ಹುಬ್ಬಳ್ಳಿ: ನಗರಪ್ರದೇಶದ ಸ್ವಚ್ಛತೆ ಕಾಪಾಡಲು ಶ್ರಮಿಸುವ ಪೌರಕಾರ್ಮಿಕರು ಕೆಲಸದ ಮಧ್ಯೆ ವಿಶ್ರಾಂತಿ ಪಡೆಯಲೆಂದೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ‘ಭೀಮಾಶ್ರಯ’ ಎಂಬ ವಿಶ್ರಾಂತಿಗೃಹಗಳನ್ನು ನಿರ್ಮಿಸಿದೆ.
ಹೈದರಾಬಾದ್‌ನ ನಾಗಾರ್ಜುನ ಶಿಪ್ಪಿಂಗ್ ಕಂಟೇನರ್ ಸಂಸ್ಥೆಯಿಂದ ಕಂಟೇನರ್ ಖರೀದಿಸಿ, ಗುತ್ತಿಗೆದಾರರ ನೆರವಿನಿಂದ ಹುಬ್ಬಳ್ಳಿಯಲ್ಲಿ 17 ಮತ್ತು ಧಾರವಾಡದಲ್ಲಿ ಎಂಟು ಕಡೆ ವಿಶ್ರಾಂತಿಗೃಹಗಳನ್ನು ನಿರ್ಮಿಸಲಾಗಿದೆ. ಇದಕ್ಕೆ 15ನೇ ಹಣಕಾಸು ಯೋಜನೆಯಡಿ ₹2.5 ಕೋಟಿ ವಿನಿಯೋಗಿಸಲಾಗಿದ್ದು, ಒಂದು ವಿಶ್ರಾಂತಿಗೃಹಕ್ಕೆ ₹10 ಲಕ್ಷ ವೆಚ್ಚವಾಗಿದೆ.
‘ಒಂದು ಅಡಿ ಕಾಂಕ್ರೀಟ್ ಬೆಡ್ ಹಾಕಿ ನಂತರ ಅದರ ಮೇಲೆ ಕಂಟೇನರ್ ಅಳವಡಿಸಲಾಗಿದೆ. ಕಂಟೇನರ್ ಒಳಗೆ ತಾಪಮಾನ ನಿಯಂತ್ರಣಕ್ಕೆ ಗಾಜಿನ ಉಣ್ಣೆ ಮತ್ತು ಅಲ್ಯೂಮಿನಿಯಂ ಸಂಯೋಜಿತ ಫಲಕದ ವ್ಯವಸ್ಥೆ ಮಾಡಲಾಗಿದೆ’ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್ (ಯೋಜನಾ ವಿಭಾಗ) ವಿಜಯಕುಮಾರ್.ಆರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬೆಳಿಗ್ಗೆ 6 ರಿಂದ ಮಧ್ಯಾಹ್ನ 2ರವರೆಗೆ ಕೆಲಸ ಮಾಡುವ ಪೌರಕಾರ್ಮಿಕರು ಸಮುದಾಯ ಭವನ, ಉದ್ಯಾನದಲ್ಲಿ ಉಪಾಹಾರ, ಊಟ ಸೇವಿಸುತ್ತಾರೆ. ಅಲ್ಲೇ ವಿಶ್ರಾಂತಿ ಪಡೆಯುತ್ತಾರೆ. ಅವರ ಅನುಕೂಲಕ್ಕೆ ನಿರ್ಮಿಸಲಾದ ವಿಶ್ರಾಂತಿಗೃಹದಲ್ಲಿ ಉಪಾಹಾರ, ಊಟ ಸೇವಿಸುವುದರ ಜೊತೆಗೆ ವಿಶ್ರಾಂತಿ ಪಡೆಯಬಹುದು’ ಎಂದರು.
‘10 ಅಡಿ ಉದ್ದ, 8 ಅಡಿ ಅಗಲ ಮತ್ತು 8 ಅಡಿ ಎತ್ತರದ ವಿಶ್ರಾಂತಿಗೃಹದಲ್ಲಿ ಪೌರಕಾರ್ಮಿಕರು ತಮ್ಮ ವಸ್ತುಗಳನ್ನು ಇಟ್ಟುಕೊಳ್ಳಲು ಲಾಕರ್ ವ್ಯವಸ್ಥೆ ಇದೆ. ಕೂರಲು ಆಸನ, ಫ್ಯಾನ್, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಸ್ನಾನಗೃಹ ಸೌಲಭ್ಯಗಳಿವೆ. ಒಂದು ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಅಳವಡಿಸಲಾಗಿದೆ’ ಎಂದರು.
