ADVERTISEMENT

ಹುಬ್ಬಳ್ಳಿ: ಪರೀಕ್ಷಾ ಕೇಂದ್ರದಲ್ಲಿ ಹೆಜ್ಜೇನು ದಾಳಿ

ವಿದ್ಯಾರ್ಥಿ ಸೇರಿ ಐವರಿಗೆ ಗಾಯ: ಇಬ್ಬರು ಆಸ್ಪತ್ರೆಗೆ ದಾಖಲು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 3:26 IST
Last Updated 5 ಏಪ್ರಿಲ್ 2022, 3:26 IST
ಹೆಜ್ಜೇನುಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಪೊಲೀಸರು ಬಟ್ಟೆ ಹೊದ್ದುಕೊಂಡಿದ್ದರು
ಹೆಜ್ಜೇನುಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಪೊಲೀಸರು ಬಟ್ಟೆ ಹೊದ್ದುಕೊಂಡಿದ್ದರು   

ಹುಬ್ಬಳ್ಳಿ: ನಗರದ ಕೇಶ್ವಾಪುರದ ಸರ್ವೋದಯ ವೃತ್ತದ ಬಳಿಯ ಸೇಂಟ್ ಮೈಕಲ್ಸ್ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದ ಬಳಿ ಸೋಮವಾರ ಬೆಳಿಗ್ಗೆ 9.45ರ ಸುಮಾರಿಗೆ ಹೆಜ್ಜೇನು ದಾಳಿ ನಡೆಸಿದ್ದು, ವಿದ್ಯಾರ್ಥಿ ಸೇರಿದಂತೆ ಐವರು ಗಾಯಗೊಂಡಿದ್ದಾರೆ.

ವಿದ್ಯಾರ್ಥಿ ಇಮಾಮ್ ಜಾಫರ್ ಸಾಧಿಕ್, ಶಾಲೆ ಬಳಿ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಮಹಿಳಾ ಕಾನ್‌ಸ್ಟೆಬಲ್ ವಾಣಿ ಅಜಯ್ ದ್ಯಾವನೂರ, ವಿದ್ಯಾರ್ಥಿನಿ ತಾಯಿ ಭುವನೇಶ್ವರಿ ಕೆ, ಶಾಲೆ ಸಿಬ್ಬಂದಿ ಪ್ರಕಾಶ ಬಲರಾಮ ಮತ್ತು ಸುನೀತಾ ಜೋಸೆಫ್ ಗಾಯಗೊಂಡವರು. ಈ ಪೈಕಿ, ಹೆಚ್ಚಿನ ದಾಳಿಗೊಳಗಾದ ಭುವನೇಶ್ವರಿ ಮತ್ತು ವಾಣಿ ಅವರು ಕಿಮ್ಸ್‌ಗೆ ದಾಖಲಾಗಿದ್ದಾರೆ. ಇವರಲ್ಲಿ ಭುವನೇಶ್ವರಿ ಸ್ಥಿತಿ ಗಂಭೀರವಾಗಿದೆ.

ಉಳಿದವರು ಪ್ರಥಮ ಚಿಕಿತ್ಸೆ ಪಡೆದು ವಾಪಸ್ಸಾಗಿದ್ದಾರೆ.ವಿದ್ಯಾರ್ಥಿ ಇಮಾಮ್ ಪರೀಕ್ಷೆಗೆ ಹಾಜರಾಗಿದ್ದಾನೆ. ‘ನಾಲ್ಕು ಅಂತಸ್ತಿನ ಶಾಲಾ ಕಟ್ಟಡದಲ್ಲಿ ಕಟ್ಟಿದ್ದ ಹೆಜ್ಜೇನುಗಳಿಂದ ದಾಳಿ ನಡೆದಿದೆ. ದಾಳಿಗೆ ಮುಂಚೆಯೇ ವಿದ್ಯಾರ್ಥಿಗಳು ಕೊಠಡಿಗಳಿಗೆ ತೆರಳಿದ್ದರಿಂದ ಅನಾಹುತ ತಪ್ಪಿದೆ. ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿಗೆ ಒಂದೆರಡು ಹೆಜ್ಜೇನುಗಳು ಕಚ್ಚಿವೆ’ ಎಂದು ಹುಬ್ಬಳ್ಳಿ ನಗರ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.