ಹುಬ್ಬಳ್ಳಿ: 1992ರಲ್ಲಿ ನಗರದಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿ ಶ್ರೀಕಾಂತ ಪೂಜಾರಿ ಅವರನ್ನು ಶಹರ ಠಾಣೆ ಪೊಲೀಸರು ಬಂಧಿಸಿರುವುದನ್ನು ಖಂಡಿಸಿ, ಬುಧವಾರ ಠಾಣೆ ಎದುರು ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರದ ವಿರುದ್ಧ ಘೋಷಣೆ, ಭಜನೆ ಮೂಲಕ ಪಕ್ಷದ ಮುಖಂಡರು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಕ್ರೋಶಭರಿತ ಮಾತುಗಳಿಂದ ಕಾರ್ಯಕರ್ತರಿಗೆ ಬಲ ತುಂಬಿದರು. ಪೊಲೀಸ್ ಬಿಗಿ ಬಂದೋಬಸ್ತ್ ನಡುವೆಯೂ ನೂರಾರು ಕಾರ್ಯಕರ್ತರು ಠಾಣೆ ಮುತ್ತಿಗೆ ಯತ್ನಿಸಿದ್ದರಿಂದ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಈ ಮಧ್ಯೆ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ನೂಕಾಟ, ವಾಗ್ವಾದ ನಡೆಯಿತು. ಟೈರ್ ಸುಟ್ಟು ಆಕ್ರೋಶ ಹೊರಹಾಕಿದರು.
ಬಿಡುಗಡೆಗೊಂಡ ಬಳಿಕ ಶ್ರೀಕಾಂತ್ ಪೂಜಾರಿ ಮನೆಗೆ ಭೇಟಿ ನೀಡಿದ ಮುಖಂಡರು, ಕುಟುಂಬದವರಿಗೆ ಧೈರ್ಯ ತುಂಬಿದರು.
ವಹಿವಾಟು ಬಂದ್:
ಪ್ರತಿಭಟನೆ ಹಿನ್ನೆಲೆಯಲ್ಲಿ ಶಹರ ಠಾಣೆ ರಸ್ತೆಯಲ್ಲಿರುವ ಕೆಲವು ಅಂಗಡಿಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲಾಗಿತ್ತು. ಠಾಣೆ ಸಂಪರ್ಕಿಸುವ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ, ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಬ್ಯಾರಿಕೇಡ್ ಹಾಗೂ ಪೊಲೀಸ್ ವಾಹನಗಳನ್ನು ಠಾಣೆ ಎದುರು ನಿಲ್ಲಿಸಿ, ದಿಗ್ಬಂಧನ ಹಾಕಲಾಗಿತ್ತು. ನಗರದ ಪ್ರಮುಖ ಸ್ಥಳಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ 2000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪ್ರತಿಭಟನಾ ಸ್ಥಳದಲ್ಲಿ ಹತ್ತಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಠಾಣೆ ಎದುರಿನ ಸರ್ಕಾರಿ ಮಾದರಿ ಗಂಡುಮಕ್ಕಳ ಶಾಲೆ ನಂ.2 ರಲ್ಲಿ ಎಂದಿನಂತೆ ಶೈಕ್ಷಣಿಕ ಚಟುವಟಿಕೆಗಳು ನಡೆದವು.
ಆರಂಭದಲ್ಲಿ ಜನಸಂಚಾರ ಕಡಿಮೆ ಇತ್ತು. ನಂತರ ಪ್ರತಿಭಟನೆಗೆ ಸೇರಿದ್ದ ಕಾರ್ಯಕರ್ತರ ನಡುವೆಯೇ ಜನರು ದಾರಿ ಮಾಡಿಕೊಂಡು ಸಾಗಿದರು. ಶ್ರೀರಾಮ, ಆಂಜನೇಯನ ಚಿತ್ರ ಇರುವ ಕೇಸರಿ ಧ್ವಜಗಳು ರಾರಾಜಿಸಿದವು.
ಮೊಳಗಿದ ಘೋಷಣೆಗಳು: ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ಜೈ ಶ್ರೀರಾಮ್, ಹಿಂದೂ ವಿರೋಧಿ ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹಸಚಿವ ಪರಮೇಶ್ವರ್, ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಧಿಕ್ಕಾರ ಎಂಬ ಘೋಷಣೆಗಳು ಮೊಳಗಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.