ADVERTISEMENT

ವಿಳ್ಯೆದೆಲೆಗೆ ಬೇರುಕೊಳೆ ರೋಗ: ಆತಂಕದಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 31 ಜುಲೈ 2023, 13:45 IST
Last Updated 31 ಜುಲೈ 2023, 13:45 IST
ಗುತ್ತಲ ಪಟ್ಟಣದ ರಿಯಾಜ್ ಹಾವನೂರ ಮತ್ತು ಗುದ್ಲೇಶ ಅಳವಂಡಿ ಅವರ ತೋಟದಲ್ಲಿ ಹಾಳಾಗಿರುವ ವಿಳ್ಯೆದೆಲೆ ಬಳ್ಳಿಗಳು
ಗುತ್ತಲ ಪಟ್ಟಣದ ರಿಯಾಜ್ ಹಾವನೂರ ಮತ್ತು ಗುದ್ಲೇಶ ಅಳವಂಡಿ ಅವರ ತೋಟದಲ್ಲಿ ಹಾಳಾಗಿರುವ ವಿಳ್ಯೆದೆಲೆ ಬಳ್ಳಿಗಳು   

ಗುತ್ತಲ: ಹಾವೇರಿ ತಾಲ್ಲೂಕಿನ 195 ಎಕರೆ ಪ್ರದೇಶದಲ್ಲಿ ವೀಳ್ಯೆದೆಲೆ ಬೆಳೆಯಲಾಗುತ್ತಿದ್ದು, ನಿತ್ಯ ಒಂದಿಲ್ಲೊಂದು ಸಮಸ್ಯೆ ರೈತರನ್ನು ಕಾಡುತ್ತಿದೆ. ಪಟ್ಟಣ ಸೇರಿದಂತೆ ಕನವಳ್ಳಿ, ಹಾವನೂರ, ಬಮ್ಮನಕಟ್ಟಿ, ನೆಗಳೂರ ಮತ್ತು ಇನ್ನು ಹಲವಾರು ಗ್ರಾಮಗಳಲ್ಲಿ ವೀಳ್ಯೆದೆಲೆ ಬೆಳೆಗೆ ಬೇರು ಕೊಳೆ ರೋಗ ತಗಲಿ ಬಳ್ಳಿ ಸಂಪೂರ್ಣ ಒಣಗುತ್ತಿದೆ ಎಂದು ಬೆಳೆಗಾರ ಗುದ್ಲೇಪ್ಪ ಅಳವಂಡಿ ಹೇಳುತ್ತಾರೆ.

‘10 ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾದ ಕಾರಣ ಬಳ್ಳಿ ಒಣಗುತ್ತಿದೆ. ಇಲ್ಲವೇ ರೋಗ ತಗುಲಿ ಒಣಗುತ್ತಿದೆ ಎಂಬುವುದು ತಿಳಿಯದಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿ ಯಾವ ಔಷಧಿ ಸಿಂಪಡಿಸಿದರೆ ಒಣಗುತ್ತಿರುವ ವೀಳ್ಯೆದೆಲೆ ಹತೋಟಿಗೆ ಬರುತ್ತದೆ ಎಂಬುವದನ್ನು ಮಾಹಿತಿ ನೀಡಬೇಕು’ ಎಂದು ರೈತ ರಿಯಾಜ್ ಹಾವನೂರ ಮನವಿ ಮಾಡಿದ್ದಾರೆ

