ADVERTISEMENT

ಹುಬ್ಬಳ್ಳಿ: ಮಕ್ಕಳ ಶಿಕ್ಷಣಕ್ಕೆ ಬರಿಗಾಲಲ್ಲಿ ಜಾಗೃತಿ

10 ವರ್ಷಗಳಿಂದ ದೇಶದಾದ್ಯಂತ ಅಭಿಯಾನ ನಿರತ ಅಜಯ್ ಓಲಿ

ಶಿವರಾಯ ಪೂಜಾರಿ
Published 20 ನವೆಂಬರ್ 2024, 4:23 IST
Last Updated 20 ನವೆಂಬರ್ 2024, 4:23 IST
ಅಜಯ ಓಲಿ
ಅಜಯ ಓಲಿ   

ಹುಬ್ಬಳ್ಳಿ: ಭಿಕ್ಷಾಟನೆ ಮತ್ತು ಬಾಲಕಾರ್ಮಿಕ ಪದ್ಧತಿಯಡಿ ಸಂಕಷ್ಟ ಅನುಭವಿಸುತ್ತಿರುವ ಮಕ್ಕಳ ಏಳ್ಗೆ ಮತ್ತು ರಕ್ಷಣೆಗೆ ಉತ್ತರಾಖಂಡ ರಾಜ್ಯದ ಪಿಥೋರಘಡದ ಅಜಯ್ ಓಲಿ ಅವರು 10 ವರ್ಷಗಳಿಂದ ಬರಿಗಾಲು ನಡಿಗೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಮಾನವ ಸಂಪನ್ಮೂಲ ಸ್ನಾತಕೋತ್ತರ ಪದವೀಧರರಾದ ಅಜಯ್ ಅವರು ಶ್ರೀಮಂತ ಕುಟುಂಬ ಹಿನ್ನೆಲೆಯುಳ್ಳವರು. ತಂದೆ ನಿವೃತ್ತ ಯೋಧರು. ಪತ್ನಿ ಚಂದ್ರಾ ಓಲಿ ವಕೀಲರು. ದತ್ತು ಪಡೆದ ಮಗು 11 ತಿಂಗಳಿಗೆ ಮೃತಪಟ್ಟ ಕಾರಣ ಅನಾಥ, ಭಿಕ್ಷಾಟನೆ, ಬಾಲಕಾರ್ಮಿಕ ಮಕ್ಕಳ ರಕ್ಷಣೆಗೆ ಪಣತೊಟ್ಟರು.

‘ಮಕ್ಕಳ ಶಿಕ್ಷಣ ಮತ್ತು ಏಳ್ಗೆಗೆಂದೇ 2015ರಲ್ಲಿ ಘನಶ್ಯಾಮ್ ಓಲಿ ಚೈಲ್ಡ್‌ ವೆಲ್‌ಫೇರ್ ಸೊಸೈಟಿ ಎಂಬ ಸ್ವಯಂಸೇವಾ ಸಂಸ್ಥೆ ಆರಂಭಿಸಿದೆ. ಕೊಳೆಗೇರಿ ಪ್ರದೇಶ ಹಾಗೂ ಅಲೆಮಾರಿಗಳು ವಾಸಿಸುವ ಪ್ರದೇಶಗಳಿಗೆ ಭೇಟಿ ನೀಡಿ, ಮಕ್ಕಳನ್ನು ದುಡಿಮೆ ಮತ್ತು ಭಿಕ್ಷಾಟನೆಗೆ ದೂಡದೆ, ಶಿಕ್ಷಣ ಕೊಡಿಸುವಂತೆ ಅರಿವು ಮೂಡಿಸುತ್ತೇವೆ. ಅವರಿಗೆ ಸ್ವಂತ ಹಣದಲ್ಲಿ ಕಲಿಕಾ ಸಾಮಗ್ರಿ ಒದಗಿಸಿ, ಶಿಕ್ಷಣ ಪಡೆಯಲು ಪ್ರೇರೇಪಿಸುತ್ತೇವೆ’ ಎಂದು ಅಜಯ್ ಓಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ವರ್ಷದಲ್ಲಿ ಮೂರು ಸಲ ದೇಶದಾದ್ಯಂತ 55 ದಿನಗಳ ಅಭಿಯಾನ ಹಮ್ಮಿಕೊಳ್ಳುತ್ತೇನೆ. ದಿನಕ್ಕೆ 15 ಕಿ.ಮೀ.ನಂತೆ ಬರಿಗಾಲಿನಲ್ಲಿ ನಡೆದು ಪ್ರಮುಖ ನಗರಗಳಲ್ಲಿ ಸ್ಥಳೀಯ ಮುಖಂಡರ ಹಾಗೂ ಸಂಘಟನೆಗಳ ಪ್ರತಿನಿಧಿಗಳನ್ನು ಭೇಟಿಯಾಗಿ, ಅವರಿಂದ ಸಹಕಾರ ಕೋರುತ್ತೇನೆ’ ಎಂದು ಅವರು ತಿಳಿಸಿದರು.

