ಹುಬ್ಬಳ್ಳಿ: ‘ಶಿಗ್ಗಾವಿ ಉಪಚುನಾವಣೆಯಲ್ಲಿ ಹಣ ಹಂಚುವುದರಲ್ಲಿ ಕಾಂಗ್ರೆಸ್ ನಾಯಕರ ನಡುವೆಯೇ ಪೈಪೋಟಿ ಏರ್ಪಟ್ಟಿದ್ದು, ಶಾಸಕರು ಸಮುದಾಯವಾರು ಹಣ ಹಂಚಿಕೆ ಮಾಡುತ್ತಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಹಂಚುವುದನ್ನು ನೋಡಿರಲಿಲ್ಲ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಸರ್ಕಾರದಿಂದ ಲೂಟಿ ಮಾಡಿದ ಹಣವನ್ನು ಶಿಗ್ಗಾವಿ ಕ್ಷೇತ್ರದ ಮತದಾರರಿಗೆ ಹಂಚುತ್ತಿದ್ದಾರೆ’ ಎಂದು ಆರೋಪಿಸಿದರು.
‘ಹಾನಗಲ್ ರೈತ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ’ ಎನ್ನುವ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಆತ್ಮಹತ್ಯೆ ಮಾಡಿಕೊಂಡ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಅದನ್ನು ತೆಗೆಸಲು ಅವರು ನಾಲ್ಕು-ಐದು ವರ್ಷ ಅಲೆದಾಡಿದ್ದಾರೆ. ವಕ್ಫ್‌ಗೆ ಹೋದರೂ ನ್ಯಾಯ ಸಿಗುವುದಿಲ್ಲ ಎಂದು ಅರಿವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬದವರು ಸಹ ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬರೆದುಕೊಟ್ಟಿದ್ದಾರೆ' ಎಂದು ಹೇಳಿದರು.
‘ವಕ್ಫ್ ಕುರಿತು ರೈತರಿಗೆ ನೋಟಿಸ್ ಕೊಟ್ಟಿರುವುದನ್ನು ವಾಪಸ್ ಪಡೆಯುವ ಆದೇಶ ಕಣ್ಣೊರೆಸುವ ತಂತ್ರ. ಎಲ್ಲಿಯವರೆಗೆ ಗೆಜೆಟ್ ನೋಟಿಫಿಕೇಷನ್ ವಾಪಸ್ ಪಡೆಯುವುದಿಲ್ಲವೋ ಅಲ್ಲಿಯವರೆಗೆ ರೈತರ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ’ ಎಂದು ಬೊಮ್ಮಾಯಿ ಹೇಳಿದರು.
‘ಕಾನೂನು ಪ್ರಕಾರ ಖರೀದಿ’
‘ಕೋವಿಡ್ ಸಂದರ್ಭ ಬಿಜೆಪಿ ಹಗರಣ ನಡೆಸಿದೆ’ ಎನ್ನುವ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಂಸದ ಬೊಮ್ಮಾಯಿ, ‘ಕೋವಿಡ್ ಸಂದರ್ಭದಲ್ಲಿ ಪಿಪಿಇ ಕಿಟ್ ಇಲ್ಲದ ಕಾರಣ, ಸೋಂಕು ತಗುಲಿ ಜನ ಮೃತಪಡುತ್ತಿದ್ದರು. ಆರೋಗ್ಯ ತುರ್ತುಪರಿಸ್ಥಿತಿ ಎದುರಾಗಿದ್ದಾಗ, ವೈದ್ಯರು ಪಿಪಿಇ ಕಿಟ್ ಇಲ್ಲದಿದ್ದರೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಪಿಪಿಇ ಕಿಟ್ ಇಲ್ಲದಿದ್ದರೆ ಸಾಯುತ್ತಾರೆ ಎನ್ನುವ ಭಯ ಸಹ ಇತ್ತು. ಆಗ ಅವುಗಳನ್ನು ಕಾನೂನು ಪ್ರಕಾರವೇ ಖರೀದಿ ಮಾಡಿದ್ದೆವು. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅದನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳುತ್ತಿದೆ. ವಿರೋಧ ಪಕ್ಷದ ನಾಯಕರ ಧ್ವನಿ ಕುಗ್ಗಿಸಲು ಹೀಗೆ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿಗ್ಗಾವಿ ಅಭಿವೃದ್ಧಿ ಮಾಡದ ಬೊಮ್ಮಾಯಿ: ಖಂಡ್ರೆ
