ಹುಬ್ಬಳ್ಳಿ: ಬಿಆರ್‌ಟಿಎಸ್ ಸಂಸ್ಥೆಯ ತಂಗುದಾಣಗಳು ಒಂದರ್ಥದಲ್ಲಿ ಅವ್ಯವಸ್ಥೆಗಳ ಆಗರ. ಅಲ್ಲಿ ಒಂದೆಡೆ ಸೌಲಭ್ಯಗಳ ಕೊರತೆಯಿದ್ದರೆ, ಮತ್ತೊಂದೆಡೆ ಟಿಕೆಟ್ ರಹಿತವಾಗಿ ಪ್ರಯಾಣಿಸಬಹುದಾದ ಅವಕಾಶಗಳೂ ಇವೆ. ಸಮರ್ಪಕ ನಿರ್ವಹಣೆ ಕೊರತೆಯಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದರೆ, ಮತ್ತೊಂದೆಡೆ ಟಿಕೆಟ್ ಖರೀದಿಸದೇ ಪ್ರಯಾಣಿಸುವವರಿಂದ ಆದಾಯ ನಷ್ಟವೂ ಆಗುತ್ತಿದೆ!
ಕೌಂಟರ್‌ಗಳಲ್ಲಿ ಟಿಕೆಟ್ ಪಡೆದು, ಅವುಗಳನ್ನು ಸ್ವೈಪ್ ಮಾಡಿ ನಿಲ್ದಾಣದ ಒಳ ಪ್ರವೇಶಿಸಲು ಫೇರ್‌ಗೇಟ್‌ಗಳಿವೆ. ಆದರೆ, ಅವು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಖರೀದಿಸಿದ ಟಿಕೆಟ್ ಕೆಲ ಸಂದರ್ಭಗಳಲ್ಲಿ ಸ್ಕ್ಯಾನ್ ಆಗುವುದಿಲ್ಲ. ಹೀಗಾಗಿ ಫೇರ್‌ಗೇಟ್ ತೆರೆಯುವುದಿಲ್ಲ. ಕೆಲವೆಡೆ ಆ ಫೇರ್‌ಗೇಟ್‌ಗಳು ಮುರಿದಿದ್ದು, ಅದರ ದುರಸ್ತಿ ಕಾರ್ಯವೂ ನಡೆದಿಲ್ಲ.
‘ತುರ್ತಾಗಿ ಹೋಗಬೇಕಾದ ಸಂದರ್ಭದಲ್ಲಿ ಟಿಕೆಟ್ ಸ್ವೈಪ್ ಮಾಡಿದರೂ ಗೇಟ್‌ಗಳು ತೆರೆಯುವುದಿಲ್ಲ. ಅಷ್ಟರಲ್ಲಿ ಬಸ್ ಹೋಗಿರುತ್ತದೆ. ಇನ್ನೊಂದು ಬಸ್ ಬರುವವರೆಗೂ ಕಾಯಬೇಕು. ಇದರಿಂದ ಹಲವು ಬಾರಿ ಸಮಸ್ಯೆ ಎದುರಿಸಿದ್ದೇನೆ’ ಎಂದು ನಿವೃತ್ತ ನೌಕರರಾದ ಗೋವಿಂದರಾವ್ ತಿಳಿಸಿದರು.
‘ಹಾಳಾದ ಗೇಟ್‌ಗಳು ಒಮ್ಮೆ ತೆರೆದರೆ, ಮುಚ್ಚಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತವೆ. ಅಷ್ಟರಲ್ಲಿ ಪ್ರಯಾಣಿಕರು ನಿಲ್ದಾಣದ ಒಳಗೆ ಪ್ರವೇಶಿಸಬಹುದು. ಕೆಲವರು ಟಿಕೆಟ್ ಪಡೆಯದೆ ಒಳ ಬರುತ್ತಾರೆ. ಕೆಲ ಕಡೆ ಫೇರ್‌ಗೇಟ್‌ಗಳು ಮುರಿದಿವೆ. ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಈ ಅವ್ಯವಸ್ಥೆಯನ್ನು ಸಂಸ್ಥೆಯ ಸಿಬ್ಬಂದಿ, ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂಬುದು ಅವರ ದೂರು.
ಸರಿಯಾದ ತಪಾಸಣೆ ಇಲ್ಲ: ಬಿಆರ್‌ಟಿಎಸ್ ಕಾರಿಡಾರ್‌ಗಳಲ್ಲಿ ಬೇರೆ ವಾಹನಗಳ ಸಂಚರಿಸಿದರೆ ತಡೆಯಲು, ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದರೆ, ಅವರನ್ನು ಪತ್ತೆ ಮಾಡಲು, ಟಿಕೆಟ್ ವಿತರಕರ ಮೂಲಕ ದಂಡ ವಿಧಿಸಲು, ಪ್ರಯಾಣಿಕರಿಗೆ ಮಾರ್ಗದರ್ಶನ ಮಾಡಲು ನಿಲ್ದಾಣಗಳಲ್ಲಿ ಮಾರ್ಷಲ್‌ಗಳನ್ನು ನೇಮಿಸಲಾಗಿದೆ.
