ADVERTISEMENT

ಹುಬ್ಬಳ್ಳಿ | ಬಯೊಮೆಟ್ರಿಕ್‌: ಶಾಲೆಗಳಲ್ಲಿ ಆಗದ ಪಾಲನೆ

ವಿದ್ಯಾರ್ಥಿಗಳ ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ

ಶಿವರಾಯ ಪೂಜಾರಿ
Published 23 ಜೂನ್ 2024, 4:44 IST
Last Updated 23 ಜೂನ್ 2024, 4:44 IST
ಧಾರವಾಡದ ಸರ್ಕಾರಿ ಶಾಲೆಯೊಂದರಲ್ಲಿ ಬಯೋಮೆಟ್ರಿಕ್ ಅಳವಡಿಸಿರುವುದು
ಧಾರವಾಡದ ಸರ್ಕಾರಿ ಶಾಲೆಯೊಂದರಲ್ಲಿ ಬಯೋಮೆಟ್ರಿಕ್ ಅಳವಡಿಸಿರುವುದು   

ಹುಬ್ಬಳ್ಳಿ: ರಾಜ್ಯದಾದ್ಯಂತ ಮೇ 31ರಿಂದ ಶಾಲೆಗಳು ಆರಂಭಗೊಂಡಿವೆ. ವಿದ್ಯಾರ್ಥಿಗಳ ದಾಖಲಾತಿ, ಪಠ್ಯ–ಪುಸ್ತಕ ವಿತರಣೆ ಪ್ರಕ್ರಿಯೆ ಭರದಿಂದ ಸಾಗಿದೆ. ಆದರೆ, ಕೆಲ ಸರ್ಕಾರಿ ಶಾಲೆಗಳಲ್ಲಿ ಈವರೆಗೆ ಬಯೊಮೆಟ್ರಿಕ್ ಹಾಜರಾತಿ ಮಾತ್ರ ಪಾಲನೆ ಆಗುತ್ತಿಲ್ಲ.

ರಾಜ್ಯ ಸರ್ಕಾರವು 2019ರಲ್ಲಿ ಸರ್ಕಾರಿ ಕಚೇರಿ ಹಾಗೂ ಶಾಲಾ–ಕಾಲೇಜುಗಳಲ್ಲಿ ಕಡ್ಡಾಯವಾಗಿ ಬಯೊಮೆಟ್ರಿಕ್ಅಳವಡಿಸಬೇಕೆಂಬ ನಿಯಮ ಜಾರಿಗೊಳಿಸಿದ್ದು, ಪಾಲನೆಗೆ ಕ್ರಮವಹಿಸುವಂತೆ ಆಯಾ ಇಲಾಖೆಗಳಿಗೆ ಪ್ರತಿವರ್ಷ ಸೂಚಿಸುತ್ತಲೇ ಇದೆ. ಆದರೂ, ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಈ ನಿಯಮ‍ ‍ಗಾಳಿಗೆ ತೂರಲಾಗಿದೆ.

ಕೆಲವು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು, ಸಿಬ್ಬಂದಿ ಸರಿಯಾದ ಸಮಯಕ್ಕೆ  ಹಾಜರಾಗುವುದಿಲ್ಲ. ಶಾಲೆಯ ಶೈಕ್ಷಣಿಕ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಹಾಗೂ ವಿದ್ಯಾರ್ಥಿಗಳ ಮೇಲೆ  ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಲ್ಲದೆ, ಕಲಿಕೆಗೂ ಹಿನ್ನಡೆ ಆಗುತ್ತದೆ ಎಂಬ ಸಾರ್ವಜನಿಕರ, ವಿದ್ಯಾರ್ಥಿ ಪೋಷಕರ ದೂರುಗಳಿವೆ.

ADVERTISEMENT

ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಶಾಲೆಗಳಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್‌ ಅಳವಡಿಸಬೇಕು, ನಿಗದಿತ ಸಮಯಕ್ಕೆ ಶಿಕ್ಷಕರು, ಸಿಬ್ಬಂದಿ ಶಾಲೆಗಳಲ್ಲಿ ಇದ್ದು ಪಾಠ, ಪ್ರವಚನ ಮಾಡಬೇಕು ಎಂದು ಸೂಚಿಸಿದೆ.

ಜಿಲ್ಲೆಯಲ್ಲಿ 735 ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ 112 ಪ್ರೌಢ ಶಾಲೆಗಳಿವೆ. ಕಳೆದ ವರ್ಷದವರೆಗೆ ಸರ್ಕಾರಿ ಶಾಲೆಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಚೇರಿಯಿಂದ ಬಯೊಮೆಟ್ರಿಕ್ಯಂತ್ರಗಳನ್ನು ನೀಡಲಾಗಿದೆ. ಇವುಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ, ಹಾಳಾಗಿದ್ದರೆ ದುರಸ್ತಿಪಡಿಸುವಂತೆ ಆಯಾ ಶಾಲಾ ಮುಖ್ಯ ಶಿಕ್ಷಕರಿಗೆ ಹೊಣೆ ನೀಡಿದೆ.

ಬಯೊಮೆಟ್ರಿಕ್‌ ಅಳವಡಿಕೆಗೆ ಪ್ರತಿ ಶಾಲೆಗೆ ₹7 ಸಾವಿರ ನಿಗದಿಪಡಿಸಲಾಗಿದೆ. ಸರ್ಕಾರದಿಂದ ಶಾಲಾ ಶಿಕ್ಷಣ ಇಲಾಖೆಗೆ ಆ ಹಣ ಜಮೆಯಾಗಿ, ಅಲ್ಲಿಂದ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಖಾತೆಗೆ ಜಮೆ ಮಾಡಲಾಗುತ್ತದೆ. ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕರು ಎಸ್‌ಡಿಎಂಸಿ ಜೊತೆ ಸೇರಿಕೊಂಡು ಬಯೊಮೆಟ್ರಿಕ್‌ ಅಳವಡಿಸಿಕೊಳ್ಳಬೇಕು. ಇನ್ನು, ಪ್ರೌಢಶಾಲೆ ಮುಖ್ಯಶಿಕ್ಷಕರ ಖಾತೆಗೆ ನೇರ ಹಣ ಜಮೆ ಆಗುತ್ತದೆ.