ಹುಬ್ಬಳ್ಳಿ: ‘ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಶಿಗ್ಗಾವಿ ಕ್ಷೇತ್ರಕ್ಕೆ ಯಾವ ಕೊಡುಗೆಯನ್ನೂ ನೀಡಿಲ್ಲ. ಹೀಗಿದ್ದಾಗ ಯಾವ ಮುಖ ಇಟ್ಟುಕೊಂಡು ಅವರು ಅಲ್ಲಿ ಮತ ಯಾಚಿಸುತ್ತಾರೆ’ ಎಂದು ಸಚಿವ ಈಶ್ವರ ಖಂಡ್ರೆ ಪ್ರಶ್ನಿಸಿದರು. ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಶಿಗ್ಗಾವಿಯಲ್ಲಿ ಬಿಜೆಪಿಯಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಒಂದು ಕ್ರೀಡಾಂಗಣ ನಿರ್ಮಿಸಿಕೊಡಿ ಎಂದು ಅಲ್ಲಿಯ ಯುವಕರು ವಿನಂತಿಸಿದ್ದರೂ ಅವರಿಂದ ಸಾಧ್ಯವಾಗಿಲ್ಲ. ಯಾವ ಅಭಿವೃದ್ಧಿ ಕೆಲಸಗಳನ್ನೂ ಮಾಡದೆ ಯುವಕರಿಂದ ಮತ್ತು ರೈತರಿಂದ ಮತ ಯಾಚಿಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು. ‘ಶಿಗ್ಗಾವಿ ಕ್ಷೇತ್ರದ ಜನತೆಗೆ ಪ್ರಗತಿ ಬೇಕಾಗಿದ್ದು ಕಾಂಗ್ರೆಸ್‌ಗೆ ಬೆಂಬಲ ಸೂಚಿಸುತ್ತಿದ್ದಾರೆ. ಉಪ ಚುನಾವಣೆಯ ಮೂರು ಕ್ಷೇತ್ರದಲ್ಲೂ ಕಾಂಗ್ರೆಸ್ ಪರ ಅಲೆ ಇದೆ. ಸ್ಪಷ್ಟ ಬಹುಮತ ಪಡೆದು ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಯಾವುದೇ ಭ್ರಷ್ಟಾಚಾರ ನಡೆಸದೆ ನಾವು ಅಭಿವೃದ್ದಿ ಮಾಡಿ ತೋರಿಸಿದ್ದೇವೆ. ಮಧ್ಯವರ್ತಿ ಇಲ್ಲದೆ ಪಂಚಗ್ಯಾರಂಟಿ ಯೋಜನೆ ನೀಡಿ ನುಡಿದಂತೆ ನಡೆದಿದ್ದೇವೆ ’ ಎಂದರು. ‘ನಮ್ಮ ಅಭ್ಯರ್ಥಿ ಯಾಸಿರಖಾನ್ ಪಠಾಣ್ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ‘ಹಿಟ್ಲರ್ ಆಡಳಿತ’: ‘ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದಾಗ ಕೇಂದ್ರ ಸರ್ಕಾರದಿಂದ ಸುತ್ತೋಲೆ ಬಂದಿದೆ ಎಂದು ಹಿಂದುಳಿದ ವರ್ಗದ ಮಕ್ಕಳ ಶಿಷ್ಯವೇತನ ಬಂದ್ ಮಾಡಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ. ದೇಶದಲ್ಲಿ ಅವರದ್ದು ಹಿಟ್ಲರ್ ಶಾಹಿ ಆಡಳಿತ’ ಎಂದು ಖಂಡ್ರೆ ಅಕ್ರೋಶ ವ್ಯಕ್ತಪಡಿಸಿದರು.
‘ಇಡೀ ಸರ್ಕಾರವೇ ಶಿಗ್ಗಾವಿಯಲ್ಲಿದೆ’
ಹುಬ್ಬಳ್ಳಿ: ‘ಶಿಗ್ಗಾವಿ ಕ್ಷೇತ್ರದ ಉಪಚುನಾವಣೆಯನ್ನು ಕಾಂಗ್ರೆಸ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಇಡೀ ಸರ್ಕಾರವೇ ಅಲ್ಲಿ ಬೀಡು ಬಿಟ್ಟಿದೆ. ಒಂದೊಂದು ಪಂಚಾಯ್ತಿ ಜವಾಬ್ದಾರಿಯನ್ನು ಒಬ್ಬೊಬ್ಬ ಸಚಿವ ಶಾಸಕರಿಗೆ ವಹಿಸಲಾಗಿದೆ’ ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಟೀಕಿಸಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಪಂಚಾಯಿತಿಗಲ್ಲ; ಮನೆಗೆ ಒಬ್ಬ ಸಚಿವ ಬಂದು ಕುಳಿತರೂ ಭರತ್ ಬೊಮ್ಮಾಯಿ ಗೆಲುವು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅವರು ಎಷ್ಟೇ ಹಣದ ಹೊಳೆ ಹರಿಸಿದರೂ ಮತದಾರರು ಬಿಜೆಪಿಗೇ ಮತ ಹಾಕುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.