34 ನಿಲ್ದಾಣಗಳ ಪೈಕಿ ಸದ್ಯ ಕೆಲವೇ ನಿಲ್ದಾಣಗಳಲ್ಲಿ ಮಾರ್ಷಲ್‌ಗಳಿದ್ದು, ಉಳಿದೆಡೆ ಇಲ್ಲ. ಇದರಿಂದ ಟಿಕೆಟ್ ಪಡೆಯದೆ ನಿಲ್ದಾಣಗಳನ್ನು ಪ್ರವೇಶಿಸಿದರೂ ಯಾರೂ ಕೇಳದಂತಹ ಸ್ಥಿತಿ ಇದೆ. ಬಸ್ ಒಳಗಡೆಯೂ ಸರಿಯಾಗಿ ತಪಾಸಣೆ ಆಗುತ್ತಿಲ್ಲ ಎಂಬುದು ಪ್ರಯಾಣಿಕರ ದೂರು.
ಕೊನೆಯ ಬಸ್ ಸಂಚಾರದವರೆಗೂ ಟಿಕೆಟ್ ಕೌಂಟರ್‌ಗಳಲ್ಲಿ ಸಿಬ್ಬಂದಿ ಇರುವುದಿಲ್ಲ. ಇದರಿಂದ ರಾತ್ರಿ ವೇಳೆ ಹುಬ್ಬಳ್ಳಿ–ಧಾರವಾಡ ನಡುವೆ ಅನೇಕರು ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿರುವ ಪ್ರಕರಣಗಳು ಇವೆ.
‘ರಾತ್ರಿ 10ರ ಬಳಿಕ ತಂಗುದಾಣಗಳಲ್ಲಿ ಬಹುತೇಕ ಸಂದರ್ಭಗಳಲ್ಲಿ ಎರಡು ಕೌಂಟರ್ ಬದಲು ಒಂದು ಕೌಂಟರ್‌ನಲ್ಲಿ ಮಾತ್ರ ಸಿಬ್ಬಂದಿ ಇರುತ್ತಾರೆ. ರಾತ್ರಿ 10.30ರ ನಂತರ ಸಿಬ್ಬಂದಿ ಇರುವ ಕೌಂಟರ್‌ಗೆ ಹೋಗಲು ಪ್ರಯಾಸ ಪಡಬೇಕಾಗುತ್ತದೆ. ಗಡಿಬಿಡಿ ಕಾರಣ ಕೆಲ ಬಾರಿ ಗೊಂದಲವೂ ಆಗುತ್ತದೆ’ ಎಂದು ಹೋಟೆಲ್‌ನಲ್ಲಿ ಕೆಲಸ ಮಾಡುವ ಉದ್ಯೋಗಿ ರಮೇಶ ಜಾಧವ ತಿಳಿಸಿದರು.
‘ಕೋವಿಡ್‌ಗೂ ಮುಂಚಿನ ದಿನಗಳಲ್ಲಿ ಬಸ್‌ಗಳು ರಾತ್ರಿ 12ರವರೆಗೆ ಇರುತ್ತಿದ್ದವು. ಊರುಗಳಿಂದ ಬರುವ ಪ್ರಯಾಣಿಕರಿಗೆ ಅನುಕೂಲ ಆಗುತಿತ್ತು. ಆದರೆ, ಈಗ 11ರ ಬಳಿಕ ಬಸ್‌ಗಳೇ ಇರುವುದಿಲ್ಲ. ಊರಿನಿಂದ ಬಂದವರು ಧಾರವಾಡ, ನವನಗರ, ಸತ್ತೂರು ಕಡೆ ಹೋಗಲು ಏನು ಮಾಡಬೇಕು? ರಾತ್ರಿ ವೇಳೆಯೂ ಪ್ರಯಾಣಿಕರು ಇರುತ್ತಾರೆ. ಅವರಿಗಾಗಿ ಬಸ್ ಸೌಲಭ್ಯ ಕಲ್ಪಿಸಬೇಕು’ ಎಂದು ಅವರು ಹೇಳಿದರು.
ಕಾರ್ಯನಿರ್ವಹಿಸದ ಡಿಸ್‌ಪ್ಲೇ ಫಲಕ: ಬಿಆರ್‌ಟಿಎಸ್ ನಿಲ್ದಾಣಗಳ ಒಳಗೆ ಮತ್ತು ಟಿಕೆಟ್ ಕೌಂಟರ್‌ಗಳ ಬಳಿ ಬಸ್ ಸಂಚಾರದ ಮಾಹಿತಿಗಾಗಿ ಫಲಕಗಳನ್ನು ಅಳವಡಿಸಲಾಗಿದೆ. ಕೆಲವೆಡೆ ಇವು ಬಂದ್ ಆಗಿರುವ ಕಾರಣ ಸರಿಯಾದ ಮಾಹಿತಿ ಸಿಗುತ್ತಿಲ್ಲ ಎಂಬುದು ಪ್ರಯಾಣಿಕರ ಅಳಲು.
