿಮರು ಟಗರುಗಳನ್ನು ಖರೀದಿಸಿ ಕೊಂಡೊಯ್ದರು </p></div>

ಬಕ್ರೀದ್ ಅಂಗವಾಗಿ ಹುಬ್ಬಳ್ಳಿಯ ನ್ಯೂ ಮ್ಯಾದಾರ ಓಣಿಯಲ್ಲಿ ಮುಸ್ಲಿಮರು ಟಗರುಗಳನ್ನು ಖರೀದಿಸಿ ಕೊಂಡೊಯ್ದರು

   

ಪ್ರಜಾವಾಣಿ ಚಿತ್ರಗಳು: ಗೋವಿಂದರಾಜ ಜವಳಿ

ಹುಬ್ಬಳ್ಳಿ: ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್‌ ಅನ್ನು ನಗರದಲ್ಲಿ ಸೋಮವಾರ ಶ್ರದ್ಧಾ–ಭಕ್ತಿಯಿಂದ ಆಚರಿಸಲು ಮುಸ್ಲಿಮರು ಸಜ್ಜಾಗಿದ್ದಾರೆ.

ADVERTISEMENT

ಈ ಹಿನ್ನೆಲೆಯಲ್ಲಿ ಭಾನುವಾರ ಇಲ್ಲಿನ ಚನ್ನಮ್ಮ ವೃತ್ತದ ಈದ್ಗಾ ಮೈದಾನ ಹಾಗೂ ಮಸೀದಿಗಳನ್ನು ಸ್ವಚ್ಛಗೊಳಿಸಿ, ಸೋಮವಾರ ಬೆಳಗಿನ ಸಾಮೂಹಿಕ ಪ್ರಾರ್ಥನೆಗೆ ವ್ಯವಸ್ಥೆ ಮಾಡಲಾಗಿದೆ.

ಶಾಂತಿ ಮತ್ತು ಸುವ್ಯವಸ್ಥೆಯಿಂದ ಹಬ್ಬ ಆಚರಣೆಗೆ ಹಾಗೂ ಅಹಿತಕಾರಿ ಘಟನೆಗಳು ನಡೆಯದಂತೆ ಈದ್ಗಾ ಮೈದಾನ, ಮಸೀದಿಗಳ ಸುತ್ತಮುತ್ತ ಹಾಗೂ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಪ್ರಾಣಿ ಬಲಿ (ಕುರ್ಬಾನಿ) ಬಕ್ರೀದ್ ಜೀವಾಳ. ಕುರ್ಬಾನಿ ಎಂದರೆ ‌‌ಅತ್ಯಾಪ್ತ ವಸ್ತುವನ್ನು ಅಲ್ಲಾಹುವಿಗೆ ಸಮರ್ಪಿಸುವುದು ಎಂದರ್ಥ. ಹೀಗಾಗಿ ಹಿಂದಿನಿಂದಲೂ ಕುರಿ, ಟಗರು, ಮೇಕೆ, ಹೋತ, ಬಲಿ ನೀಡಿ ಬಕ್ರೀದ್ ಆಚರಿಸಲಾಗುತ್ತಿದೆ. ಈ ಮೂಲಕ ಅಲ್ಲಾಹುವಿನ ಕೃಪೆ, ಅನುಗ್ರಹಕ್ಕೆ ಪಾತ್ರರಾಗುವುದು ಈ ಆಚರಣೆಯ ಹಿಂದಿನ ಉದ್ದೇಶ.

