ಹುಬ್ಬಳ್ಳಿ: ‘ಇವಿಎಂ ಹಟಾವೋ; ದೇಶ್ ಬಚಾವೋ’ ಎಂಬ ಆಗ್ರಹದೊಂದಿಗೆ ಉತ್ತರಾಖಂಡ್ ರಾಜ್ಯದ ರುದ್ರಪುರದಿಂದ ಪಾದಯಾತ್ರೆ ಮೂಲಕ ಹೊರಟಿರುವ ಕಾಂಗ್ರೆಸ್ ಕಾರ್ಯಕರ್ತ ಓಂಕಾರ್ ಸಿಂಗ್ ದಿಲ್ಹಾನ್ ಶುಕ್ರವಾರ ನಗರಕ್ಕೆ ಆಗಮಿಸಿದರು.
ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಓಂಕಾರ್ ಸಿಂಗ್ ದಿಲ್ಹಾನ್ ಅವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಅವರಿಗೆ ಮೈಸೂರು ಪೇಟೆ, ಶಾಲು ತೊಡಿಸಿ ಅಭಿನಂದಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ದಿಲ್ಹಾನ್, ‘ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇವಿಎಂ ಸೂಕ್ತವಲ್ಲ; ಮೊದಲಿನಂತೆ ಬ್ಯಾಲೆಟ್ ವೊಟಿಂಗ್ ವ್ಯವಸ್ಥೆ ಜಾರಿಯಾಗಬೇಕು ಎಂಬುದು ಪಾದಯಾತ್ರೆಯ ಉದ್ದೇವಾಗಿದೆ’ ಎಂದು ತಿಳಿಸಿದರು.
‘ಇವಿಎಂ ಬೇಡವೆಂದು ಆರಂಭದಲ್ಲೇ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಿರಿಯ ನಾಯಕ ಲಾಲ್‌ಕೃಷ್ಣ ಅಡ್ವಾಣಿ, ಸುಬ್ರಮಣಿಯನ್ ಸ್ವಾಮಿ ಅವರೇ ಆಕ್ಷೇಪ ಎತ್ತಿದ್ದರು’ ಎಂದು ಅವರು ನೆನಪಿಸಿದರು.
‘ಮೋದಿ ನೇತೃತ್ವದ ಎನ್‌ಡಿಯ ಸರ್ಕಾರದಲ್ಲಿ ಯಾವುದೇ ಜನಪರ ಕೆಲಸಗಳು ಆಗದೇ ಇದಿದ್ದರೂ ಇವಿಎಂ ದುರ್ಬಳಕೆಯಿಂದ ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆದು, ಅಧಿಕಾರಕ್ಕೆ ಬರುವಂತೆ ಆಯಿತು’ ಎಂದು ಅವರು ಆರೋಪಿಸಿದರು.
‘ಆಗಸ್ಟ್ 18ರಿಂದ ಆರಂಭವಾಗಿರುವ ಪಾದಯಾತ್ರೆಯು ರಾಜಸ್ತಾನ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರದ ಮೂಲಕ ಸಾಗಿ ಕರ್ನಾಟಕಕ್ಕೆ ಬಂದಿದ್ದೇನೆ. ಬೆಂಗಳೂರು ಮೂಲಕವಾಗಿ ತಮಿಳುನಾಡು, ಒಡಿಸ್ಸಾ ಮತ್ತು ಪಶ್ಚಿಮಬಂಗಾಳ ರಾಜ್ಯಗಳಲ್ಲಿ ಮೂಲಕವಾಗಿ ನವದೆಹಲಿಯ ರಾಜ್‌ಘಾಟ್‌ಗೆ ತೆರಳಿ, ಪಾದಯಾತ್ರೆಯನ್ನು ಅಲ್ಲಿ ಅಂತ್ಯಗೊಳಿಸುವುದಾಗಿ’ ಹೇಳಿದರು.
ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಮಹಿಳಾ ಘಟಕದ ಅಧ್ಯಕ್ಷೆ ದೀಪಾ ಗೌರಿ, ಮುಖಂಡರಾದ ಶಾಕೀರ್ ಸನದಿ, ರಜತ್ ಉಳ್ಳಾಗಡ್ಡಿಮಠ, ಇಮ್ರಾನ್ ಎಲಿಗಾರ, ಸಂತೋಷ ಜಕ್ಕಪ್ಪನವರ, ಗೋವಿಂದ ಬೆಲ್ದೋಣಿ, ಶಹಜಮಾನ್ ಮುಜಾವರ, ಸಿದ್ದಯ್ಯ ಜಂಬಗಿಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.