ADVERTISEMENT

ಬಿಜೆಪಿ ಘೋಷಣೆಗಷ್ಟೇ ಸೀಮಿತ: ಎನ್‌.ಎಚ್‌. ಕೋನರಡ್ಡಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 13:31 IST
Last Updated 8 ಡಿಸೆಂಬರ್ 2021, 13:31 IST
ಎನ್‌.ಎಚ್‌. ಕೋನರಡ್ಡಿ
ಎನ್‌.ಎಚ್‌. ಕೋನರಡ್ಡಿ    

ಹುಬ್ಬಳ್ಳಿ: ‘ರಾಜ್ಯ ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಎಂದು ಘೋಷಣೆ ಮಾಡಿ ಪ್ರಚಾರವಷ್ಟೇ ತೆಗೆದುಕೊಳ್ಳು ತ್ತಿದೆ. ಆದರೆ, ಇಲ್ಲಿಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಮಾತ್ರ ವಿಫಲವಾಗಿದೆ’ ಎಂದು ಜೆಡಿಎಸ್‌ ಮುಖಂಡ ಎನ್‌.ಎಚ್‌. ಕೋನರಡ್ಡಿ ಆಕ್ರೋಶ ಆರೋಪಿಸಿದರು.

ಡಿ. 13ರಂದು ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಆರಂಭವಾಗುತ್ತಿದ್ದು, ಉತ್ತರ ಕರ್ನಾಟಕ ಭಾಗದಲ್ಲಿನ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿ, ಪರಿಹಾರ ನೀಡುವಲ್ಲಿ ಮುಂದಾಗಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಉತ್ತರ ಕರ್ನಾಟಕ ಭಾಗಕ್ಕೆ ಹೇಳಿಕೊಳ್ಳುವಷ್ಟು ಅನುದಾನ ಬಂದಿಲ್ಲ. ಅವರು ಘೋಷಿಸಿದ ಯೋಜನೆಗಳೆಲ್ಲ ಬರೀ ಪ್ರಚಾರಕ್ಕಷ್ಟೇ ಸೀಮಿತವಾಗಿದೆ. ಬೆಳಗಾವಿಯ ಅಧಿವೇಶನದಲ್ಲಿ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಕಾಮಗಾರಿಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು. ಈ ಯೋಜನೆ ಹೋರಾಟದ ಮುಂಚೂಣಿಯಲ್ಲಿದ್ದ ಬಸವರಾಜ ಬೊಮ್ಮಾಯಿ ಈಗ ಮುಖ್ಯಮಂತ್ರಿಯಾಗಿದ್ದು, ಕಾಮಗಾರಿ ಆರಂಭಿಸುವ ಕುರಿತು ಅಧಿಸೂಚನೆ ಹೊರಡಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ADVERTISEMENT

ಮಹದಾಯಿ ಹೋರಾಟಗಾರರ ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಆದರೆ, ಈಗ ಮತ್ತೆ ಕೆಲವು ಹೋರಾಟಗಾರರಿಗೆ ಕೋರ್ಟ್‌ ನೋಟಿಸ್‌ ನೀಡಲಾಗಿದೆ. ಅಧಿಕಾರಿಗಳನ್ನು ಪ್ರಶ್ನಿಸಿದರೆ ತಮಗೆ ಗೊತ್ತಿಲ್ಲ ಎನ್ನುತ್ತಾರೆ. ಸರ್ಕಾರವೇ ಹಿಂಪಡೆದ ಪ್ರಕರಣಕ್ಕೆ ಮತ್ತೆ ಜೀವ ತುಂಬಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೈತರಿಂದ ಬೆಳೆ ವಿಮೆ ತುಂಬಿಸಿಕೊಂಡ ವಿಮಾ ಕಂಪನಿಗಳು, ಬೆಳೆ ನಷ್ಟದ ವಿಮೆ ನೀಡಲು ಮುಂದಾಗುತ್ತಿಲ್ಲ. ಕಂಪನಿ ವಿರುದ್ಧ ಗೋಕುಲ ಠಾಣೆಯಲ್ಲಿ ದೂರು ನೀಡಿದ್ದು, ಇನ್ನೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಹು-ಧಾ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಸಿಮರದ ಇದ್ದರು.

ಜೆಡಿಎಸ್‌ ಬೆಂಬಲ ಕಾಂಗ್ರೆಸ್‌ಗೆ: ‘ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಸಲೀಂ ಅಹ್ಮದ್‌ ಪರವಾಗಿ ಜೆಡಿಎಸ್ ಕಾರ್ಯಕರ್ತರು ಪ್ರಚಾರ ನಡೆಸಿದ್ದಾರೆ. ಈ ಕ್ಷೇಥ್ರದಲ್ಲಿ ಒಂದು ಸಾವಿರದಷ್ಟು ಪಂಚಾಯಿತಿ ಸದಸ್ಯರು ಜೆಡಿಎಸ್‌ ಬೆಂಬಲಿತರಾಗಿದ್ದಾರೆ. ಅವರೆಲ್ಲರ ಮತ ಸಲೀಂ ಅವರಿಗೇ ಚಲಾಯಿಸುವಂತೆ ವಿನಂತಿಸಲಾಗಿದೆ ಎಂದ ಕೋನರಡ್ಡಿ, ಕಾಂಗ್ರೆಸ್‌ ಸೇರುವ ವಿಚಾರ ಸದ್ಯಕ್ಕಿಲ್ಲ. ಕ್ಷೇತ್ರದ ಜನರ ಭಿಪ್ರಾಯ ಸಂಗ್ರಹಿಸಿ ಅಧಿವೇಶನದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.