ADVERTISEMENT

ಜನಸಾಮಾನ್ಯರ ಮಾಲ್‌; ಈ ದುರ್ಗದಬೈಲ್‌

ಇಲ್ಲಿಗೆ ಬಂದರೆ ಎಲ್ಲವೂ ಲಭ್ಯ

ಗೋವರ್ಧನ ಎಸ್.ಎನ್.
Published 20 ಅಕ್ಟೋಬರ್ 2023, 5:59 IST
Last Updated 20 ಅಕ್ಟೋಬರ್ 2023, 5:59 IST
ಹುಬ್ಬಳ್ಳಿಯ ದುರ್ಗದ ಬೈಲ್‌ ಮಾರುಕಟ್ಟೆಯಲ್ಲಿ ಬಟ್ಟೆ ಖರೀದಿಯಲ್ಲಿ ತೊಡಗಿದ್ದ ಮಹಿಳೆಯರು
ಪ್ರಜಾವಾಣಿ ಚಿತ್ರ–ಗೋವಿಂದರಾಜ ಜವಳಿ
ಹುಬ್ಬಳ್ಳಿಯ ದುರ್ಗದ ಬೈಲ್‌ ಮಾರುಕಟ್ಟೆಯಲ್ಲಿ ಬಟ್ಟೆ ಖರೀದಿಯಲ್ಲಿ ತೊಡಗಿದ್ದ ಮಹಿಳೆಯರು ಪ್ರಜಾವಾಣಿ ಚಿತ್ರ–ಗೋವಿಂದರಾಜ ಜವಳಿ   

ಹುಬ್ಬಳ್ಳಿ: ‘ಎರಡು ನೂರು ರೂಪಾಯಿಗೆ ಶರ್ಟ್‌... ದೀಡ್‌ ನೂರಕ್ಕೆ ಟಿ–ಶರ್ಟ್‌... ಬರ‍್ರೀ... ಬರ‍್ರೀ...’ ನಗರದ ಈ ಪ್ರಮುಖ ಮಾರುಕಟ್ಟೆ ಕಡೆ ನೀವು ಹೋದ್ರೆ, ಈ ಕೂಗು ಕೇಳಿರುತ್ತೀರಿ. ಎಷ್ಟೋ ಮಂದಿ ಇಷ್ಟು ಕಡಿಮೆ ಬೆಲೆಗೆ ಬಟ್ಟೆ, ವಸ್ತುಗಳು ಸಿಗುತ್ತವೆ ಎಂಬ ಕಾರಣಕ್ಕೇ ಇಲ್ಲಿಗೆ ಬರುತ್ತಾರೆ. ಇನ್ನೂ ಕೆಲವರಿಗೆ ಈ ಜನಸಂದಣಿ ನಡುವೆ ಹೆಜ್ಜೆ ಹಾಕೋದೇ ಒಂದು ಖುಷಿ. ಇದೇ ರೀ ಜನಸಾಮಾನ್ಯರ ಮಾಲ್‌– ದುರ್ಗದ ಬೈಲ್‌...

ಜನರು ಮಾಲ್‌ಗೆ ಯಾಕೆ ಹೋಗ್ತಾರೆ? ಎಲ್ಲ ಅಗತ್ಯ ವಸ್ತುಗಳು ಒಂದೆಡೆ ಸಿಗುತ್ತವೆ ಎಂಬ ಉದ್ದೇಶದಿಂದ. ಮಾಲ್‌ಗಳಲ್ಲಿ ದರ ತುಸು ದುಬಾರಿ. ಆದರೆ, ದುರ್ಗದಬೈಲ್‌ನಲ್ಲಿ ಯಾವುದೇ ವಸ್ತುಗಳ ದರ ಕಡಿಮೆ. ಮಾಲ್‌ನಲ್ಲಿ ಕೆಲ ವಸ್ತುಗಳು ಸಿಗದೇ ಇರಬಹುದು. ಇಲ್ಲಿ ಸಿಗದ ವಸ್ತುಗಳೇ ಇಲ್ಲ. ಇಲ್ಲಿ ಬಂದರೆ ಅಗತ್ಯವಿರುವ ಎಲ್ಲಾ ವಸ್ತುಗಳನ್ನು ಕೊಂಡೊಯ್ಯಬಹುದು. ಈ ಜಾಗಕ್ಕೆ ವಿಶೇಷ ಇತಿಹಾಸವೂ ಇದೆ. ಹುಬ್ಬಳ್ಳಿಗರಿಗಷ್ಟೇ ಅಲ್ಲದೆ, ಸುತ್ತಲಿನ ತಾಲ್ಲೂಕು ಹಾಗೂ ಜಿಲ್ಲೆಯವರಿಗೂ ಈ ಮಾರುಕಟ್ಟೆ ಚಿರಪರಿಚಿತ.

