ಹುಬ್ಬಳ್ಳಿ: ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ದಿನದಂದು ಹಳ್ಳಿಯಿಂದ ದಿಲ್ಲಿವರೆಗೆ ತ್ರಿವರ್ಣ ಧ್ವಜ ಹಾರಿದರೆ ನೋಡುಗರ ಎದೆ ದೇಶಾಭಿಮಾನದಿಂದ ಉಕ್ಕುತ್ತದೆ. ಭಾರತೀಯನ ಅಸ್ಮಿತೆಯಾದ ಕೇಸರಿ, ಬಿಳಿ, ಹಸಿರ ನಡುವೆ ಅಶೋಕ ಚಕ್ರ ರಾಜ ಗಾಂಭೀರ್ಯದಲ್ಲಿ ಎಲ್ಲೆಡೆ ರಾರಾಜಿಸುತ್ತಿದ್ದರೆ, ಇಲ್ಲಿನ ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರದ ಸಿಬ್ಬಂದಿ ಎದೆ ಹೆಮ್ಮೆಯಿಂದ ಹಿಗ್ಗುತ್ತದೆ.
‘ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ’ (ಕೆಕೆಜಿಎಸ್‌ಎಸ್), ರಾಷ್ಟ್ರಧ್ವಜ ತಯಾರಿಕೆಗೆ ಭಾರತೀಯ ಮಾನಕ ಸಂಸ್ಥೆಯಿಂದ (ಬಿಐಎಸ್) ಮಾನ್ಯತೆ ಪಡೆದಿರುವ ಮೊದಲ ಮತ್ತು ಏಕೈಕ ಸಂಘವಾದ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಘ ಹುಬ್ಬಳ್ಳಿಯ ಹೆಸರಿಗೆ ಹೆಮ್ಮೆಯ ಗರಿ ಹಬ್ಬಿಸಿದೆ.
ಭಾರತೀಯರಲ್ಲಿ ಸ್ವದೇಶ ಪ್ರೇಮವನ್ನು ಜಾಗೃತಗೊಳಿಸುವ ಗಾಂಧೀಜಿ ಕಾರ್ಯಕ್ಕೆ ಖಾದಿ ಬೆಂಬಲವಾಗಿತ್ತು. ಖಾದಿ ಬಟ್ಟೆ ತೊಡುವುದು ಸ್ವದೇಶ ಪ್ರೇಮದ ಗುರುತಾಗಿತ್ತು. ಗಾಂಧೀ ಕರೆಗೆ ಓಗೊಟ್ಟು ದೇಶದ ಜನ ಖಾದಿ ಬಟ್ಟೆ ತೊಡಲು ಮುಂದಾದರು. ಇದರ ಪರಿಣಾಮ ಹಳ್ಳಿ– ಹಳ್ಳಿಗಳಲ್ಲಿ ಖಾದಿ ಬಟ್ಟೆ ತಯಾರಿಕೆ ಕೇಂದ್ರಗಳು ಆರಂಭವಾದವು. ಸ್ವಾತಂತ್ರ್ಯ ಹೋರಾಟಗಾರ ವೆಂಕಟೇಶ ಮಾಗಡಿ 1957ರಲ್ಲಿ ಹುಬ್ಬಳ್ಳಿಯ ಬೆಂಗೇರಿಯಲ್ಲಿ ಖಾದಿ ಗ್ರಾಮೋದ್ಯೋಗ ಸಂಘ ಸ್ಥಾಪಿಸಿ, ಸಂಸ್ಥಾಪಕ ಅಧ್ಯಕ್ಷರೂ ಆದರು. ಶ್ರೀರಂಗ ಕಾಮತ್, ಎಚ್.ಎ.ಪೈ, ಪಿ.ಎಚ್.ಅನಂತ ಭಟ್, ಜಯದೇವರಾಜ ಕುಲಕರ್ಣಿ, ಜಿ.ಬಿ.ಗೋಖಲೆ, ವಾಸುದೇವ ರಾವ್, ಬಿ.ಎಚ್.ಇನಾಂದಾರ್ ಸೇರಿದಂತೆ ಅನೇಕರ ಶ್ರಮವೂ ಈ ಸಂಘದ ಹಿಂದಿದೆ.
