ADVERTISEMENT

ಕಟ್ಟಡ ದುರಂತ: ₹5 ಲಕ್ಷ ಪರಿಹಾರಧನ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2019, 10:52 IST
Last Updated 30 ಮಾರ್ಚ್ 2019, 10:52 IST

ಧಾರವಾಡ: ‘ಕುಮಾರೇಶ್ವರ ನಗರದಲ್ಲಿ ಇತ್ತೀಚೆಗೆ ಸಂಭವಿಸಿದ ಕಟ್ಟಡ ಕುಸಿತ ಅವಘಡದಲ್ಲಿ ಮೃತಪಟ್ಟ ಕುಟುಂಬದವರಿಗೆ, ಮಹಾನಗರ ಪಾಲಿಯಿಂದ ತಲಾ ₹5 ಲಕ್ಷ ಹಾಗೂ ಗಾಯಾಳುಗಳಿಗೆ ₹1 ಲಕ್ಷ ನೀಡಬೇಕು’ ಎಂದು ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಆಗ್ರಹಿಸಿದರು.

‘ಪರಿಹಾರಧನ ನೀಡದಿದ್ದರೆ ರಾಜಕೀಯೇತರ ಸಂಘಟಗೆಗಳೊಂದಿಗೆ ಬೀದಿಗಿಳಿದು ಹೋರಾಟ ಮಾಡಲಾಗುವುದು’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪಾಲಿಕೆಯವರು ಸಾರ್ವಜನಿಕರಿಂದ ಕೇವಲ ತೆರಿಗೆ, ಶುಲ್ಕ ವಸೂಲಿಗೆ ಸೀಮಿತಗೊಳ್ಳದೆ, ಅವರ ಜೀವನಕ್ಕೆ ಸ್ಪಂದಿಸು ಕಾರ್ಯ ಮಾಡಬೇಕು. ಗಣಪತಿ ವಿರ್ಜಜನೆ ಸಂದರ್ಭದಲ್ಲಿ ಹಾಗೂ ಕಲಘಟಗಿಯಲ್ಲಿ ಸಿಡಿಲು ಬಡಿದು ಮೃತಪಟ್ಟ ವೇಳೆ ಪಾಲಿಕೆ ಪರಿಹಾರಧನವನ್ನು ನೀಡಿತ್ತು. ಅದೇ ಮಾದರಿಯಲ್ಲಿ ಕಟ್ಟಡ ದುರಂತದಲ್ಲಿ ಮೃತಪಟ್ಟವರಿಗೆ ಹಾಗೂ ಗಾಯಗೊಂಡವರಿಗೆ ಪರಿಹಾರಧನ ವಿತರಿಸಲು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಹೋರಾಟ ಅನಿವಾರ್ಯವಾಗಲಿದೆ’ ಎಂದರು.

ADVERTISEMENT

‘ಪಾಲಿಕೆಯವರ ಈ ದುರಂತದಿಂದ ಎಚ್ಚತ್ತು ಈಗ ಸರಿಯಾದ ನಿರ್ಮಾಣಗೊಂಡ ಸುಮಾರು 650 ವಾಣಿಜ್ಯ ಕಟ್ಟಡಗಳಿಗೆ ಸಿಸಿ ತೆಗೆದುಕೊಂಡರು ವಿನಾಕಾರಣ ನೋಟಿಸ್‌ ನೀಡುತ್ತಿದ್ದು, ಇದರಿಂದ ಆ ಕಟ್ಟಡದ ಮಾಲೀಕರು ಭಯ ಭೀತರಾಗಿದ್ದಾರೆ. ಪಾಲಿಕೆ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಇಂತಹ ಕ್ರಮಕ್ಕೆ ಮುಂದಾಗಿದೆ. ