ಧಾರವಾಡ: ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ,ನಗರ ಯೋಜನೆ ಇಲಾಖೆ ಉಪನಿರ್ದೇಶಕ ಬಿ.ವಿ.ಹಿರೇಮಠ ಸೇರಿದಂತೆ ಒಟ್ಟು ಏಳು ಅಧಿಕಾರಿಗಳನ್ನು ನಗರಾಭಿವೃದ್ಧಿ ಇಲಾಖೆ ಅಮಾನತು ಮಾಡಿದೆ.
ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಶ್ರೀಧರ, ಸಹಾಯಕ ಆಯುಕ್ತ ಸಂತೋಷ ಆನಿಶೆಟ್ಟರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಪ್ಪ, ನಗರ ಯೋಜನಾ ಇಲಾಖೆ ಸಹಾಯಕ ನಿರ್ದೇಶಕ ಅಶೋಕ ಗದಗ, ನಗರ ಯೋಜಕ ಮುಕುಂದ ಜೋಶಿ, ಕಂದಾಯ ವಿಭಾಗದ ವಲಯ ಅಧಿಕಾರಿ ಪ್ರಭಾಕರ ದೊಡ್ಡಮನಿ ಅಮಾನತುಗೊಂಡ ಇತರ ಅಧಿಕಾರಿಗಳು.
ಘಟನಾ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಈ ವಿಷಯ ತಿಳಿಸಿದರು. ಕಟ್ಟಡ ನಕ್ಷೆ, ವಿನ್ಯಾಸ ಮಂಜೂರು ಮಾಡಿರುವುದರಲ್ಲಿ ಲೋಪವಾಗಿದೆ. ಜತೆಗೆ ನಿರ್ಮಾಣದ ಗುಣಮಟ್ಟ ಪರೀಕ್ಷೆ ನಡೆಸಿ ವರದಿ ಸಲ್ಲಿಸುವುದರಲ್ಲಿಯೂ ನಿರ್ಲಕ್ಷ್ಯವಹಿಸಿದ್ದಾರೆ ಎನ್ನಲಾಗಿದೆ.
‘ಪ್ರಾದೇಶಿಕ ಆಯುಕ್ತರು ನೀಡಿದ ವರದಿ ಆಧರಿಸಿ ಏಳು ಜನರನ್ನು ಅಮಾತನುಗೊಳಿಸಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು, ಇದರಲ್ಲಿ ಇನ್ನಷ್ಟು ತಪ್ಪಿತಸ್ಥರು ಇದ್ದರೆ ಅವರ ಹೆಸರನ್ನೂ ಪಟ್ಟಿಗೆ ಸೇರಿಸಲಾಗುವುದು. ತಪ್ಪಿತಸ್ಥರು ಯಾರೇ ಇರಲಿ ಅವರನ್ನು ರಕ್ಷಿಸುವುದಿಲ್ಲ’ ಎಂದರು.
‘ನಗರ ಪ್ರದೇಶಗಳಲ್ಲಿ ಇಂಥ ಪರಿಸ್ಥಿತಿ ಎದುರಿಸುತ್ತಿರುವ ಕಟ್ಟಡಗಳನ್ನು ಪಟ್ಟಿ ಮಾಡಿ ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಂದೊಮ್ಮೆ ಇಂಥ ಮತ್ತೊಂದು ದುರ್ಘಟನೆ ಸಂಭವಿಸಿದರೆ ಅದಕ್ಕೆ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ’ ಎಂದು ಖಾದರ್ ಎಚ್ಚರಿಕೆ ನೀಡಿದರು.
ಕಟ್ಟುನಿಟ್ಟಿನ ಕಾನೂನು: ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಮಾತನಾಡಿ, ‘ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಲಾಗುವುದು. ಚುನಾವಣೆ ನಂತರ ಅದರ ರೂಪುರೇಷೆ ಸಿದ್ಧಪಡಿಸಿ, ಮುಂದಿನ ಅಧಿವೇಶನದ ಹೊತ್ತಿಗೆ ಜಾರಿಗೆ ತರಲಾಗುವುದು’ ಎಂದರು.
ಮುಂದುವರಿದ ಕಾರ್ಯಾಚರಣೆ
ಕಟ್ಟಡದ ಅವಶೇಷಗಳ ತೆರವು ಕಾರ್ಯಾಚರಣೆ ಭರದಿಂದ ಸಾಗಿದ್ದು, ಶುಕ್ರವಾರ ಸಂಜೆಯವರೆಗೂ ಯಾವುದೇ ಮೃತದೇಹವಾಗಲೀ, ಬದುಕುಳಿದವರ ಸುಳಿವಾಗಲೀ ಪತ್ತೆಯಾಗಿಲ್ಲ. ಇನ್ನೂ ಐದು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ಇದ್ದು, ಅವರಿಗಾಗಿ ಹುಡುಕಾಟ ನಡೆದಿದೆ. ಕಾರ್ಯಾಚರಣೆ ಭಾನುವಾರವೂ ಮುಂದುವರಿಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.