ಖಾದಿ ಬಟ್ಟೆ ತಯಾರಿಕೆಗೆ ಮಾತ್ರ ಸಿಮೀತವಾಗಿದ್ದ ಈ ಸಂಘಕ್ಕೆ 2006ರಲ್ಲಿ ಬಿಐಎಸ್‌ನಿಂದ ರಾಷ್ಟ್ರಧ್ವಜ ತಯಾರಿಕೆಗೆ ಅನುಮತಿ ಸಿಕ್ಕಿತು. ಒಂದು ಕಾಲಕ್ಕೆ ರಾಷ್ಟ್ರಧ್ವಜ ಉತ್ಪಾದನೆಗೆ ಅನುಮತಿ ಪಡೆದಿದ್ದ ಧಾರವಾಡದ ಗರಗ, ಉತ್ತರಪ್ರದೇಶದ ರಾಯ್‌ಬರೇಲಿ ರಾಷ್ಟ್ರಧ್ವಜ ತಯಾರಿಕೆಯ ಸಾಮರ್ಥ್ಯ ಉಳಿಸಿಕೊಳ್ಳಲು ವಿಫಲವಾಗಿವೆ. ಆದರೆ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಘ ಮಾತ್ರ ವರ್ಷದಿಂದ ವರ್ಷಕ್ಕೆ ಬೆಳೆಯುತ್ತ ಸಾಗಿದೆ. 12 ಎಕರೆ ವಿಶಾಲ ಜಾಗದಲ್ಲಿರುವ ಸಂಘ ಈವರೆಗೂ ಸಾವಿರಾರು ಕುಟುಂಬಗಳನ್ನು ಸಲುಹಿದೆ.
ಬೆಂಗೇರಿಯಲ್ಲಿ ತಯಾರಾಗುವ ರಾಷ್ಟ್ರಧ್ವಜಕ್ಕೆ ಬಾಗಲಕೋಟೆಯ ಗದ್ದಿನಕೇರಿ, ಬಾದಾಮಿ, ಬೀಳಗಿ ತಾಲ್ಲೂಕಿನ ಹಳ್ಳಿಗಳಲ್ಲಿರುವ ಸಂಘಗಳು ಶ್ರಮಿಸುತ್ತವೆ. ಇಲ್ಲಿ ಚರಕದಿಂದ ನೂಲು ತೆಗೆದು, ಕೈಮಗ್ಗದಿಂದ ಬಟ್ಟೆ ತಯಾರಿಸಿ ಬೆಂಗೇರಿಗೆ ಕಳುಹಿಸಲಾಗುತ್ತದೆ. ಉಳಿದಂತೆ ಬಟ್ಟೆ ಸ್ವಚ್ಛಗೊಳಿಸುವುದು, ಡೈಯಿಂಗ್, ಕಟ್ಟಿಂಗ್, ಹೋಲಿಯುವುದು, ಪೋಣಿಸುವುದು, ಅಶೋಕ ಚಕ್ರ ಮುದ್ರಿಸುವುದು, ಇಸ್ತ್ರಿ ಮಾಡಿ, ಪ್ಯಾಕ್ ಮಾಡುವವರೆಗೂ ಎಲ್ಲ ಕೆಲಸಗಳೂ ಬೆಂಗೇರಿಯಲ್ಲೇ ನಡೆಯುತ್ತವೆ.
ಕೆಂಪುಕೋಟೆ ಮೇಲೆ ಹಾರುವ ಬೃಹತ್ ಬಾವುಟದಿಂದ ಹಿಡಿದು, ರಾಜಕಾರಣಿ, ಅಧಿಕಾರಿಗಳ ವಾಹನದ ಮುಂಭಾಗ ಹಾಕುವ ಪುಟ್ಟ ಬಾವುಟದವರೆಗೆ ಒಟ್ಟು ವಿವಿಧ ಅಳತೆಯ 9 ರಾಷ್ಟಧ್ವಜಗಳು ಇಲ್ಲಿ ತಯಾರಾಗುತ್ತವೆ. ತಿರಂಗಾ ಜೊತೆಗೆ ಖಾದಿ ಬಟ್ಟೆಯೂ ತಯಾರಾಗುತ್ತವೆ. ಆವರಣದಲ್ಲಿ ಖಾದಿ ಬಟ್ಟೆ ಮಾರಾಟ ಮಳಿಗೆ, ಗೋದಾಮು ಇದ್ದು, ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಾರೆ.