‘ಪ್ರವಾದಿಯವರ ಆಣತಿಯಂತೆ ಬಕ್ರೀದ್ ಆಚರಣೆ ವೇಳೆ ಬಲಿದಾನ ನೀಡುವುದು, ಬಡವರಿಗೆ ಹಬ್ಬದ ಊಟ ಕೊಡುವುದು ಆಚರಣೆಯ ಪ್ರಮುಖ ಅಂಶ. ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಬಳಿಕ ಕಬರಸ್ತಾನಕ್ಕೆ ತೆರಳಿ ಪೂರ್ವಜರನ್ನು ಸ್ಮರಿಸಲಾಗುತ್ತದೆ. ಸ್ಥಿತಿವಂತರು ಮನೆಯಲ್ಲಿ ಕುರಿ, ಮೇಕೆ ರೂಪದಲ್ಲಿ ಬಲಿದಾನ ಅರ್ಪಿಸುತ್ತಾರೆ. ಅದನ್ನು ಮೂರು ಪಾಲು ಮಾಡಿ ಬಡವರಿಗೆ, ನೆರೆಹೊರೆಯವರಿಗೆ ಹಂಚಿಕೆ ಮಾಡಲಾಗುತ್ತದೆ’ ಎನ್ನುತ್ತಾರೆ ಮುಸ್ಲಿಂ ಸಮುದಾಯದ ನಾಯಕರಾದ ಅಲ್ತಾಫ ಕಿತ್ತೂರ.

‘ಬಲಿ ಕರ್ಮ (ಕುರ್ಬಾನಿ) ನಿರ್ವಹಿಸಲು ಮೂರ್ನಾಲ್ಕು ತಿಂಗಳ ಮೊದಲೇ ಬಲಿ ಕೊಡಲು ಮೇಕೆ, ಆಡು, ಹೋತ, ಕುರಿ ಖರೀದಿಸಿ, ಅದನ್ನು ಸಾಕಿ, ಪ್ರೀತಿ, ವಾತ್ಸಲ್ಯ ಇರುವ ಹಂತದಲ್ಲಿ ಅದನ್ನು ಬಲಿ ಕೊಡುವುದು ಕುರ್ಬಾನಿಯ ಉತ್ತಮ ವಿಧಾನ. ಆದರೆ ಬಹುತೇಕರು, ಬಕ್ರೀದ್‌ಗಿಂತ ಎರಡು–ಮೂರು ದಿನ ಮೊದಲು ಸಾಕುಪ್ರಾಣಿಗಳನ್ನು ಖರೀದಿಸಿ ಬಲಿ ನೀಡುತ್ತಾರೆ’ ಎನ್ನುತ್ತಾರೆ ಸದ್ದಾಂ ನದಾಫ.

ಬಕ್ರೀದ್ ಅಂಗವಾಗಿ ಹುಬ್ಬಳ್ಳಿಯ ರಾಣಿ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನವನ್ನು ಭಾನುವಾರ ಸ್ವಚ್ಛಗೊಳಿಸಲಾಯಿತು –ಪ್ರಜಾವಾಣಿ ಚಿತ್ರಗಳು: ಗೋವಿಂದರಾಜ ಜವಳಿ

ಆಚರಣೆ ಹೇಗಿರಲಿದೆ?

* ನಸುಕಿನ ಜಾವ ಬೇಗ ಎದ್ದು ನಮಾಜ್ ಮಾಡುವುದು* ಹೊಸ ಬಟ್ಟೆ ತೊಟ್ಟು, ವಿಶ್ವ ಶಾಂತಿ, ಸೌಹಾರ್ದಕ್ಕಾಗಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ* ಪರಸ್ಪರ ಹಸ್ತಲಾಘವ, ಆಲಿಂಗನದ ಮೂಲಕ ಶುಭಾಶಯ ವಿನಿಮಯ* ಕಬರಸ್ತಾನ್‌ಗೆ ತೆರಳಿ ಮೃತರಿಗಾಗಿ ದುವಾ ಮಾಡುವುದು* ಕುರ್ಬಾನಿ ನಿರ್ವಹಿಸಿ, ಬಡವರು, ನೆರೆಹೊರೆಯವರು, ಸಂಬಂಧಿಕರಿಗೆ ಮಾಂಸ ಹಂಚುವುದು* ಮನೆಯಲ್ಲಿ ಕುಟುಂಬಸ್ಥರೊಂದಿಗೆ ಹಬ್ಬದ ಊಟ ಸೇವನೆ

