ಹುಬ್ಬಳ್ಳಿ: ‘ದ.ರಾ. ಬೇಂದ್ರೆಯವರು ಹೊಸಗನ್ನಡದ ಆಧುನಿಕ ಕವಿಯಾಗಿದ್ದರು. ಯಾರನ್ನೂ ಅನುಕರಣೆ ಮಾಡದೆ ಎಲ್ಲವೂ ಹೊಸತೇ ಆಗಬೇಕೆಂದು ಸಾಹಿತ್ಯ ಕೃಷಿ ಮಾಡಿದ ಬೆರಗಿನ ವ್ಯಕ್ತಿ ಅವರು’ ಎಂದು ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವಿಶ್ರಾಂತ ಅಧ್ಯಕ್ಷ ಶ್ಯಾಮಸುಂದರ ಬಿದರಕುಂದಿ ಹೇಳಿದರು.
ಪ್ರೊ. ಕೆ.ಎಸ್. ಶರ್ಮಾ ಅವರ 90ನೇ ಜನ್ಮದಿನೋತ್ಸವದ ಅಂಗವಾಗಿ ನಗರದ ಗೋಕುಲ ರಸ್ತೆಯ ವಿಶ್ವಶ್ರಮ ಚೇತನದ ಆವರಣದಲ್ಲಿ ಶನಿವಾರ ‘ವರಕವಿ ದ.ರಾ. ಬೇಂದ್ರೆ ಸಾಹಿತ್ಯ ಸಪ್ತಾಹ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘86 ವರ್ಷ ಬದುಕಿದ್ದ ಬೇಂದ್ರೆಯವರು, 63 ವರ್ಷ ಸಾಹಿತ್ಯದ ಜೊತೆಯೇ ಬಾಳಿದ್ದರು. ಹೊಸ ಆಶಯಗಳನ್ನು ಇಟ್ಟುಕೊಂಡು ಭರವಸೆಯಲ್ಲಿ ಬದುಕಬೇಕು, ಸ್ವಾತಂತ್ರ್ಯಕ್ಕಾಗಿ ಮನುಷ್ಯ ಸ್ವಾಭಿಮಾನಿಯಾಗಬೇಕು, ನಮ್ಮತನವನ್ನು ಕಂಡುಕೊಂಡು ಅದಕ್ಕೆ ದನಿಯಾಗಿ ಸಮಾಜವನ್ನು ಜಾಗೃತಗೊಳಿಸಬೇಕು ಎಂದು ವಿದ್ಯಾರ್ಥಿ ಜೀವನದಲ್ಲಿಯೇ ಅರಿತಿದ್ದರು. ಇಂದಿನ ವಿದ್ಯಾರ್ಥಿಗಳು, ಬೇಂದ್ರೆ ಅವರ ವಿದ್ಯಾರ್ಥಿ ಜೀವನವನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು. ಅಲ್ಲಿ ಅವರು ಪಡೆದ ಜೀವನಾನುಭವ ಭವಿಷ್ಯದಲ್ಲಿ ಹೇಗೆ ಕಾವ್ಯಫಲ ಕೊಟ್ಟಿತು ಎಂದು ತಿಳಿಯುತ್ತದೆ’ ಎಂದರು.
‘ಬೇಂದ್ರೆ ಅವರಿಗೆ ಸಂಸ್ಕೃತ ಮನೆಮಾತಾಗಿತ್ತು. ಒಡನಾಟ ಮರಾಠಿ ಕವಿ, ಚಿಂತಕರೊಂದಿಗೆ ಇತ್ತು. ಜೊತೆಗೆ ಇಂಗ್ಲಿಷ್ ಸಾಹಿತ್ಯ ಆಳವಾಗಿ ಅಧ್ಯಯನ ಮಾಡಿದ್ದರು. ಜಾತಿ, ಧರ್ಮವನ್ನು ಪ್ರೀತಿಸಿಲ್ಲ. ಮನುಷ್ಯ ಆನಂದವಾಗಿರಬೇಕು, ಜೀವನ ಪ್ರೀತಿಯಿಂದ ಬದುಕು ಮುನ್ನಡೆಸಬೇಕು ಎಂದು ಹೇಳುತ್ತಿದ್ದರು. ಸೌಂದರ್ಯ ಅನಾವರಣ ಮಾಡುವುದೇ ಕವಿಯ ಕೆಲಸ ಎಂದು, ಕನ್ನಡದಲ್ಲಿ ಹೊಸ ಕವಿತೆಗಳನ್ನು ರಚಿಸಿದರು. ಅಪಾರವಾದ ಶಬ್ಧಶಕ್ತಿ, ಪ್ರತಿಭೆಯಿಂದ ದೇಶಿ ಅನುಭವವನ್ನು ನುಡಿಗಟ್ಟಾಗಿಸಿ, ಸಾಮಾನ್ಯರ ಪಾಡನ್ನು ಹಾಡಾಗಿಸುತ್ತಿದ್ದರು’ ಎಂದರು.
ಸಂಜೀವಿನಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಚೇರ್ಮನ್ ಮೋಹನ ಲಿಂಬಿಕಾಯಿ, ‘ಬೇಂದ್ರೆ ಅವರು ಬರೆದ ಸಾಹಿತ್ಯದ ಕೃಷಿ 1991ರಿಂದ ವಿಶ್ವಶ್ರಮ ಆವರಣದಲ್ಲಿ ನಡೆಯುತ್ತಿವೆ. ಪ್ರೊ. ಕೆ.ಎಸ್. ಶರ್ಮಾ ಬೇಂದ್ರೆ ಅವರ ಆಪ್ತರಾಗಿದ್ದು, ಏನೇ ಬರೆದರೂ ಮೊದಲು ಶರ್ಮಾ ಅವರು ಓದಬೇಕಿತ್ತು. ಬೇಂದ್ರೆಯವರ ಕವನ ಅರ್ಥ ಮಾಡಿಕೊಳ್ಳಲು ‘ಬೇಂದ್ರೆ ನಿಘಂಟು’ ಪ್ರಕಟಿಸಲಾಗಿದೆ. ಅದನ್ನು ಇಟ್ಟುಕೊಂಡು ಬೇಂದ್ರೆ ಕವನ ಓದಿದರೆ, ಯಾವ ಹಿನ್ನೆಲೆಯಲ್ಲಿ ಕವನ ರಚನೆಯಾಯಿತು ಎಂದು ತಿಳಿಯುತ್ತದೆ. ಸೆ. 30ರಂದು ಶರ್ಮಾ ಅವರ ಜನ್ಮದಿನವಿದ್ದು, ಈ ಹಿನ್ನೆಲೆಯಲ್ಲಿ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ಪ್ರೊ. ಕೆ.ಎಸ್. ಶರ್ಮಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅನಂತಕೃಷ್ಣ ದೇಶಪಾಂಡೆ, ಡಾ. ಶ್ರೀನಿವಾಸ ಬನ್ನಿಗೋಳ, ಡಾ. ಸೋಮಶೇಖರ ಹುತ್ತಾರ, ಚರಂತಯ್ಯ ಹಿರೇಮಠ, ಸಂಜಯ ತ್ರಾಸದ, ಪವನ ದೇಸಾಯಿ, ಸುಮಿತ್ರಾ- ಸುಲೋಚನಾ ಪೋತ್ನೀಸ್, ಪುನರ್ವಸು ಬೇಂದ್ರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.