ಇಲ್ಲಿರುವ ಮಳಿಗೆಗಳಲ್ಲಷ್ಟೇ ಅಲ್ಲದೆ, ಬೀದಿಬದಿಯ ವ್ಯಾಪಾರವೂ ಜೋರು. ಬೆಳಿಗ್ಗೆಯಿಂದ ವ್ಯಾಪಾರ ಗರಿಗೆದರಿದೆ, ಸಂಜೆಯಾಗುತ್ತಿದ್ದಂತೆ ಕಾಲಿಡಲು ಆಗದಷ್ಟು ಜನಸಂದಣಿ ಇರುತ್ತದೆ. ಬಣ್ಣ ಬಣ್ಣ ಬೆಳಕಿಗೆ ಫಳ ಫಳ ಹೊಳೆಯುವ ವಸ್ತುಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಭಾನುವಾರ, ಹಬ್ಬದ ಸಂದರ್ಭಗಳಲ್ಲಿ ಈ ಭಾಗ ಮತ್ತಷ್ಟು ಕಳೆಗಟ್ಟುತ್ತದೆ, ಝಗಮಗಿಸುತ್ತದೆ.

ADVERTISEMENT

ಏನೇನಿದೆ?: ದುರ್ಗದಬೈಲ್‌ ಪ್ರವೇಶಿಸುತ್ತಲೇ ಬಟ್ಟೆ, ಗೃಹೋಪಯೋಗಿ ವಸ್ತುಗಳು, ಗೃಹ ಆಲಂಕಾರಿಕ ವಸ್ತುಗಳು, ಮೇಕಪ್‌ ಪರಿಕರಗಳು, ಬಳೆ, ಓಲೆ, ಜುಮುಕಿ, ಸರದಂತಹ ಆಲಂಕಾರಿಕ ಒಡವೆಗಳು, ಬೆಳ್ಳಿ–ಚಿನ್ನಾಭರಣ, ಪಾತ್ರೆ, ಹೋಟೆಲ್‌, ಚಹಾ ಅಂಗಡಿ, ತಿನಿಸು, ಪಾನೀಯ, ಮಸಾಲೆ ಪದಾರ್ಥಗಳು, ದಿನಸಿ, ತರಕಾರಿ, ಹಣ್ಣು, ಹೂವು, ಪೂಜಾಸಾಮಗ್ರಿ, ಪ್ಲಾಸ್ಟಿಕ್‌, ಬ್ಯಾಗ್‌, ಸುಂಗಧದ್ರವ್ಯ, ಚಪ್ಪಲಿ, ಔಷಧ ಮೊದಲಾದ ವಸ್ತುಗಳೊಂದಿಗೆ ಎಲ್ಲ ತರಹದ ವಸ್ತುಗಳ ರಿಪೇರಿ ಮಾಡುವ ಅಂಗಡಿಗಳೂ ಇಲ್ಲಿವೆ.

