ADVERTISEMENT

ಎಚ್‌ಎಸ್‌ಆರ್‌ಪಿ: ನಕಲಿ ವೆಬ್‌ಸೈಟ್‌ ಎಚ್ಚರವಿರಲಿ-ಕೆ. ದಾಮೋದರ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2023, 16:12 IST
Last Updated 24 ನವೆಂಬರ್ 2023, 16:12 IST
ಹುಬ್ಬಳ್ಳಿ ಗಬ್ಬೂರಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ವಾಹನಗಳ ಡೀಲರ್‌ಗಳ ಸಭೆಯಲ್ಲಿ ಆರ್‌ಟಿಒ ಕೆ. ದಾಮೋದರ ಮಾತನಾಡಿದರು
ಹುಬ್ಬಳ್ಳಿ ಗಬ್ಬೂರಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ವಾಹನಗಳ ಡೀಲರ್‌ಗಳ ಸಭೆಯಲ್ಲಿ ಆರ್‌ಟಿಒ ಕೆ. ದಾಮೋದರ ಮಾತನಾಡಿದರು   

ಹುಬ್ಬಳ್ಳಿ: ‘ವಾಹನಗಳಿಗೆ ಹೆಚ್ಚು ಸುರಕ್ಷಿತ ನೋಂದಣಿ ಫಲಕಕ್ಕೆ (HSRP) ಆನ್‌ಲೈನ್‌ನಲ್ಲಿ ಬುಕ್ ಮಾಡುವ ಮೊದಲು ವೆಬ್‌ಸೈಟ್‌ ಅಸಲಿಯೇ, ನಕಲಿಯೇ ಎಂದು ಪರಿಶೀಲಿಸಬೇಕು. ನಕಲಿ ವೆಬ್‌ಸೈಟ್‌ಗಳಿಂದ ಮೋಸ ಹೋಗುವ ಸಾಧ್ಯತೆಗಳಿವೆ’ ಎಂದು ಹುಬ್ಬಳ್ಳಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ. ದಾಮೋದರ ಹೇಳಿದರು.

ನಗರದ ಗಬ್ಬೂರಿನಲ್ಲಿರುವ ಹುಬ್ಬಳ್ಳಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನಡೆದ ವಾಹನಗಳ ವಾಹನಗಳ ಡೀಲರ್‌ಗಳ ಸಭೆಯಲ್ಲಿ ಅವರು ಮಾತನಾಡಿದರು. ‘ಎಲ್ಲ ಬಗೆಯ ವಾಹನಗಳಿಗೆ ಎಚ್ಎಸ್ಆರ್‌ಪಿ ಅಳವಡಿಕೆ ಕಡ್ಡಾಯವಾಗಿದೆ. ಭದ್ರತೆ ದೃಷ್ಟಿಯಿಂದ 2019ರ ಮೊದಲು ಖರೀದಿಸಿದ ವಾಹನಗಳು ಸುರಕ್ಷಿತ ನಂಬರ್ ಫಲಕ ಅಳವಡಿಸಿಕೊಳ್ಳಬೇಕು. ಈ ಫಲಕಕ್ಕೆ ನೋಂದಣಿ ಮಾಡುವಾಗ ವೆಬ್‌ಸೈಟ್‌ ಅಸಲಿಯೇ ಎಂದು ಪರಿಶೀಲಿಸಬೇಕು. ಆನ್‌ಲೈನ್‌ನಲ್ಲಿ ಗ್ರಾಹಕರು ಸ್ವತಃ ನೋಂದಣಿ ಮಾಡಿಕೊಳ್ಳಬಹುದು. ಅಥವಾ, ಡೀಲರ್‌ಗಳ ಬಳಿಯೂ ಮಾಡಿಕೊಳ್ಳಬಹುದು’ ಎಂದರು.

‘ಎಚ್ಎಸ್‌ಆರ್‌ಪಿ ಅಳವಡಿಕೆಗೆ ನ. 16ರವರೆಗೆ ಗಡುವು ನೀಡಲಾಗಿತ್ತು. ಇದೀಗ ಅವಧಿ ವಿಸ್ತರಿಸಿದ್ದು, ಡೀಲರ್‌ಗಳು ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಗ್ರಾಹಕರಿಗೆ ಮಾಹಿತಿ ನೀಡುವಂತಾಗಬೇಕು. ಷೋ ರೂಮ್‌ಗಳಲ್ಲಿ, ನಗರದ ಪ್ರಮುಖ ಪ್ರದೇಶಗಳಲ್ಲಿ ಜಾಗೃತಿ ಫಲಕ ಅಳವಡಿಸಬೇಕು. ಕಾಲಮಿತಿಯಲ್ಲಿ ಎಲ್ಲ ಗ್ರಾಹಕರು ಹೊಸ ನೋಂದಣಿ ಫಲಕ ಅಳವಡಿಸಿಕೊಳ್ಳುವಂತೆ ಮಾಡಬೇಕು’ ಎಂದು ಹೇಳಿದರು.

ADVERTISEMENT

ಸಾರಿಗೆ ಅಧೀಕ್ಷಕಿ ಕೀರ್ತಿ ಹುಕ್ಕೇರಿ, ಮಹಾಂತೇಶ ಕಾಂಬ್ಳೆ, ಜಿ. ದಿನಮಣಿ, ಶಶಿ ಕಂಬಾರ ಹಾಗೂ ಪ್ರಕಲ್ಪ ಟಿವಿಎಸ್‌, ಶಾಂತೇಶ ಹೊಂಡಾ, ವಿಜಯಲಕ್ಷ್ಮಿ ಎಂಟರ್‌ಪ್ರೈಸೆಸ್‌, ಎಎಂಎಲ್‌ ಅಶೋಕ ಲೈಲ್ಯಾಂಡ್‌, ಛಡ್ಡಾ ಏಜೆನ್ಸಿಸ್‌ ಸೇರಿದಂತೆ 20ಕ್ಕೂ ಹೆಚ್ಚು ಡೀಲರ್‌ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.