ಮಾರುಕಟ್ಟೆಯಲ್ಲಿ ಖರೀದಿ ಭರಾಟೆ
ಭಾನುವಾರದಂದು ಜನತಾ ಬಜಾರ್ ಶಾ ಬಜಾರ್ ದುರ್ಗದ ಬೈಲ್ ನ್ಯಾಷನಲ್ ಮಾರ್ಕೆಟ್‌ ಜನಜಂಗುಳಿಯಿಂದ ಕೂಡಿದ್ದವು. ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸುವ ಸಂಪ್ರದಾಯ ಇರುವುದರಿಂದ ಬಟ್ಟೆ ಅಂಗಡಿಗಳಲ್ಲಿ ಖರೀದಿ ಜೋರಾಗಿತ್ತು. ಸಿಹಿಖಾದ್ಯವಾದ ‘ಶೀರ್‌–ಕುರ್ಮಾ’ ತಯಾರಿಕೆಗೆ ಬೇಕಿರುವ ಶ್ಯಾವಿಗೆ ಒಣಹಣ್ಣುಗಳನ್ನು ಉತ್ಸಾಹದಿಂದ ಖರೀದಿಸುತ್ತಿರುವುದು ಕಂಡುಬಂತು. ನ್ಯೂ ಮ್ಯಾದಾರ ಓಣಿ ಗಣೇಶ ಪೇಟೆ ಅಮರಗೋಳದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಕುರಿ ಮೇಕೆ ಹೋತ ಮಾರಾಟ ಖರೀದಿ ಪ್ರಕ್ರಿಯೆ ಜೋರಾಗಿತ್ತು. ಗ್ರಾಮೀಣ ಪ್ರದೇಶದ ಜನರೂ ಇಲ್ಲಿಗೆ ಕುರಿ ಮೇಕೆ ತಂದು ಮಾರಾಟಕ್ಕೆ ಇಟ್ಟಿದ್ದರು. ಕುರಿಗಳ ಗಾತ್ರ ತಳಿ ವಯಸ್ಸಿನ ಆಧಾರದಲ್ಲಿ ಕನಿಷ್ಠ ₹15 ಸಾವಿರದಿಂದ ₹60 ಸಾವಿರದವರೆಗೂ ಮಾರಾಟ ನಡೆಯಿತು. ಬನ್ನೂರು ಕುರಿಗಳಿಗೆ ಬೇಡಿಕೆ ಹಾಗೂ ಬೆಲೆ ಹೆಚ್ಚಿತ್ತು. ಹಬ್ಬದ ದಿನ ವಿಶೇಷವಾಗಿ ಬಿರಿಯಾನಿ ಸೇರಿದಂತೆ ತರಹೇವಾರಿ ಮಾಂಸದ ಖಾದ್ಯಗಳನ್ನು ತಯಾರು ಮಾಡುವುದರಿಂದ ಮಾರುಕಟ್ಟೆಯಲ್ಲಿ ಮಟನ್‌ ಬೆಲೆಯೂ ಹೆಚ್ಚಳವಾಗಿದೆ. ಕೆ.ಜಿ.ಗೆ ₹650ರಿಂದ ₹700ರವರೆಗೆ ಮಾರಾಟವಾಗುತ್ತಿದೆ.
ಬಕ್ರೀದ್ ಆಚರಣೆ ಹಿನ್ನೆಲೆ