ಬಾಯಲ್ಲಿ ನೀರೂರಿಸುವ ತಿನಿಸುಗಳು: ಅಗತ್ಯ ವಸ್ತುಗಳನ್ನು ಖರೀದಿಸಲಷ್ಟೇ ಅಲ್ಲದೆ, ಹೆಚ್ಚು ಮಂದಿ ಇಲ್ಲಿಗೆ ಬರಲು ಕಾರಣ ಬಗೆ ಬಗೆಯ ತಿನಿಸುಗಳು. ಎಗ್‌ರೈಸ್‌, ವಿವಿಧ ಬಗೆಯ ದೋಸೆಗಳು, ಇಡ್ಲಿ–ವಡಾ, ಗೋಬಿ ಮಂಚೂರಿ, ಮಸಾಲ್‌ಪೂರಿ, ಪಾನಿಪೂರಿ, ಮಿರ್ಚಿ, ಆಲೂಬೋಂಡಾ, ಪಕೋಡ, ಸಮೋಸ, ಚಕೋರಿ, ಚಿಪ್ಸ್‌, ವಡಾಪಾವ್‌, ಹೋಳಿಗೆ, ಕರಿದ ಪದಾರ್ಥಗಳು, ಮಾಂಸಪ್ರಿಯರಿಗೆ ಕಬಾಬ್‌, ಬಿರ್ಯಾನಿ ಮತ್ತಿತರ ಖಾದ್ಯಗಳು ಕೈ ಬೀಸಿ ಕರೆಯುತ್ತವೆ, ಬಾಯಲ್ಲಿ ನೀರೂರಿಸುತ್ತವೆ. ಇವುಗಳ ರುಚಿ ಕಂಡವರು ನಿತ್ಯ ಸಂಜೆ ಇಲ್ಲವೇ ವಾರಕ್ಕೊಮ್ಮೆಯಾದರೂ ಇಲ್ಲಿಗೆ ಬಂದು, ಸವಿಯುತ್ತಾರೆ. ಇತರರನ್ನೂ ಕರೆತಂದು, ರುಚಿ ಹತ್ತಿಸುತ್ತಾರೆ.

ಬಟ್ಟೆ ವ್ಯಾಪಾರವೇ ಹೆಚ್ಚು: ಶರ್ಟ್‌, ಟೀ ಶರ್ಟ್‌, ಶಾರ್ಟ್‌, ಪ್ಯಾಂಟ್‌, ಲೆಗ್ಗಿಂಗ್‌ ಕುರ್ತಿ, ನೈಟ್‌ ಡ್ರೆಸ್‌, ಬುರ್ಖಾ, ಶೇರ್ವಾನಿ, ಗೌನ್‌, ಜಾಕೆಟ್‌ಗಳು ಕೈಗೆಟುವ ದರದಲ್ಲಿ ಸಿಗುತ್ತವೆ. ಹಬ್ಬದ ಸಂದರ್ಭದಲ್ಲಿ ಬೆಲೆ ಇನ್ನೂ ಅಗ್ಗ. ವೈವಿಧ್ಯಮಯ ದಿರಿಸಿನ ಅಭಿರುಚಿವುಳ್ಳವರು, ಸಣ್ಣ ವ್ಯಾಪಾರಿಗಳು, ಹೆಣ್ಣು ಮಕ್ಕಳು ಮುಗಿಬಿದ್ದು ಬಟ್ಟೆ ಖರೀದಿಸುವುದನ್ನು ನಿತ್ಯ ಕಾಣಬಹುದು.

ಉತ್ತಮ ಆದಾಯ: ದುರ್ಗದ ಬೈಲ್‌ಗೆ ಹೆಚ್ಚು ಗ್ರಾಹಕರು ಭೇಟಿ ನೀಡುವುದರಿಂದ ವ್ಯಾಪಾರಿಗಳು ಉತ್ತಮ ಆದಾಯ ಕಾಣುತ್ತಿದ್ದಾರೆ. ಬೀದಿ ಬದಿಯ ವ್ಯಾಪಾರಿಗಳೇ ನಿತ್ಯ ಸಾವಿರಾರು ರೂಪಾಯಿ ಆದಾಯ ಗಳಿಸುತ್ತಿದ್ದಾರೆ. 

‘ವಾರಕ್ಕೊಮ್ಮೆ ಹಾಗೂ ಹಬ್ಬದಂತಹ ವಿಶೇಷ ಸಂದರ್ಭಗಳಲ್ಲಿ ದುರ್ಗದಬೈಲ್‌ಗೆ ಬರುತ್ತೇವೆ. ದಿನಬಳಕೆ ವಸ್ತುಗಳೊಂದಿಗೆ, ವಿಶೇಷ ಸಂದರ್ಭಕ್ಕೆ ಬೇಕಾಗುವ ಎಲ್ಲ ವಸ್ತುಗಳು ಇಲ್ಲಿ ಸಿಗುತ್ತವೆ. ದರ ಕಡಿಮೆ. ಮೊದಲಿನಿಂದಲೂ ಇಲ್ಲಿ ವಸ್ತುಗಳ ಖರೀದಿ ಮಾಡುವುದು ಸಂಪ್ರದಾಯವೇ ಆಗಿದೆ’ ಎಂದು ಗ್ರಾಹಕ ರಮೇಶ ಕುಲಕರ್ಣಿ ತಿಳಿಸಿದರು.