ಸಂಘದ ವಿವಿಧ ಕೇಂದ್ರಗಳನ್ನೂ ಸೇರಿ ನೂರಾರು ಜನ ಕೆಲಸ ಮಾಡುತ್ತಾರೆ. ಅವರಲ್ಲಿ ಶೇ95ರಷ್ಟು ಮಹಿಳಾ ನೌಕರರಿರುವುದು ವಿಶೇಷ. ಅವರಿಗೆಲ್ಲ ಸಂಘ ವಾರಕ್ಕೊಮ್ಮೆ ಸಂಬಳ ಪಾವತಿಸುತ್ತದೆ.
ಉತ್ತೇಜನ ನೀಡದ ಸರ್ಕಾರ:
ನಮ್ಮ ಸರ್ಕಾರ ಖಾದಿ ಉತ್ಪಾದನೆಗೆ ವಿಶೇಷ ಒತ್ತು ಕೊಟ್ಟು, ಉತ್ತೇಜಿಸುವ ಕಾರ್ಯವನ್ನೇನೂ ಮಾಡಿಲ್ಲ. ಇಲ್ಲಿರುವ ನೌಕರರಿಗೆ, ಸಿಬ್ಬಂದಿಗೆ ಹೇಳಿಕೊಳ್ಳುವಷ್ಟು ಉತ್ತಮದ ವೇತನವೇನೂ ಸಿಗುತ್ತಿಲ್ಲ. ಹಳೇ ಕಟ್ಟಡ, ಹಳೇ ಯಂತ್ರಗಳ ಜತೆಗೆ ಕಾರ್ಯ ನಿರ್ವವಹಿಸುತ್ತಿದ್ದಾರೆ. ‘ಇಲ್ಲಿ ಕೊಡುವ ಸಂಬಳ ತೃಪ್ತಿ ನೀಡಿಲ್ಲವಾದರೂ, ರಾಷ್ಟ್ರಧ್ವಜ ತಯಾರಿಸುತ್ತೇನೆಂಬ ಹೆಮ್ಮೆಗಾಗಿ ಕೆಲಸ ಮಾಡುತ್ತಿದ್ದೇನೆ’ ಎಂದು ಸಿಬ್ಬಂದಿ ತಿಳಿಸಿದರು.
ರಾಜ್ಯ ಸರ್ಕಾರ ಸಂಘಕ್ಕೆ ನೀಡಬೇಕಿರುವ ಎಂಡಿಎ ಮತ್ತು ಪ್ರೋತ್ಸಾಹ ಧನ ₹2.30 ಕೋಟಿ ಬಾಕಿಯಿದೆ. ರಾಜ್ಯದಾದ್ಯಂತ ಬಾಕಿ ಉಳಿದ ಎಂಡಿಎ ಮೊತ್ತ ₹125 ಕೋಟಿ.
ನೂತನ ರಾಷ್ಟ್ರಧ್ವಜ ಉತ್ಪಾದನಾ ಘಟಕ
ಶೀಘ್ರ ಆರಂಭ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಘದ ಆವರಣದಲ್ಲಿ ನೂತನ ರಾಷ್ಟ್ರಧ್ವಜ ಉತ್ಪಾದನಾ ಘಟಕ ರಾಷ್ಟ್ರಧ್ವಜ ಭವನ ಮತ್ತು ಮಹಾತ್ಮಾ ಗಾಂಧೀ ವಸ್ತು ಸಂಗ್ರಹಾಲಯ ಕಟ್ಟಡಕ್ಕೆ ರಾಜ್ಯ ಸರ್ಕಾರ 2016ರಲ್ಲಿ ₹1 ಕೋಟಿ ಅನುದಾನ ಮಂಜೂರು ಮಾಡಿತ್ತು. ಈ ಪೈಕಿ ನೂತನ ರಾಷ್ಟ್ರಧ್ವಜ ಉತ್ಪಾದನಾ ಘಟಕದ ಕಾಮಗಾರಿ ಶೇ90ರಷ್ಟು ಪೂರ್ಣಗೊಂಡಿದ್ದು ಶೀಘ್ರದಲ್ಲೇ ರಾಷ್ಟ್ರಧ್ವಜಾ ಉತ್ಪಾದನಾ ಘಟಕವನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲು ಸಿದ್ಧತೆ ನಡೆದಿದೆ. ರಾಷ್ಟ್ರಧ್ವಜದ ಚರಿತ್ರೆ ಮತ್ತದರ ಮಹತ್ವ ಸಾರುವ ಉದ್ದೇಶದಿಂದ ನಿರ್ಮಿಸಲಾಗುತ್ತಿರುವ ರಾಷ್ಟ್ರಧ್ವಜ ಭವನ ಮಹಾತ್ಮಾ ಗಾಂಧೀ ಚರಿತ್ರೆ ಜೀವನ ಹೋರಾಟವನ್ನು ತಿಳಿಸುವ ವಸ್ತು