ಸ್ಪಂದಿಸದ ಸಿಬ್ಬಂದಿ: ‘ಟಿಕೆಟ್ ಕೌಂಟರ್‌ನಲ್ಲಿ ಏನಾದರೂ ಮಾಹಿತಿ ಕೇಳಿದರೆ, ಸಿಬ್ಬಂದಿ ಸರಿಯಾಗಿ ಸ್ಪಂದಿಸುವುದಿಲ್ಲ. ಪ್ರಯಾಣಿಕರ ಜತೆ ಸೌಜನ್ಯದಿಂದ ವರ್ತಿಸುವುದಿಲ್ಲ. ರಿಯಾಯಿತಿ ಟಿಕೆಟ್‌ಗಾಗಿ ಹಿರಿಯ ನಾಗರಿಕರು ಗುರುತಿನ ಚೀಟಿ ತೋರಿಸಿದರೂ ಆಧಾರ್ ಕಾರ್ಡ್ ತೋರಿಸಲೇಬೇಕೆಂದು ಹೇಳುತ್ತಾರೆ. ಸರ್ಕಾರಿ ಮತ್ತು ಖಾಸಗಿ ಬಸ್‌ಗಳಲ್ಲಿ ಬರೀ ಗುರುತಿನ ಚೀಟಿಯ ಸಂಖ್ಯೆ ಹೇಳಿದರೆ, ನಿರ್ವಾಹಕರು ಟಿಕೆಟ್ ಕೊಡುತ್ತಾರೆ. ಆದರೆ, ಕೌಂಟರ್‌ನಲ್ಲಿನ ಸಿಬ್ಬಂದಿ ಮಾತ್ರ ಕಿರಿಕಿರಿ ಮಾಡುತ್ತಾರೆ’ ಎಂದು ವೃದ್ಧೆ ಜಾನಕಮ್ಮ ತಿಳಿಸಿದರು.
ಬಿಆರ್‌ಟಿಎಸ್ ನಿಲ್ದಾಣಗಳಲ್ಲಿ ಸ್ವಚ್ಛತೆಗೆ ಸಿಬ್ಬಂದಿ ಕೊರತೆ ಎದುರಾಗಿದೆ. ಒಟ್ಟು 39 ನಿಲ್ದಾಣಗಳಿದ್ದು ಕೇವಲ 10 ಸಿಬ್ಬಂದಿ ಮಾತ್ರ ಇದ್ದಾರೆ. ‘ಸಿಬ್ಬಂದಿ ಕೊರತೆಯಿಂದ ಒಬ್ಬ ಸಿಬ್ಬಂದಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12ರವರೆಗೆ 4 ನಿಲ್ದಾಣಗಳಲ್ಲಿ ಸ್ವಚ್ಛತೆ ಕೈಗೊಳ್ಳಬೇಕು. ಇದರಿಂದ ಒತ್ತಡ ಹೆಚ್ಚಾಗಿದೆ. ಈಗ ಇರುವ ಸಿಬ್ಬಂದಿ ಜತೆಗೆ ಹೆಚ್ಚುವರಿಯಾಗಿ 11 ಸಿಬ್ಬಂದಿಯನ್ನು ನೇಮಕ ಮಾಡುವಂತೆ ಸಂಸ್ಥೆಯ ಅಧಿಕಾರಿಗಳಿಗೆ ಮಾಡಲಾಗಿದೆ’ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.
ಟಿಕೆಟ್‌ಗಳಲ್ಲಿ ಕ್ಯುಆರ್ ಕೋಡ್ ಸರಿಯಾಗಿ ಪ್ರಿಂಟ್ ಆಗದ ಕಾರಣ ಫೇರ್‌ಗೇಟ್‌ಗಳಲ್ಲಿ ಸ್ಕ್ಯಾನ್ ಆಗುವುದಿಲ್ಲ. ಈ ಬಗ್ಗೆ ಸಿಬ್ಬಂದಿಯನ್ನು ಕೇಳಿದರೆ ಸರಿಯಾಗಿ ಸ್ಪಂದಿಸುವುದಿಲ್ಲ.–ಲಿಂಗರಾಜ ಧಾರವಾಡಶೆಟ್ಟರ್, ಸಂಚಾಲಕ ಹುಬ್ಬಳ್ಳಿ ಧಾರವಾಡ ವಾರ್ಡ್ ಸಮಿತಿ ಬಳಗ
ಟಿಕೆಟ್ ಪಡೆಯದೆ ಪ್ರಯಾಣಿಸುವುದನ್ನು ತಡೆಯಲು ಕಟ್ಟುನಿಟ್ಟಿನ ತಪಾಸಣೆ ಮಾಡಬೇಕು. ಸಿಬ್ಬಂದಿ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು.-ಸುಮಾ, ಪ್ರಮಾಣಿಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.