ಹುಬ್ಬಳ್ಳಿಯ ದುರ್ಗದ ಬೈಲ್‌ ಮಾರುಕಟ್ಟೆ ರಾತ್ರಿ ವೇಳೆ ಜನದಟ್ಟಣೆಯಿಂದ ಕೂಡಿರುವುದು
ಹುಬ್ಬಳ್ಳಿಯ ದುರ್ಗದ ಬೈಲ್‌ ಮಾರುಕಟ್ಟೆಯಲ್ಲಿ ತಿನಿಸುಗಳ ಸವಿ ಸವಿಯುತ್ತಿರುವ ಜನ
ಹುಬ್ಬಳ್ಳಿಯ ದುರ್ಗದ ಬೈಲ್‌ ಮಾರುಕಟ್ಟೆ
ಹುಬ್ಬಳ್ಳಿಯ ದುರ್ಗದ ಬೈಲ್‌ ಮಾರುಕಟ್ಟೆಯಲ್ಲಿ ಜನರು ತರಕಾರಿ ಖರೀದಿಸಿದರು
ಹುಬ್ಬಳ್ಳಿಯ ದುರ್ಗದ ಬೈಲ್‌ ಮಾರುಕಟ್ಟೆಯ ಬೆಳಗಿನ ನೋಟ
ರತ್ನವ್ವ
ಗಣಪತಿ ಸಾ
ಪರಂದಾಮ
ರೇಣುಕಾ
ಶೋಭಾ
ಬಶೀರ್‌
ಇಸ್ಮಾಯಿಲ್‌
ಪಾಂಡುರಂಗ ಪಾಟೀಲ
ಡಾ.ಈಶ್ವರ ಉಳ್ಳಾಗಡ್ಡಿ

ಹಲವು ವರ್ಷಗಳಿಂದ ಇಲ್ಲಿ ವ್ಯಾಪಾರ  ಮಾಡುತ್ತಿದ್ದೇವೆ. ಬಿಸಿಲು ಮಳೆಗೆ ತೊಂದರೆಯಾಗುತ್ತದೆ. ಅಂಗಡಿ ನಿರ್ಮಿಸಿಕೊಟ್ಟರೆ ಅನುಕೂಲವಾಗುತ್ತದೆ.

–ರೇಣುಕಾ, ಬೀದಿ ಬದಿ ವ್ಯಾಪಾರಿ

50 ವರ್ಷದಿಂದ ವ್ಯಾಪಾರ ಮಾಡುತ್ತಿದ್ದೇನೆ. ಹಬ್ಬ-ವಿಶೇಷ ಸಂದರ್ಭಗಳಲ್ಲಿ ವ್ಯಾಪಾರ ಚೆನ್ನಾಗಿರುತ್ತದೆ. ಜೀವನ ನಿರ್ವಹಣೆಗೆ ವ್ಯಾಪಾರ ಆಧಾರವಾಗಿದೆ

ರತ್ನವ್ವ, ಹೊದಿಕೆ ವ್ಯಾಪಾರಿ

40 ವರ್ಷದಿಂದ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದೇನೆ. ಲಾಕ್‍ಡೌನ್‍ ಬಳಿಕ ಹಾಗೂ ಆನ್‍ಲೈನ್‍ ವ್ಯಾಪಾರ ಹೆಚ್ಚಿದಾಗಿನಿಂದ ವ್ಯಾಪಾರ ಕಡಿಮೆಯಾಗಿದೆ

–ಗಣಪತಿ ಸಾ ಮಿಸ್ಕಿನ್‍ ಚಪ್ಪಲಿ ವ್ಯಾಪಾರಿ

20 ವರ್ಷದಿಂದ ಆಹಾರ ಉದ್ಯಮ ನಡೆಸುತ್ತಿದ್ದೇನೆ. ಮಾರುಕಟ್ಟೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಬೇಕು. ಇನ್ನಷ್ಟು ಅಭಿವೃದ್ಧಿ ಕಾರ್ಯಗಳಾಗಬೇಕು  

