ADVERTISEMENT

ಶತಮಾನದ ದೊಡ್ಡಾಟ ಮೇಳ

ದೇಶದ ವಿವಿಧೆಡೆ ಕಲಾ ಪ್ರದರ್ಶನ: ಆಸಕ್ತರಿಗೆ ಬೋಧನೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2024, 5:47 IST
Last Updated 7 ಜನವರಿ 2024, 5:47 IST
ಧಾರವಾಡದ ರಂಗಾಯಣದಲ್ಲಿ ‘ಲಂಕಾದಹನ’ ದೊಡ್ಡಾಟದ ಪ್ರದರ್ಶನಕ್ಕೆ ತಯಾರಾಗಿದ್ದ ಬಸವೇಶ್ವರ ದೊಡ್ಡಾಟ ಮೇಳದ ಕಲಾವಿದರು
ಧಾರವಾಡದ ರಂಗಾಯಣದಲ್ಲಿ ‘ಲಂಕಾದಹನ’ ದೊಡ್ಡಾಟದ ಪ್ರದರ್ಶನಕ್ಕೆ ತಯಾರಾಗಿದ್ದ ಬಸವೇಶ್ವರ ದೊಡ್ಡಾಟ ಮೇಳದ ಕಲಾವಿದರು   

ಕುಂದಗೋಳ: ತಾಲ್ಲೂಕಿನ ಪುಟ್ಟ ಗ್ರಾಮ ಹೀರೆಹರಕುಣಿಯ ಜನರ ಪ್ರಮುಖ ಕಸಬು ಕೃಷಿಯಾಗಿದ್ದರೂ, ಹಲವಾರು ವರ್ಷಗಳಿಂದ ದೊಡ್ಡಾಟ ಕಲೆಗೆ ಪ್ರೇರಣೆ, ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.

ಇಲ್ಲಿನ ಶ್ರೀ ಬಸವೇಶ್ವರ ದೊಡ್ಡಾಟ ಮೇಳವು  ನೂರು ವರ್ಷಗಳಿಂದ ಕಲಾ ಸೇವೆಯಲ್ಲಿ ತೊಡಗಿಕೊಂಡಿದೆ. ಕಲಾಪ್ರೇಮಿ ಚೋಳಯ್ಯ ಗುರಯ್ಯನವರಿಂದ ಆರಂಭವಾದ ಈ ಮೇಳ, ಆನಂತರ ಅವರ ಮಗ ಶಿವಯ್ಯ ಗುರಯ್ಯನವರ ಮಡಿಲು ಸೇರಿತು. ಬಳಿಕ ಮೇಳ ನಡೆಸಲು ಟೊಂಕ ಕಟ್ಟಿ ನಿಂತಿರುವವರು ಚಂದ್ರಶೇಖರಯ್ಯ ಗುರಯ್ಯನವರ.

16ನೇ ವಯಸ್ಸಿನಿಂದಲೇ ದೊಡ್ಡಾಟದ ಬಗ್ಗೆ ಆಸಕ್ತಿ ಬೆಳೆಸಿಕೊಂಡು, ಇಡೀ ಜೀವನವನ್ನು ಕಲೆಗಾಗಿ ಮುಡಿಪಾಗಿಟ್ಟವರು ಅವರು. ಅವರಿಗೀಗ 52 ವರ್ಷ. ಮಕ್ಕಳಿಗೆ ಉಚಿತವಾಗಿ ದೊಡ್ಡಾಟ ಕಲಿಸುತ್ತಾರೆ. ದೊಡ್ಡಾಟ ತಂಡ ಕಟ್ಟಿಕೊಂಡು ದೇಶದ ವಿವಿಧ ಭಾಗದಲ್ಲಿ ಪ್ರದರ್ಶಿಸುತ್ತಾ, ಕಲೆ ಎಲ್ಲೆಡೆ ಪಸರಿಸಲು ಶ್ರಮಿಸುತ್ತಿದ್ದಾರೆ. ತಾಲ್ಲೂಕು ವ್ಯಾಪ್ತಿಯಲ್ಲಿ ಅನೇಕ ದೊಡ್ಡಾಟ ಮೇಳಗಳಿದ್ದರೂ, ಇಷ್ಟು ಹಳೆಯ ಮೇಳ ಬೇರೊಂದಿಲ್ಲ.