‘ಕೆಲಸದ ಸಂದರ್ಭದಲ್ಲಿ ಶೌಚಕ್ಕೆ ಹೋಗಲು ಸಾರ್ವಜನಿಕ ಶೌಚಾಲಯಗಳನ್ನು ಆಶ್ರಯಿಸಬೇಕು. ಅಲ್ಲಿ ಸರಿಯಾದ ನೀರಿನ ವ್ಯವಸ್ಥೆ ಇರಲ್ಲ. ವಿಶ್ರಾಂತಿಗೃಹದ ಸೌಲಭ್ಯವಿದ್ದರೆ, ಅಲ್ಲಿಯೇ ಸ್ನಾನ ಮಾಡಿ, ಬಟ್ಟೆ ಬದಲಿಸಿಕೊಂಡು ಮನೆಗೆ ಮರಳಬಹುದು’ ಎಂದು ಪೌರಕಾರ್ಮಿಕರಾದ ಸುಶೀಲಮ್ಮ ಹೇಳಿದರು.
‘ವಾರ್ಡ್ ಸಂಖ್ಯೆ 37ರಲ್ಲಿ ವಿಶ್ರಾಂತಿಗೃಹ ಇಲ್ಲ. ಇಲ್ಲಿನ ಸಮುದಾಯ ಭವನದಲ್ಲಿ ಕೂತು ಉಪಾಹಾರ ಸೇವಿಸುತ್ತೇವೆ. ಈಗ ಅಲ್ಲಿಯೂ ಅವಕಾಶ ನೀಡುತ್ತಿಲ್ಲ. ರಸ್ತೆ ಬದಿ ಕೂರಬೇಕು. ಈ ವಾರ್ಡ್‌ನಲ್ಲೂ ವಿಶ್ರಾಂತಿಗೃಹ ನಿರ್ಮಿಸಬೇಕು’ ಎಂದು ಪೌರಕಾರ್ಮಿಕರೊಬ್ಬರು ತಿಳಿಸಿದರು.
‘ವಿಶ್ರಾಂತಿಗೃಹಗಳಿಗೆ ನೀರಿನ ಸಂಪರ್ಕ ಕಲ್ಪಿಸುವಂತೆ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮದ (ಕೆಯುಐಡಿಎಫ್‌ಸಿ) ಅಧಿಕಾರಿಗಳಿಗೆ ಕೋರಲಾಗಿದೆ. ನೀರಿನ ಸಂಪರ್ಕ ಸಿಕ್ಕ ನಂತರ ವಿಶ್ರಾಂತಿಗೃಹಗಳ ಬಳಕೆಗೆ ಅವಕಾಶ ನೀಡಲಾಗುವುದು’ ಎಂದು ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ (ಯೋಜನಾ ವಿಭಾಗ) ವಿಜಯಕುಮಾರ್.ಆರ್ ಹೇಳಿದರು. ‘ವಾರ್ಡ್‌ಗೆ ಒಂದು ವಿಶ್ರಾಂತಿ ಗೃಹ ನಿರ್ಮಿಸುವ ಉದ್ದೇಶ ಸಹ ಇದೆ. ಆದರೆ ಜಾಗದ ಕೊರತೆ ಇದೆ. ಕೆಲ ಕಡೆ ಸ್ಥಳೀಯರ ವಿರೋಧವಿದೆ. ಎಲ್ಲ ಸಮಸ್ಯೆಗಳ ನಿವಾರಣೆಗೆ ಪ್ರಯತ್ನಿಸುತ್ತೇವೆ’ ಎಂದರು.
ಪೌರಕಾರ್ಮಿಕರ ಹಿತದೃಷ್ಟಿಯಿಂದ ವಿಶ್ರಾಂತಿಗೃಹಗಳನ್ನು ನಿರ್ಮಿಸಲಾಗಿದೆ. ಕುಡಿಯುವ ನೀರಿನ ಸೌಲಭ್ಯ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಿ ಬಳಕೆಗೆ ನೀಡಲಾಗುವುದು–ಡಾ.ಈಶ್ವರ ಉಳ್ಳಾಗಡ್ಡಿ ಆಯುಕ್ತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.