ADVERTISEMENT

ಪೆಟ್ರೋಲ್, ಡೀಸೆಲ್ ದರ ಏರಿಕೆ | ನಾಳೆ ಬಿಜೆಪಿ ಪ್ರತಿಭಟನೆ: ಅರವಿಂದ ಬೆಲ್ಲದ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 8:22 IST
Last Updated 16 ಜೂನ್ 2024, 8:22 IST
ಅರವಿಂದ ಬೆಲ್ಲದ
ಅರವಿಂದ ಬೆಲ್ಲದ   

ಹುಬ್ಬಳ್ಳಿ: ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಏರಿಕೆ ಮಾಡಿರುವುದನ್ನು ಖಂಡಿಸಿ ಬಿಜೆಪಿಯಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಶಾಸಕ, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ಇಲ್ಲಿನ ಅರವಿಂದನಗರದ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ದರ ಹೆಚ್ಚು ಇರುವ ರಾಜ್ಯಗಳ ಮಾಹಿತಿ ನೀಡಿ, ದರ ಏರಿಕೆಗೆ ಸಮರ್ಥನೆ ನೀಡಲಾಗಿದೆ. ಗುಜರಾತ್ ನಲ್ಲಿ ಕಡಿಮೆ ದರ ಇದ್ದು, ಈ ಬಗ್ಗೆ ಮಾಹಿತಿ ನೀಡಿಲ್ಲ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಇಂಧನ ದರ ಕಡಿಮೆ ಇದೆ ಎಂದರು.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಕ್ಷಯಪಾತ್ರೆಯ ದೊಡ್ಡ ಜಾಹೀರಾತು ನೀಡಿತ್ತು. ಆದರೀಗ ಬೆಲೆ ಏರಿಕೆ ಚೊಂಬು ನೀಡಿದೆ. ಇಂಧನ ದರ ಏರಿಕೆಯಿಂದ ಕಾಯಿಪಲ್ಲೆ, ಧಾನ್ಯ ಮತ್ತಿತರ ವಸ್ತುಗಳ ದರವೂ ಏರಿಕೆಯಾಗುತ್ತದೆ. ಗ್ಯಾರಂಟಿ ಹೆಸರಿನಲ್ಲಿ ಒಂದು ಕಡೆ ಕೊಟ್ಟು, ಇನ್ನೊಂದು ಕಡೆ ಕಿತ್ತುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ADVERTISEMENT

ತೊಗರಿಬೇಳೆ, ಅಕ್ಕಿ ದರವೂ ಏರಿಕೆಯಾಗಿದೆ. ಸಾಲ ಪಡೆದವರು ಅಧಿಕ ತೆರಿಗೆ ನೀಡಬೇಕಿರುವ ಕಾರಣ, ಹೂಡಿಕೆಗೆ ಉದ್ಯಮಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದರು.

ಧಾರವಾಡದಲ್ಲಿ ಗೋವುಗಳ ಸಾಗಣೆ ವಿರೋಧಿಸಿದ ವ್ಯಕ್ತಿ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿ ವಿರುದ್ಧವೇ ಪ್ರಕರಣ ದಾಖಲಿಸಲಾಗಿದೆ. ಅಲ್ಪಸಂಖ್ಯಾತರಿಂದ ದೇಶವಿರೋಧಿ ಕೃತ್ಯಗಳು ಹೆಚ್ಚುತ್ತಿವೆ. ದುಷ್ಟಶಕ್ತಿಗಳ ಚಟುವಟಿಕೆ ಬಗ್ಗೆ ಪೊಲೀಸರಿಗೂ ಗೊತ್ತಿದ್ದರೂ ತಡೆಹಿಡಿಯುತ್ತಿಲ್ಲ ಎಂದು ಆರೋಪಿಸಿದರು.

ಸರ್ಕಾರದ ಕುಮ್ಮಕ್ಕಿನಿಂದ ಅಪರಾಧ ಹೆಚ್ಚಳವಾಗುತ್ತಿವೆ. ಸಚಿವ ಜಮೀರ್ ಅಹ್ಮದ್ ಗೂಂಡಾಗಳ ಸೆಟಲ್ಮೆಂಟ್ ನಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲವಾಗಿದೆ. ತುಷ್ಟೀಕರಣ ನೀತಿಯಿಂದ ಅರಾಜಕತೆ ಸೃಷ್ಟಿಯಾಗಿದೆ. ಇದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.