ಸಂಗ್ರಹಾಲಯದ ಕಟ್ಟಡ ಕಾಮಗಾರಿ ಕುಂಟುತ್ತಲೇ ಸಾಗಿದೆ. ‘ಸಂಘದ ಎಲ್ಲ ಕಟ್ಟಡಗಳು 67 ವರ್ಷದ ಹಳೆಯದ್ದು. ಈದೀಗ ಉತ್ಪಾದನಾ ಕೇಂದ್ರಕ್ಕೆ ಹೊಸ ಕಟ್ಟಡ ಲಭ್ಯವಾಗಿದೆಯಾದರೂ ಕಚೇರಿ ಗೋದಾಮುಗಳೆಲ್ಲ ಹಳೆಯ ಕಟ್ಟಡದಲ್ಲೇ ಇವೆ. ಹೊಲಿಗೆ ಯಂತ್ರ ಸಾಮಗ್ರಿಗಳೂ ಹಳೆಯದಾಗಿದ್ದು ಹೊಸ ಉಪಕರಣಗಳ ಖರೀದಿಗೆಂದು 1 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.
ಬದುಕು ಕಟ್ಟಿಕೊಡುವ ವಿದ್ಯಾಲಯ
ಖಾದಿ ಗ್ರಾಮೋದ್ಯೋಗ ರಾಷ್ಟ್ರಧ್ವಜ ಉತ್ಪಾದನೆ ಖಾದಿ ಬಟ್ಟೆ ತಯಾರಿಕೆ ಜತೆಗೆ ಜವಳಿ ಕ್ಷೇತ್ರದಲ್ಲಿ ಯುವ ಜನತೆಯ ಬದುಕು ಕಟ್ಟಿಕೊಡುವ ಕಾರ್ಯವನ್ನೂ ಮಾಡುತ್ತಿದೆ. ಖಾದಿ ಗ್ರಾಮೋದ್ಯೋಗ ಆವರಣದಲ್ಲಿ ವಿದ್ಯಾಲಯವೂ ಇದೆ. ಕೇಂದ್ರ ಸರ್ಕಾರದ ಖಾದಿ ಗ್ರಾಮೋದ್ಯೋಗ ಆಯೋಗ ಮತ್ತು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಜಂಟಿಯಾಗಿ ನಡೆಸುತ್ತಿರುವ ದೇಶದ ಏಕೈಕ ವಿದ್ಯಾಲಯವಿದು. ಟೆಕ್ಸ್‌ಟೈಲ್ ಕೆಮಿಸ್ಟ್ರಿ ಸಂಬಂಧಿಸಿದ ಈ ಒಂದು ವರ್ಷದ ಕೋರ್ಸ್‌ಗೆ 10ನೇ ತರಗತಿ ಮುಗಿಸಿದವರೂ ಅರ್ಹರು. ಉಚಿತ ತರಬೇತಿ ಅಲ್ಲದೇ ವಿದ್ಯಾರ್ಥಿ ವೇತನವನ್ನೂ ನೀಡುತ್ತಾರೆ. ಬಿಹಾರ ಉತ್ತರ ಪ್ರದೇಶ ಕೇರಳ ಸೇರಿದಂತೆ ಬೇರೆ ರಾಜ್ಯದ ಜನರೂ ತರಬೇತಿ ಪಡೆಯಲು ಬರುತ್ತಾರೆ. ಇಲ್ಲಿಂದ ತರಬೇತಿ ಪಡೆದವರು ವಿದೇಶದಲ್ಲೂ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ ಅಲ್ಪಾವಧಿ ಕೋರ್ಸ್‌ಗಳನ್ನೂ ನಡೆಸಲಾಗುತ್ತದೆ. ಸೋಪ್ ಡಿಟರ್ಜಂಟ್ ಪೌಡರ್ ತಯಾರಿಸುವುದು ಅಗರಬತ್ತಿ ತಯಾರಿಸುವ ತರಬೇತಿ ಸ್ಕ್ರೀನ್ ಪ್ರಿಟಿಂಗ್ ಬ್ಲಾಕ್ ಪ್ರಿಂಟಿಂಗ್ ಮಾಡುವುದು ಮೆಣದಬತ್ತಿ ತಯಾರಿಸುವ ತರಬೇತಿಯನ್ನೂ ನೀಡಲಾಗುತ್ತದೆ. ಗೃಹಣಿಯರು ಸ್ವ–ಉದ್ಯೋಗ ಆರಂಭಿಸಲು ಇಚ್ಛಿಸುವವರು ಇಲ್ಲಿ 10 ದಿನದ ತರಬೇತಿ ಪಡೆದುಕೊಳ್ಳುತ್ತಾರೆ.