– ಪುಷ್ಪ ಹೊಂಬಾಳೆ  ಸ್ವದೇಶಿ ಫುಡ್ಸ್‌

60 ವರ್ಷದಿಂದ ಸಿಹಿ ತಿನಿಸು ವ್ಯಾಪಾರ ಮಾಡುತ್ತಿದ್ದೇನೆ. ಮಾರುಕಟ್ಟೆ ಬೆಳೆದಂತೆ ವ್ಯಾಪಾರವೂ ಹೆಚ್ಚಾಗಿದೆ. ಎಲ್ಲ ವಸ್ತುಗಳು ಸಿಗುವುದರಿಂದ ಜನರಿಗೆ ಅನುಕೂಲವಾಗಿದೆ

–ಪರಮಾನಂದ, ವ್ಯಾಪಾರಿ

ಐದಾರು ವರ್ಷದಿಂದ ವ್ಯಾಪಾರ ಮಾಡುತ್ತಿದ್ದೇನೆ . ಹೆಚ್ಚು ಜನರು ಬರುವುದರಿಂದಲೇ ಉತ್ತಮ ವ್ಯಾಪಾರ ನಡೆಯುತ್ತಿದೆ. ಸರ್ಕಾರ ಸೌಲಭ್ಯ ಕಲ್ಪಿಸಬೇಕು

–ಬಶೀರ್ ಅಹ್ಮದ್‍ ಬಟ್ಟೆ ವ್ಯಾಪಾರಿ

ಬೀದಿ ಬದಿ ವ್ಯಾಪಾರಿಗಳಿಗಾಗಿ ಪ್ರತ್ಯೇಕ ವ್ಯಾಪಾರ ವಲಯ ನಿರ್ಮಿಸಲಾಗುತ್ತಿದೆ. ದುರ್ಗದಬೈಲ್‌ ಅಭಿವೃದ್ಧಿಗಾಗಿ ಯೋಜನೆ ರೂಪಿಸಲಾಗುತ್ತಿದೆ

–ಡಾ.ಈಶ್ವರ ಉಳ್ಳಾಗಡ್ಡಿ ಆಯುಕ್ತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ

ಹಲವು ವಿಶೇಷತೆಗಳು

* 1942ರಲ್ಲಿ ಸ್ವಾತಂತ್ರ್ಯ ಹೋರಾಟಗಾರ 14 ವರ್ಷಕ್ಕೇ ಬ್ರಿಟಿಷರ ಗುಂಡಿಗೆ ಎದೆಯೊಡ್ಡಿದ್ದ ನಾರಾಯಣ ಡೋಣಿ ಪ್ರತಿಮೆ ದುರ್ಗದ ಬೈಲ್‌ನಲ್ಲಿದೆ. ನಾರಾಯಣ ಡೋಣಿ ಚೌಕವನ್ನೂ ನಿರ್ಮಿಸಲಾಗಿದೆ. * ಪ್ರತಿ ವರ್ಷ ಗಣೇಶೋತ್ಸವದ ಪ್ರಯುಕ್ತ ಇಲ್ಲಿ ಬೃಹದಾಕಾರದ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಗಣಪನ ಮೂರ್ತಿಯೊಂದಿಗೆ ವಿಶೇಷ ಮಾದರಿಯ ಮಂಟಪ ಕೂಡ ನಿರ್ಮಿಸಲಾಗುತ್ತದೆ. * ವ್ಯಾಪಾರಿಗಳು ಸೀಸನ್ ಆಧರಿಸಿ ವ್ಯಾಪಾರ ಮಾಡುವುದರಿಂದ ಹಬ್ಬಕ್ಕೆ ಅನುಸಾರವಾಗಿ ಎಲ್ಲಾ ಅಗತ್ಯ ವಸ್ತುಗಳು ಇಲ್ಲಿ ಸಿಗುತ್ತವೆ. * ದುರ್ಗದ ಬೈಲ್‌ನಲ್ಲಿ ಶಹರ ಪೊಲೀಸ್‌ ಠಾಣೆ ಪಕ್ಕದಲ್ಲಿ ಶಾ ಬಜಾರ್‌ ಗಾಂಧಿ ಮಾರುಕಟ್ಟೆ ಬ್ರಾಡ್‌ವೇ ಸಿಬಿಟಿ ಇದೆ. * ಮಾರುಕಟ್ಟೆ ಸುತ್ತ ವಿವಿಧ ದೇವಸ್ಥಾನಗಳು ಮಸೀದಿಗಳು ಇವೆ. ಹಿಂದೂ–ಮುಸ್ಲಿಮರು ಭಾವೈಕ್ಯತೆಯಿಂದ ವ್ಯಾಪಾರದಲ್ಲಿ ತೊಡಗಿದ್ದಾರೆ