ಆದರೆ, ಬಹುತೇಕ ಕಡೆ ಮುಖ್ಯಶಿಕ್ಷಕರ ಮೇಲುಸ್ತುವಾರಿ ಹಾಗೂ ಇಚ್ಛಾಶಕ್ತಿಯ ಕೊರತೆಯಿಂದ ಬಯೊಮೆಟ್ರಿಕ್ ಯಂತ್ರ ಇದ್ದರೂ ಇದರ ಬಳಕೆ ಆಗುತ್ತಿಲ್ಲ ಎಂಬ ಆರೋಪ ಶಿಕ್ಷಕರಿಂದಲೇ ಕೇಳಿಬಂದಿದೆ.

‘ಶಾಲೆಯಲ್ಲಿ ಬಯೊಮೆಟ್ರಿಕ್ ಇದೆ. ಬಳಕೆಗೆ ಸುಸ್ಥಿತಿಯಲ್ಲಿದೆ. ಆದರೂ ಬಳಕೆ ಮಾಡುತ್ತಿಲ್ಲ. ಶಿಕ್ಷಕರು ಹಾಜರಾತಿ ಪುಸ್ತಕದಲ್ಲಿ ಮಾತ್ರ ಸಹಿ ಮಾಡುತ್ತಾರೆ’ ಎಂದು ಹೇಳುತ್ತಾರೆ ಸರ್ಕಾರಿ ಶಾಲೆಯೊಂದರಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ.

ಎಲ್ಲ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ. ಪಾಲನೆ ಕುರಿತು ಪರಿಶೀಲಿಸಲಾಗುವುದು.
ಎಸ್‌.ಎಸ್‌.ಕೆಳದಿಮಠ, ಡಿಡಿಪಿಐ ಧಾರವಾಡ

‘ಗ್ರಾಮೀಣ ಭಾಗದಲ್ಲಿ ನಿಯಮ ಸಡಿಲಿಸಿ’

‘ಬಯೋಮೆಟ್ರಿಕ್ ಹಾಜರಾತಿಯನ್ನು ಸರ್ಕಾರಿ ಶಾಲೆಗಳಲ್ಲಿ  ಕಡ್ಡಾಯಗೊಳಿಸಿರುವುದು ಸ್ವಾಗತಾರ್ಹ. ಆದರೆ ಇದು ಗ್ರಾಮೀಣ ಭಾಗದ ಶಾಲೆಗಳಲ್ಲಿ ಪಾಲನೆಯಾಗುವುದು ತೀರಾ ಕಡಿಮೆ. ಗ್ರಾಮೀಣ ಭಾಗಗಳ ಶಾಲೆಗಳಿಗೆ ಸಮಯಕ್ಕೆ ಸರಿಯಾಗಿ ತಲುಪಲು ಬಸ್ ವ್ಯವಸ್ಥೆ ಇಲ್ಲ. ಇದರಿಂದ ಕೆಲವು ಬಾರಿ ಶಿಕ್ಷಕರು ವಿದ್ಯಾರ್ಥಿಗಳು ನಿಗದಿತ ಅವಧಿಗಿಂತ ತಡವಾಗಿ ಶಾಲೆಗೆ ತೆರಳುವಂತಾಗಿದೆ. ಅಲ್ಲದೆ ಸಂಜೆ ಶಾಲಾ ಅವಧಿಯ ಬಳಿಕ ಕೆಲವೆಡೆ ಬಸ್ ವ್ಯವಸ್ಥೆಯೇ ಇಲ್ಲ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರಿಗೆ ಬಯೋಮೆಟ್ರಿಕ್  ಹಾಜರಾತಿ ಕಡ್ಡಾಯ ಪಾಲನೆ ನಿಯಮದಲ್ಲಿ ಸಡಿಲಿಗೆ ನೀಡಬೇಕು’ ಎಂಬುದು ಗ್ರಾಮೀಣ ಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಸರ್ಕಾರಿ ಶಾಲೆಗಳ ಶಿಕ್ಷಕರ ಮನವಿ.

ವಿದ್ಯಾರ್ಥಿಗಳು ಹೇಳೋದೇನು?

‘ಕೆಲ ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಬರುವುದಿಲ್ಲ. ತಡವಾಗಿ ಬಂದರೂ ಒಂದೊಂದು ಬಾರಿ ಶಾಲೆಯಿಂದ ಮಧ್ಯಾಹ್ನವೇ ಮನೆಗೆ ತೆರಳುತ್ತಾರೆ. ಮುಖ್ಯಶಿಕ್ಷಕರು ಶಾಲೆಗೆ ವಾರದಲ್ಲಿ ಎರಡು ಬಾರಿ ಬಂದರೆ ಅದೇ ಹೆಚ್ಚು. ಅವರು ಪ್ರತಿದಿನ ಶಾಲೆಗೆ ಬಂದರೆ ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗೆ ಬಂದು ತರಗತಿಗಳು ಸುಸೂತ್ರವಾಗಿ ನಡೆಯಲು ಸಾಧ್ಯ. ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯದ ನಿಯಮ ಕಟ್ಟುನಿಟ್ಟಾಗಿ ಪಾಲನೆ ಆಗಬೇಕು’ ಎನ್ನುತ್ತಾರೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.