ಖಾದಿ ಧ್ವಜಕ್ಕೆ ತಗ್ಗಿದ ಬೇಡಿಕೆ
ಕೇಂದ್ರ ಸರ್ಕಾರ ‘ಧ್ವಜ ಸಂಹಿತೆ-2002’ಕ್ಕೆ ತಿದ್ದುಪಡಿ ತಂದು ಪಾಲಿಸ್ಟರ್ ಧ್ವಜಗಳ ತಯಾರಿಕೆಗೆ ಅನುಮತಿ ನೀಡಿದ್ದು ಖಾದಿ ಧ್ವಜದ ಬೇಡಿಕೆ ಮೇಲೆ ಪರಿಣಾಮ ಬೀರಿದೆ. ಹರ್ ಘರ್ ತಿರಂಗಾ ಅಭಿಯಾನದ ನೆಪದಲ್ಲಿ ಎಲ್ಲೆಂದರಲ್ಲಿ ತಯಾರಾದ ಪಾಲಿಸ್ಟರ್ ಪ್ಲಾಸ್ಟಿಕ್ ಧ್ವಜದಿಂದ ಖಾದಿ ಧ್ವಜದ ಬೇಡಿಕೆ ಮತ್ತು ಮಹತ್ವ ತಗ್ಗಿದೆ. ‘₹2 ಕೋಟಿಗೂ ಹೆಚ್ಚು ಮೊತ್ತದ ಧ್ವಜ ಮಾರಾಟವಾಗುವ ನಿರೀಕ್ಷೆಯಿತ್ತು. ಆದರೆ ಮಾರಾಟವಾಗಿದ್ದು ₹1.53 ಕೋಟಿ ಮೊತ್ತದ ಧ್ವಜಗಳು. ಈ ಬಾರಿ ದೆಹಲಿ ಉತ್ತರ ಪ್ರದೇಶ ಕಲ್ಕತ್ತಾ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಧ್ವಜಕ್ಕೆ ಬೇಡಿಕೆ ಬಂದಿತ್ತು. ಪ್ರತಿ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆ ಬೇಡಿಕೆಯಿತ್ತು. ಬೀಕರ ಮಳೆ ಮತ್ತು ಪ್ರವಾಹದಿಂದಾಗಿ ಕೇರಳ ತಮಿಳುನಾಡಿನಿಂದ ಬೇಡಿಕೆ ಬರಲಿಲ್ಲ’ ಎಂದು ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಕಾರ್ಯದರ್ಶಿ ಶಿವಾನಂದ ಮಠಪತಿ ತಿಳಿಸಿದರು. ‘ಪಾಲಿಸ್ಟರ್ ಧ್ವಜ ತಯಾರಿಕೆಗೆ ಕೊಟ್ಟ ಅನುಮತಿ ಧ್ವಜ ಸಂಹಿತೆ ತಿದ್ದುಪಡಿಯಿಂದ ಸಂಘಕ್ಕೆ ಹೊಡೆತ ಬಿದ್ದಿದೆ. ಯಾವ ಮಾನದಂಡವನ್ನೂ ಪಾಲಿಸದೇ ಯಾರು ಬೇಕಾದರೂ ತಯಾರಿಸುವ ಖಾದಿಯೇತರ ಬಾವುಟಗಳಿಗೆ ಕಡಿವಾಣ ಹಾಕಬೇಕು. ಅಧಿಕೃತವಾಗಿ ತಯಾರಿಸುವ ಬಾವುಟಗಳಿಗೆ ಮಾತ್ರ ಅನುಮತಿ ನೀಡಬೇಕು’ ಎಂದು ಅವರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.