ತಾಲ್ಲೂಕಿನ ಕನವಳ್ಳಿ ಗ್ರಾಮ ಮತ್ತು ಗುತ್ತಲ ಪಟ್ಟಣದಲ್ಲಿ ಅತಿ ಹೆಚ್ಚು ವಿಳ್ಯೆದೆಲೆ ಬೆಳೆಯುವ ರೈತರಿದ್ದಾರೆ. ಅತಿ ಹೆಚ್ಚು ಬೆಳೆಯುವ ಗ್ರಾಮಗಳಲ್ಲಿ ಬಳ್ಳಿ ಒಣಗುತ್ತಿರುವದು ಆತಂಕ ತಂದಿದೆ. ಲಕ್ಷಾಂತರ ರೂಪಾಯಿ ಖರ್ಚುಮಾಡಿ ವೀಳ್ಯೆದೆಲೆ ನಾಟಿ ಮಾಡಿದ್ದೇವೆ. ಒಂದು ಎಕರೆಯಲ್ಲಿ ಅರ್ಧ ಎಕರೆ ಬಳ್ಳಿ ಸಂಪೂರ್ಣ ಒಣಗುತ್ತಿವೆ. ಔಷಧ ಸಿಂಪಡಿಸಿದರು ಹತೋಟಿಗೆ ಬರುತ್ತಿಲ್ಲ. ಮಳೆ ಪ್ರಮಾಣ ಜಾಸ್ತಿಯಾದ ಹಿನ್ನಲೆಯಲ್ಲಿ ಒಣಗುತ್ತಿವೆ. ವಿಳ್ಯೆದೆಲೆಗೆ ಉತ್ತಮ ದರ ಸಿಗುತ್ತಿಲ್ಲ. ವಿಳ್ಯೆದೆಲೆ ತೋಟದಲ್ಲಿ ಕೆಲಸ ಮಾಡಲು ಕಾರ್ಮಿಕರು ಸಿಗುತ್ತಿಲ್ಲ. ಕಾರ್ಮಿಕರು ಸಿಕ್ಕರೆ ಅವರಿಗೆ ಕೂಲಿ ಕೊಡಲು ಹಣ ಸಾಲುತ್ತಿಲ್ಲ ತೋಟಕ್ಕೆ ಹೆಚ್ಚು ಖರ್ಚು ಬರುತ್ತಿದೆ. ಪ್ರಕೃತಿ ವಿಕೋಪದಿಂದ ತೋಂದರೆಗೀಡಾದ ಎಲ್ಲ ರೈತರಿಗೆ ಪರಿಹಾರ ನೀಡಬೇಕು ಎಂದು ನೆಗಳೂರ ಗ್ರಾಮದ ರೈತ ಮಲ್ಲಪ್ಪ ಕಿವಡಿ ಆಗ್ರಹಿಸಿದ್ದಾರೆ.

ADVERTISEMENT

ಹಾವೇರಿ ಜಿಲ್ಲೆಯ ವೀಳ್ಯೆದೆಲೆಗೆ ಮಹಾರಾಷ್ಟ್ರ ಸೇರಿದಂತೆ ಬೇರೆ, ಬೇರೆ ರಾಜ್ಯಗಳಲ್ಲಿ ಉತ್ತಮ ಬೇಡಿಕೆ ಇದೆ. ಆದರೆ ವಿಪರೀತ ಮಳೆಯಿಂದ ವೀಳ್ಯೆದೆಲೆಯ ತೋಟಗಳು ನಾಶವಾಗುತ್ತಿವೆ. ರೈತರು ಬಳ್ಳಿ ನಾಟಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಸರ್ಕಾರ ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಪಟ್ಟಣದ ರೀಯಾಜ ಹಾವನೂರ ಮತ್ತು ಗುದ್ಲೇಶ ಅಳವಂಡಿ ಅವರುಗಳ ತೋಟದಲ್ಲಿ ಹಾಳಾಗಿರುವ ವಿಳ್ಯೆದೆಲೆ ಬಳ್ಳಿಗಳು

ಮಳೆಗಾಳಿಗೆ ಈ ಹಿಂದೆ ಹಲುವಾರು ತೋಟಗಳು ನಾಶವಾಗಿವೆ. ಬೇರು ಕೊಳೆ ರೋಗ ಬಂದಿರುವುದು ನಮ್ಮ ಗಮನಕ್ಕೆ ಬಂದಿಲ್ಲ ತೋಟಕ್ಕೆ ಭೇಟಿ ನೀಡಿ ಔಷಧಿ ಬಗ್ಗೆ ಮಾಹಿತಿ ನೀಡಲಾಗುವುದು -ದೇವರಾಜ.ಆರ್.ಪಿ ಸಹಾಯಕ ತೋಟಗಾರಿಕೆ ಅಧಿಕಾರಿ

ಪ್ರಕೃತಿ ವಿಕೋಪದಿಂದ ವೀಳ್ಯೆದೆಲೆ ಹಾಳಾದ ರೈತರು ತೋಟಗಾರಿಕೆ ಇಲಾಖೆ ಇಲ್ಲವೇ ತಹಶೀಲ್ದಾರರಿಗೆ ಅರ್ಜಿ ಮೂಲಕ ಮನವಿ ಸಲ್ಲಿಸಬೇಕು. ರೈತರು ಕೊಟ್ಟ ವರದಿ ಆಧರಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವದು

-ಗಿರೀಶ ಸ್ವಾಧಿ ತಹಶೀಲ್ದಾರ ಹಾವೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.