ADVERTISEMENT

ಜೋಶಿ ಕೇಂದ್ರ ಸಚಿವರಾಗುವುದು ನಿಶ್ಚಿತ: ತಾರಾ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 14:46 IST
Last Updated 10 ಏಪ್ರಿಲ್ 2019, 14:46 IST
ಹುಬ್ಬಳ್ಳಿಯಲ್ಲಿ ಬುಧವಾರ ನಟಿ ತಾರಾ ಅನುರಾಧ ಅವರು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಪರ ಕರಪತ್ರಗಳನ್ನು ಹಂಚುವ ಮೂಲಕ ಮತಯಾಚಿಸಿದರು
ಹುಬ್ಬಳ್ಳಿಯಲ್ಲಿ ಬುಧವಾರ ನಟಿ ತಾರಾ ಅನುರಾಧ ಅವರು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಪರ ಕರಪತ್ರಗಳನ್ನು ಹಂಚುವ ಮೂಲಕ ಮತಯಾಚಿಸಿದರು   

ಹುಬ್ಬಳ್ಳಿ: ‘ಪ್ರಹ್ಲಾದ ಜೋಶಿ ಅವರು ಈ ಬಾರಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಕೇಂದ್ರ ಸಚಿವರಾಗುವುದು ನಿಶ್ಚಿತ’ ಎಂದು ನಟಿ ತಾರಾ ಅನುರಾಧ ವಿಶ್ವಾಸವ್ಯಕ್ತಪಡಿಸಿದರು.

ಬಿಜೆಪಿ ಅಭ್ಯರ್ಥಿ ಜೋಶಿ ಪರವಾಗಿ ನಗರದಲ್ಲಿ ಮತಯಾಚನೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸತ್ತಿನಲ್ಲಿ ದಿವಂಗತ ಅನಂತಕುಮಾರ್‌ ಅವರ ಸ್ಥಾನವನ್ನು ಈ ಬಾರಿ ಜೋಶಿ ತುಂಬಲಿದ್ದಾರೆ ಎಂದು ಅವರು ಹೇಳಿದರು.

ಸಂಸತ್ತಿನಲ್ಲಿ ಅತೀ ಹೆಚ್ಚು ಪ್ರಶ್ನೆಗಳನ್ನು ಕೇಳಿದ ಮತ್ತು ಕ್ರೀಯಾಶೀಲ ಸಂಸದರ ಪಟ್ಟಿಯಲ್ಲಿ ಪ್ರಹ್ಲಾದ ಜೋಶಿ ಅವರು ಏಳನೇ ಸ್ಥಾನದಲ್ಲಿದ್ದಾರೆ ಎಂದರು.

ADVERTISEMENT

ಐದು ವರ್ಷಗಳ ಆಡಳಿತಾವಧಿಯಲ್ಲಿ ಮೋದಿ ಅವರು ದೇಶಕ್ಕೆ ಸಮರ್ಥ ನಾಯಕತ್ವ, ಸುಭದ್ರ ಸರ್ಕಾರ ನೀಡಿದ್ದಾರೆ. ದೇಶವನ್ನು ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಿದ್ದಾರೆ. ಈ ಬಾರಿಯೂ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದ್ದು, ಮತ್ತೊಮ್ಮೆ ಮೋದಿ ಅವರು ಪ್ರಧಾನಿಯಾಗಲಿದೆ ಎಂದು ಹೇಳಿದರು.

ಧಾರವಾಡ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಈಗಾಗಲೇ ಕೊಲೆ ಪ್ರಕರಣವೊಂದರಲ್ಲಿ ಹೈಕೋರ್ಟ್‌ ಎಫ್‌ಐಆರ್‌ ದಾಖಲಿಸುವಂತೆ ಸೂಚನೆ ನೀಡಿದೆ. ಇಂತಹ ಕಳಂಕಿತ ವ್ಯಕ್ತಿ ಎದುರು ಬಿಜೆಪಿ ಅಭ್ಯರ್ಥಿ ಗೆಲುವು ಸುಲಭವಾಗಲಿದೆ ಎಂದು ಹೇಳಿದರು.

ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್‌ ಅವಕಾಶ ನೀಡಿದ್ದರೂ ಅದನ್ನು ತಡೆಯುವ ಮೂಲಕ ಬಿಜೆಪಿ ಮಹಿಳಾ ವಿರೋಧಿನೀತಿ ಅನುಸರಿಸುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಧಾರ್ಮಿಕ ನಂಬಿಕೆ, ಆಚರಣೆ, ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುವುದು ಮುಖ್ಯವೇ ಹೊರತು ಇಂತಹ ಸ್ಥಳಗಳಲ್ಲಿ ಮಹಿಳಾ ಸ್ವಾತಂತ್ರ್ಯ, ಸಮಾನತೆ ನಿರೀಕ್ಷಿಸುವುದು ಸರಿಯಲ್ಲ. ಅಯ್ಯಪ್ಪನ ಮೇಲೆ ಭಕ್ತಿ ಇರುವವರು ಮನೆಯಲ್ಲೇ ಪೂಜಿಸಬಹುದು ಎಂದು ಹೇಳಿದರು.

ಕೇರಳದ ಎಷ್ಟೋ ದೇವಾಲಯಗಳಲ್ಲಿ ಇಂದಿಗೂ ಪುರುಷರಿಗೆ ಪ್ರವೇಶವಿಲ್ಲ. ಹಾಗಂತ ಎಲ್ಲಿಯೂ ಹೋರಾಟ ನಡೆದಿಲ್ಲ. ಶಬರಿಮಲೆ ವಿಷಯದಲ್ಲಿ ಪರಂಪರಾಗತ ಸಂಪ್ರದಾಯಗಳನ್ನು ಉಲ್ಲಂಘಿಸಿ ಇನ್ನೊಬ್ಬರ ಮನಸ್ಸಿಗೆ ನೋವು ನೀಡುವುದು ಸರಿಯಲ್ಲ ಎಂದರು.

ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾ.ನಾಗರಾಜ, ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಗ್ರಾಮೀಣ ಘಟಕದ ಅಧ್ಯಕ್ಷ ಈರಣ್ಣ ಜಡಿ, ಮುಖಂಡರಾದ ದತ್ತಮೂರ್ತಿ ಕುಲಕರ್ಣಿ, ಸಂತೋಷ ಚವ್ಹಾಣ, ರಾಮದೇವ ರಾಮದುರ್ಗ, ಹನುಮಂತಪ್ಪ ದೊಡ್ಡಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.