‘ಪ್ರವಾದಿ ಇಬ್ರಾಹಿಂ ಅವರು ಅಲ್ಲಾಹುವಿನ ಆಪ್ತರು. ಅಲ್ಲಾಹು ಒಡ್ಡಿದ ಹಲವು ಬಗೆಯ ಪರೀಕ್ಷೆಗಳಲ್ಲಿ ಜಯಿಸಿದವರು. ಅಲ್ಲಾಹುವಿನ ಇಚ್ಛೆಯಂತೆ ಎಲ್ಲ ಪ್ರೀತಿಯ ವಸ್ತುಗಳನ್ನು ತ್ಯಾಗ ಮಾಡಿದವರು ಎಂದು ನಂಬಲಾಗುತ್ತದೆ. ಒಂದು ದಿನ ಇಬ್ರಾಹಿಂ ಅವರ ಕನಸಿನಲ್ಲಿ ಬಂದ ಅಲ್ಲಾಹು ‘ನಿನಗೆ ಅಮೂಲ್ಯ ಎನಿಸುವುದನ್ನು ನನಗೆ ಸಮರ್ಪಿಸು’ ಎಂದು ಆದೇಶಿಸುತ್ತಾರೆ. ಹೀಗಾಗಿ ತಮಗೆ ಅಮೂಲ್ಯವಾಗಿರುವ ಹಾಗೂ ಏಕೈಕ ಪುತ್ರ ಇಸ್ಮಾಯಿಲ್ ಅವರನ್ನು ಬಲಿ ನೀಡಲು ಇಬ್ರಾಹಿಂ ನಿರ್ಧರಿಸುತ್ತಾರೆ. ಇಸ್ಮಾಯಿಲ್ ಕತ್ತಿನ ಮೇಲೆ ಎಷ್ಟೇ ಸಲ ಕತ್ತಿ ಚಲಾಯಿಸಿದರೂ ಅದು ಹರಿಯುವುದಿಲ್ಲ. ಪುತ್ರ ವಾತ್ಸಲ್ಯದಿಂದ ಹೀಗಾಗುತ್ತಿದೆ ಎಂದುಕೊಂಡ ಇಬ್ರಾಹಿಂ ಅವರು ತಮ್ಮ ಕಣ್ಣುಗಳಿಗೆ ಬಟ್ಟೆ ಕಟ್ಟಿಕೊಂಡು ಕತ್ತಿ ಪ್ರಯೋಗಿಸುತ್ತಾರೆ. ಅಷ್ಟೊತ್ತಿಗೆ ಆತನ ಪರೀಕ್ಷೆ ನಿಲ್ಲಿಸಿದ್ದ ಅಲ್ಲಾಹು ಜಿಬ್ರಾಯಿಲ್‌ನನ್ನು ಕಳುಹಿಸಿರುತ್ತಾನೆ. ಜಿಬ್ರಾಯಿಲ್‌ ಬಂದು ಇಸ್ಮಾಯಿಲ್‌ ಜಾಗದಲ್ಲಿ ಕುರಿಯೊಂದನ್ನು ಇಟ್ಟಿರುತ್ತಾರೆ. ಇಬ್ರಾಹಿಂ ಕಣ್ತೆರೆದಾಗ ಅಲ್ಲಿ ಕುರಿಯ ಬಲಿ ನಡೆದಿತ್ತು. ಅಲ್ಲಾಹು ಒಡ್ಡಿದ ಸತ್ವ ಪರೀಕ್ಷೆಯನ್ನು ಇಬ್ರಾಹಿಂ ಗೆದ್ದಿದ್ದರು. ಅಂದಿನಿಂದ ಬಲಿ ಕರ್ಮ ಇಸ್ಲಾಮಿನ ಭಾಗವಾಗಿದ್ದು ಬಕ್ರೀದ್ ದಿನ ಪ್ರಾಣಿ ಬಲಿ ನೀಡಲಾಗುತ್ತಿದೆ’ ಎಂದು ಬಕ್ರೀದ್ ಆಚರಣೆಯ ಹಿನ್ನೆಲೆಯನ್ನು ಮುಸ್ಲಿಂ ಧರ್ಮಗುರು ಪೀರ್ ಸಯ್ಯದ್ ತಾಜುದ್ದೀನ್ ಖಾದ್ರಿ ಬಗದಾದಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.