ADVERTISEMENT

2016ರಲ್ಲಿ ದೆಹಲಿಯಲ್ಲಿ ನಡೆದ ಭಾರತ ರಂಗ ಮಹೋತ್ಸವದಲ್ಲಿ, ಅಸ್ಸೋಂನ ಗುಹಾವಟಿಯಲ್ಲಿ ನಡೆದ 8ನೇ ಥಿಯೇಟರ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಪ್ರದರ್ಶನ ನೀಡಿದ್ದರು. ರಾಜ್ಯದ ಬಾಗಲಕೋಟೆ, ಧಾರವಾಡ, ವಿಜಯಪುರ, ಮೈಸೂರು, ಬಳ್ಳಾರಿ, ಕುಂದಾಪುರ ಮೊದಲಾದೆಡೆ ಕಾರ್ಯಕ್ರಮ ನೀಡಿದ್ದಾರೆ.

ಬಸವೇಶ್ವರ ದೊಡ್ಡಾಟ ಮೇಳದಲ್ಲಿ 16 ವರ್ಷದೊಳಗಿನ, 16–22 ವರ್ಷ ವಯೋಮಾನದ ಹಾಗೂ 35 ವರ್ಷದವರ ಮೂರು ತಂಡಗಳಿವೆ. ಭಾಗವತ ಕಥೆಗಾರನಾಗಿ ಚಂದ್ರಶೇಖರಯ್ಯ, ಹಾರ್ಮೋನಿಯಂನಲ್ಲಿ ಮಾಸ್ತರ ಚನ್ನಪ್ಪ ಮೇಟಿ, ಮದ್ದಳೆಯಲ್ಲಿ ವೀರಭದ್ರಪ್ಪ ಗುರಯ್ಯನವರ ಮತ್ತು ಯಲ್ಲಪ್ಪ ಕುರಟ್ಟಿ, ಹಿಮ್ಮೇಳದಲ್ಲಿ ಗದಿಗೆಪ್ಪ ಕುರಟ್ಟಿ, ಶಹನಾಯ್‌ದಲ್ಲಿ ಯಲ್ಲಪ್ಪ ಭಜಂತ್ರಿ, ವೇಷ ಭೂಷಣದ ಉಸ್ತುವಾರಿಯಾಗಿ ಶಂಕರ ಅರ್ಕಸಾಲಿ ಇದ್ದಾರೆ. 

ಲಂಕಾದಹನ, ದಕ್ಷಯಜ್ಞ, ದೇವಿ ಮಹಾತ್ಮೆ, ವಾಲಿ-ಸುಗ್ರೀವ ಕಾಳಗ, ಭೀಮಾರ್ಜುನ ಗರ್ವಭಂಗ, ರತಿ ಕಲ್ಯಾಣ, ತಾಮ್ರ ಧ್ವಜದಂತಹ ಅನೇಕ ಕಥೆಗಳಿಗೆ ಈ ದೊಡ್ಡಾಟ ಮೇಳ ಜೀವ ತುಂಬುತ್ತಿದೆ.  

‘ಇಂದಿನ ಮಕ್ಕಳು ಬಹುತೇಕ ಸಮಯವನ್ನು ಮೊಬೈಲ್‌ ಫೋನ್‌ನಲ್ಲಿಯೇ ಕಳೆಯುತ್ತಿದ್ದಾರೆ. ಅವರಿಗೆ ಸಂಗೀತ, ನಾಟಕ, ದೊಡ್ಡಾಟ, ರಂಗ ಗೀತೆ, ವಾದ್ಯಗಳ ಅರಿವೇ ಇಲ್ಲ. ಇಂತಹ ಕಲೆಗಳನ್ನು ಉಳಿಸುವ ನಮ್ಮಂಥ ಕಲಾ ತಂಡಗಳಿಗೆ ಸರ್ಕಾರದಿಂದ ಯಾವುದೇ ಸಹಾಯ ಸಿಗುತ್ತಿಲ್ಲ. ಕಾರ್ಯಕ್ರಮದ ಅಯೋಜಕರು ಹಣ ನೀಡಿದ್ದರೇ ಜೀವನ ನಿರ್ವಹಣೆ ಮಾಡಬೇಕಿದೆ’ ಎನ್ನುತ್ತಾರೆ ಚಂದ್ರಶೇಖರಯ್ಯ.

ಧಾರವಾಡದ ರಂಗಾಯಣದಲ್ಲಿ ‘ಲಂಕಾದಹನ’ ದೊಡ್ಡಾಟದ ಪ್ರದರ್ಶನಕ್ಕೆ ತಯಾರಾಗಿರುವ ಬಸವೇಶ್ವರ ದೊಡ್ಡಾಟ ಮೇಳ.

ಕಲಿಯುವ ಆಸಕ್ತಿ ಇದ್ದರವರು ಯಾರೇ ಬಂದರು ದೊಡ್ಡಾಟ ಕಲಿಸಲಾಗುವುದು. ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ– ಚಂದ್ರಶೇಖರಯ್ಯ ದೊಡ್ಡಾಟ ಕಲಾವಿದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.