ಕೋಟೆ ಮುಂದಿನ ಬಯಲು’

‘ದುರ್ಗ ಎಂದರೆ  ಕೋಟೆ ಬೈಲ್‍ ಅಥವಾ ಬಯಲು ಎಂದರೆ ಜಾಗ. ಕೋಟೆ ಮುಂದಿನ ಜಾಗವಾದ್ದರಿಂದ ಇದಕ್ಕೆ ದುರ್ಗದ ಬೈಲ್‍ ಎಂಬ ಹೆಸರು ಬಂತು. ಮರಾಠರು ಪೇಶ್ವೆ ಹಾಗೂ ಸವಣೂರು ನವಾಬರ ಕಾಲದಲ್ಲಿ ಇಲ್ಲಿ ಕೋಟೆ ಇತ್ತು. ಮುಂದಿನ ಬಯಲಿನಲ್ಲಿ ಕುದುರೆ ಆನೆ ಕಟ್ಟುತ್ತಿದ್ದರು’ ಎಂದು ದುರ್ಗದಬೈಲ್‍ನ ಇತಿಹಾಸ ತೆರೆದಿಟ್ಟವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಪಾಂಡುರಂಗ ಪಾಟೀಲ. ‘ಈಗಿನ ಸಿಬಿಟಿ ಇರುವ ಜಾಗದಲ್ಲಿ ಕೋಟೆ ಇತ್ತು. ಅದಕ್ಕೆ ಅದನ್ನು ಇಂದಿಗೂ ಕೋಟೆ ಪ್ರದೇಶ ಎಂದು ಕರೆಯುತ್ತಾರೆ. ಹುಬ್ಬಳ್ಳಿಯಲ್ಲೇ ಎತ್ತರದ ಪ್ರದೇಶವಿದು. ಬಾಕಳೆಗಲ್ಲಿಯಲ್ಲಿ ಗಣಪತಿ ಗುಡಿ ಇದ್ದು ಪೇಶ್ವೆ ಆಡಳಿತ ಗುರುತಾಗಿದೆ. ಹಳೇ ಹುಬ್ಬಳ್ಳಿಯಲ್ಲೂ ಕೋಟೆ ಇತ್ತು. ಯುದ್ಧಗಳಾದಾಗ ಪಾರಾಗಲು ಅಲ್ಲಿ ದಿಡ್ಡಿ ನಿರ್ಮಿಸಲಾಗಿತ್ತು’ ಎಂದು ಹೇಳಿದರು. ‘17ನೇ ಶತಮಾನದಲ್ಲಿ ಹೊಸ ಹುಬ್ಬಳ್ಳಿ ನಿರ್ಮಿಸಲು ವ್ಯಾಪಾರಿ ಬಸಪ್ಪಶೆಟ್ರು ಮತ್ತವರ ಸ್ನೇಹಿತರು ಸವಣೂರಿನ ನವಾಬರಿಂದ ದುರ್ಗದ ಬೈಲ್‍ ಜಾಗವನ್ನು ಉಂಬಳಿ ಪಡೆದರು. ಈಗಿರುವ ಸರಾಫಗಲ್ಲಿಯಲ್ಲಿ ಆಗ ಸಣ್ಣಅಂಗಡಿಗಳು ನಿರ್ಮಾಣವಾದವು. ನಂತರ ಮುಂದೆ ಅಂಗಡಿ ಹಿಂದೆ ಮನೆಗಳನ್ನು ನಿರ್ಮಿಸಿಕೊಂಡು ವ್ಯಾಪಾರಿಗಳು ಇಲ್ಲಿ ನೆಲೆ ಕಂಡರು. ಕಾಲ ಕಾಲಕ್ಕೆ ಮಾರುಕಟ್ಟೆಯ ವಿಸ್ತರಣೆಯಾಯಿತು’ ಎಂದು ವಿವರಿಸಿದರು. ‘ಮೊದಲು ದುರ್ಗದಬೈಲ್‍ ಎಂಬ ಬೋರ್ಡ್‍ಗಳನ್ನು ಹಾಕಿಕೊಂಡೇ ಬಸ್‍ಗಳು ಇಲ್ಲಿಗೆ ಬರುತ್ತಿದ್ದವು. ನಂತರ ಸಿಬಿಟಿ ನಿರ್ಮಾಣವಾಯಿತು. ಇಡೀ ಹುಬ್ಬಳ್ಳಿಗೆ ಮೊದಲ ಮಾರುಕಟ್ಟೆ ಈ ದುರ್ಗದಬೈಲ್‍. ಇಲ್ಲಿನ ಇತಿಹಾಸದ ಕುರಿತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಕರೆಣ್ಣವರ ಅವರು 1950ರಲ್ಲಿ ರಚಿಸಿದ್ದ ಪುಸ್ತಕವೊಂದರಲ್ಲಿ ಉಲ್ಲೇಖಿಸಿದ್ದರು’ ಎಂದರು.