‘35ನೇ ಅಭಿಯಾನದ ಪ್ರಯುಕ್ತ ಮೊದಲ ಬಾರಿಗೆ ಕರ್ನಾಟಕದ ವಿಜಯಪುರ, ಧಾರವಾಡ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಂಗಳೂರು, ಮೈಸೂರು ಜಿಲ್ಲೆಗಳಲ್ಲಿ ಅಭಿಯಾನ ನಡೆಸುವೆ. ಎಜ್ಯುಕೇಷನ್ ಆನ್ ವೀಲ್ಸ್ (ಇಒಡಬ್ಲ್ಯೂ) ಯೋಜನೆ ಮೂಲಕ ಚಲಿಸುವ ಶಾಲೆಯ ಪರಿಕಲ್ಪನೆ ಪರಿಚಯಿಸಿದ್ದು, ಕೊಳೆಗೇರಿ ಪ್ರದೇಶ ಹಾಗೂ ಅಲೆಮಾರಿ ಜನಾಂಗದ ಮಕ್ಕಳಿಗೆ ಸ್ಥಳದಲ್ಲೇ ಶಿಕ್ಷಣ ಒದಗಿಸುವ ಕಾರ್ಯ ಮಾಡುತ್ತಿರುವೆ’ ಎಂದರು.

‘ವಿಜಯಪುರದಲ್ಲಿ ರೂಪಾದೇವಿ ಸಿಬಿಎಸ್‌ಸಿ ಪಬ್ಲಿಕ್ ಸ್ಕೂಲ್ ಹಾಗೂ ಹುಬ್ಬಳ್ಳಿಯಲ್ಲಿ ಧಾರವಾಡ ಬಂಟರ ಸಂಘದ ಆರ್‌ಎನ್‌ಎಸ್ ವಿದ್ಯಾನಿಕೇತನ ಶಾಲೆಯ ಸಹಯೋಗದಲ್ಲಿ ಕೊಳೆಗೇರಿ ಸ್ಥಳಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗಿದೆ. ಜಾಗೃತಿ ಅಭಿಯಾನದ ಮೂಲಕ ಈವರೆಗೂ ದೇಶಾದ್ಯಂತ 17 ಸಾವಿರಕ್ಕೂ ಅಧಿಕ ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿ ಮತ್ತು ಭಿಕ್ಷಾಟನೆಯಿಂದ ಮುಕ್ತಗೊಳಿಸಲಾಗಿದೆ’ ಎನ್ನುತ್ತಾರೆ ಅಜಯ ಓಲಿ.

