ಹುಬ್ಬಳ್ಳಿ: ಚುರುಕಿನ ಬೌಲಿಂಗ್ ಮಾಡಿದ ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ ತಂಡ 13 ವರ್ಷದ ಒಳಗಿನವರಿಗಾಗಿ ಇಲ್ಲಿ ನಡೆದ ದುರ್ಗಾ ಡೆವಲಪರ್ಸ್ ಟ್ರೋಫಿ ಅಂತರ ಕ್ಯಾಂಪ್ ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ಚಾಂಪಿಯನ್ ಆಯಿತು.
ಬಾಣಜಿ ಡಿ. ಕಿಮ್ಜಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 77 ರನ್ ಗಳಿಸಿತು. ಬೆಳಗಾವಿ ತಂಡದ ವರದ್ ಸೂರ್ಯವಂಶಿ ನಾಲ್ಕು, ಅಥರ್ವ ದಿವಟೆ ಎರಡು ವಿಕೆಟ್ ಉರುಳಿಸಿ ಎದುರಾಳಿ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ಸು ಕಂಡರು. ಈ ಗುರಿಯನ್ನು ಬೆಳಗಾವಿ ತಂಡ 16.4 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಮುಟ್ಟಿತು.
ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿಜಯಪುರದ ಕೆ.ಸಿ.ಸಿ. ತಂಡ 20 ಓವರ್‌ಗಳಲ್ಲಿ 106 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ 19 ಓವರ್‌ಗಳಲ್ಲಿ ಮುಟ್ಟಿತು. ಇನ್ನೊಂದು ಸೆಮಿಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಧಾರವಾಡದ ವಿಎಂಸಿಎ ತಂಡ 18.4 ಓವರ್‌ಗಳಲ್ಲಿ 72 ರನ್ ಗಳಿಸಿತು. ಅಲ್ಪ ಮೊತ್ತದ ಗುರಿಯನ್ನು ಎದುರಾಳಿ ದುರ್ಗಾ ಸ್ಪೋರ್ಟ್ಸ್ ಕ್ಲಬ್ 16.4 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ತಲುಪಿ ಪ್ರಶಸ್ತಿ ಸುತ್ತು ತಲುಪಿತ್ತು.
ಬೆಳಗಾವಿ ತಂಡದ ಅಶುತೋಷ ಹಿರೇಮಠ (ಉತ್ತಮ ಬ್ಯಾಟ್ಸ್‌ಮನ್), ಶಹಬಾದ್ ತಂಡದ ಓಂಕಾರ ರಾಠೋಡ (ಉತ್ತಮ ಬೌಲರ್) ಮತ್ತು ವಿಎಂಸಿಎ ತಂಡದ ಇಶಾನ್ ನೊಯಲ್ ಕಾಲ್ಕೊ (ಟೂರ್ನಿ ಶ್ರೇಷ್ಠ) ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡರು.
ಕೆಎಸ್‌ಸಿಎ ಧಾರವಾಡ ವಲಯದ ಮಾಜಿ ನಿಮಂತ್ರಕ ಬಾಬಾ ಭೂಸದ, ಹನುಮಂತಪ್ಪ ಮ್ಯಾಗೇರಿ, ಅರ್ಮುಗಮ್, ಟೂರ್ನಿ ಸಂಘಟಕ ಶಿವಾನಂದ ಗುಂಜಾಳ ಮತ್ತು ಪವನ ಗಂಗಾವತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.