‘ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಿ’

‘ಹಲವಾರು ವರ್ಷಗಳಿಂದ ದುರ್ಗದಬೈಲ್‍ನಲ್ಲಿ ಅನೇಕ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದಾರೆ. ಆದರೆ ಈಗ ಬೇರೆಡೆ ವ್ಯಾಪಾರ ಮಾಡುವಂತೆ ಪಾಲಿಕೆ ಒತ್ತಡ ಹೇರುತ್ತಿದೆ. 18 ಮೀಟರ್ ರಸ್ತೆಯಲ್ಲಿ ಇದ್ದರೆ ಅಲ್ಲಿ ಬೀದಿ ಬದಿ ವ್ಯಾಪಾರ ನಡೆಸಲು ಅವಕಾಶವಿದೆ. ಇಲ್ಲಿನವರಿಗೆ ಬೇರೆ ಕಡೆ ವ್ಯಾಪಾರಕ್ಕೆ ಅವಕಾಶ ನೀಡುವುದಾಗಿ ಹೇಳುತ್ತಿದ್ದಾರೆ.  ಸರಿಯಾಗಿ ವ್ಯವಸ್ಥೆ ಮಾಡಿಕೊಡದಿದ್ದರೆ ಅಲ್ಲಿ ವ್ಯಾಪಾರಿಗಳಿಗೆ ನಷ್ಟ ತಪ್ಪಿದ್ದಲ್ಲ’ ಎಂದು ನಗರ ವ್ಯಾಪಾರ ಸಮಿತಿಯ ಸದಸ್ಯ ಇಸ್ಮಾಯಿಲ್‍ ಬಿಳಿಪಸಾರ್ ಹೇಳಿದರು. ‘ಈ ಹಿಂದೆ ಕರ ವಸೂಲಿ ಗುತ್ತಿಗೆ ಪಡೆದವರು ಹೆಚ್ಚು ಹಣ ವಸೂಲಿ ಮಾಡಿ ದೌರ್ಜನ್ಯ ಮಾಡುತ್ತಿದ್ದರು. ಪಾಲಿಕೆಯೇ ನೇರವಾಗಿ ಕರ ಸಂಗ್ರಹಿಸಲಿ. ಆ ಹಣದಿಂದ ಬೀದಿ ಬದಿ ವ್ಯಾಪಾರಿಗಳಿಗೆ ಅಗತ್ಯ ಅನುಕೂಲ ಮಾಡಿಕೊಡಲಿ. ಬೇರೆ ಜಿಲ್ಲೆಗಳಲ್ಲಿ ಬೀದಿಬದಿ ವ್ಯಾಪಾರಿಗಳ ಜಿಪಿಆರ್‌ಎಸ್‌ ಸರ್ವೆ ನಡೆಸಿ ಗುರುತಿನ ಚೀಟಿ ನೀಡಲಾಗಿದೆ. ಇಲ್ಲಿ ಈವರೆಗೂ ಆಗಿಲ್ಲ. ಈ ಬಗ್ಗೆ ಪಾಲಿಕೆ ಕ್ರಮ ವಹಿಸಬೇಕು’ ಎಂದು ಅವರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.