ಅವರ ಸಮಾಜಮುಖಿ ಕಾರ್ಯವು 2019ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ. ಅಲ್ಲದೆ, 2021ರಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ಯುವ ಪುರಸ್ಕಾರಕ್ಕೂ ಅವರು ಪಾತ್ರರಾಗಿದ್ದಾರೆ.

ಹುಬ್ಬಳ್ಳಿಯ ಆರ್.ಎನ್‌.ಎಸ್ ವಿದ್ಯಾನಿಕೇತನ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಾಲ ಕಾರ್ಮಿಕ ಪದ್ಧತಿ ಹಾಗೂ ಭಿಕ್ಷಾಟನೆ ಕುರಿತು ಅಜಯ ಓಲಿ ಜಾಗೃತಿ ಮೂಡಿಸಿದರು
ಘನಶ್ಯಾಮ್ ಓಲಿ ಚೈಲ್ಡ್‌ ವೆಲ್‌ಫೇರ್ ಸೊಸೈಟಿ ಹೆಸರಿನ ಎನ್‌ಜಿಒ ಮೂಲಕ ಕೊಳೆಗೇರಿ ಪ್ರದೇಶ ಮಕ್ಕಳಿಗೆ ಶಿಕ್ಷಣದ ಕುರಿತು ಜಾಗೃತಿ ಮೂಡಿಸುತ್ತಿರುವುದು
ಘನಶ್ಯಾಮ್ ಓಲಿ ಚೈಲ್ಡ್‌ ವೆಲ್‌ಫೇರ್ ಸೊಸೈಟಿ ಮೂಲಕ ಕೊಳೆಗೇರಿ ಪ್ರದೇಶದ ಹಾಗೂ ಅಲೆಮಾರಿ ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು
10 ವರ್ಷಗಳಲ್ಲಿ ದೇಶದಾದ್ಯಂತ 34 ಜಾಗೃತಿ ಅಭಿಯಾನ ನಡೆಸಿ 1 ಲಕ್ಷ ಕಿ.ಮೀ.ಗೂ ಹೆಚ್ಚು ದೂರ ಬರಿಗಾಲಲ್ಲಿ ಓಡಾಡಿದ್ದೇನೆ. 35ನೇ ಅಭಿಯಾನದ ಭಾಗವಾಗಿ 7500 ಕಿ.ಮೀ ಪಾದಯಾತ್ರೆಯ ಗುರಿಯಿದೆ.
ಅಜಯ್ ಓಲಿ ಸಂಸ್ಥಾಪಕ ಘನಶ್ಯಾಮ್ ಓಲಿ ಚೈಲ್ಡ್‌ ವೆಲ್‌ಫೇರ್ ಸೊಸೈಟಿ

ಭಿಕ್ಷಾಟನೆಯ 11 ಮಕ್ಕಳ ದತ್ತು ಸ್ವೀಕಾರ

‘ಭಿಕ್ಷಾಟನೆಯಲ್ಲಿ ತೊಡಗಿದ್ದ 11 ಮಕ್ಕಳನ್ನು ದತ್ತು ಪಡೆದು ಅವರಿಗೆ ಕೌಶಲಾಧಾರಿತ ಶಿಕ್ಷಣ ನೀಡಲಾಗುತ್ತಿದೆ. ಪ್ರತಿ ವರ್ಷವೂ ಅವರು ರಾಖಿ ತಯಾರಿಸಿ ಸೈನಿಕರಿಗೆ ಕಳುಹಿಸುತ್ತಾರೆ. ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಜಾಗೃತಿ ಅಭಿಯಾನ ನಡೆಸುತ್ತಿದ್ದು ದೇಶದಾದ್ಯಂತ 1300 ಸ್ವಯಂ ಸೇವಕರು ಕೈಜೋಡಿಸಿದ್ದಾರೆ. ಈ ಬಗ್ಗೆ ಮತ್ತಷ್ಟು ಜಾಗೃತಿ ಆಗಬೇಕು’ ಎಂದು ಅಜಯ್ ಓಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.