ಹುಬ್ಬಳ್ಳಿ: 'ಅವಳಿನಗರದಲ್ಲಿ ಗಣೇಶ ಹಬ್ಬಕ್ಕೆ ಮೂರ್ತಿ ಕಲಾವಿದರು ಯಾವುದೇ ಕಾರಣಕ್ಕೂ ಪಿಒಪಿ ಮೂರ್ತಿ ತಯಾರಿಸದಂತೆ ಸಂಪೂರ್ಣ ನಿಷೇಧ ಹೇರಲು ಪಾಲಿಕೆ ಅಗತ್ಯ ಕ್ರಮ ಕೈಗೊಳ್ಳಬೇಕು' ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಅಧ್ಯಕ್ಷ ಸುಭಾಷ ಅಡಿ ಹೇಳಿದರು.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳ ಜೊತೆ ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಅವರು ಮಾತನಾಡಿದರು.
'ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಪ್ರತಿಷ್ಠಾಪನೆ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಅಧಿಕಾರಿಗಳು ಈಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಸಂಘ, ಸಂಸ್ಥೆಗಳು ಹೊರ ರಾಜ್ಯ ಅಥವಾ ಬೇರೆ ಜಿಲ್ಲೆಗಳಿಂದ ಪಿಒಪಿ ಮೂರ್ತಿಗಳನ್ನು ತಂದು ನಗರದಲ್ಲಿ ಪ್ರತಿಷ್ಠಾಪನೆ ಮಾಡಲು ಅವಕಾಶ ನೀಡಬಾರದು' ಎಂದು ಎಚ್ಚರಿಕೆ ನೀಡಿದರು.
'ಘನತ್ಯಾಜ್ಯ ನಿರ್ವಹಣೆ ಯಶಸ್ವಿಯಾಗಲು ಮೂಲದಲ್ಲಿಯೇ ಒಣ ಮತ್ತು ಹಸಿಕಸ ವಿಂಗಡಣೆಯಾಗಬೇಕು. ಎಲ್ಲಾ ವಾಲಯಾಧಿಕಾರಿಗಳು ಒಂದು ತಿಂಗಳ ಒಳಗೆ ಶೇ 100ರಷ್ಟು ಪ್ರಗತಿ ಸಾಧಿಸಬೇಕು. ಇದಕ್ಕಾಗಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಬೃಹತ್ ತ್ಯಾಜ್ಯ ಉತ್ಪಾದಕರಿಂದ ಬಳಕೆದಾರರ ಶುಲ್ಕವನ್ನು ಕಡ್ಡಾಯವಾಗಿ ಸಂಗ್ರಹಿಸಬೇಕು' ಎಂದು ತಿಳಿಸಿದರು.
'ಕಟ್ಟಡ ತ್ಯಾಜ್ಯ ನಿರ್ವಹಣೆಗೆ ನಗರದಲ್ಲಿ ಸಂಗ್ರಹಣಾ ಸ್ಥಳಗಳನ್ನು ಗುರುತಿಸಿ, ಪ್ರಕಟಣೆ ಹೊರಡಿಸಬೇಕು. ಬೀದಿಬದಿ ವ್ಯಾಪಾರಿಗಳು 'ಹಾಕರ್ಸ್ ಝೋನ್'ನಲ್ಲಿ ಮಾತ್ರ ವ್ಯಾಪಾರ ಮಾಡುವಂತೆ, ಪಾಲಿಕೆ ತಕ್ಷಣ ಸ್ಥಳಗಳನ್ನು ಗುರುತಿಸಿ ಅವರಿಗೆ ನೀಡಬೇಕು. ಪಾದಚಾರಿ ಮಾರ್ಗ, ರಸ್ತೆ ಅತಿಕ್ರಮಣ ತೆರವಿಗೆ ಸತತವಾಗಿ ಕಾರ್ಯಾಚರಣೆ ನಡೆಸಲು ಅಧಿಕಾರಿಗಳು ಮುಂದಾಗಬೇಕು' ಎಂದು ಸೂಚಿಸಿದರು.
‘ಧಾರವಾಡದ ಕೆಲಗೇರಿ ಕೆರೆಗೆ ಕೊಳಚೆ ನೀರು ಸೇರಿದಂತೆ ಪಾಲಿಕೆ ಯೋಜನೆ ರೂಪಿಸಿ ಕ್ರಮ ಕೈಗೊಳ್ಳಬೇಕು. ಉಣಕಲ್ ಕೆರೆಗೆ ಕೊಳಚೆ ನೀರು ಹರಿದು ಬರುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಇದಕ್ಕೆ ಕೂಡಲೇ ಪರಿಹಾರ ಕಂಡುಕೊಳ್ಳಬೇಕು' ಎಂದು ಸುಭಾಷ ಅಡಿ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.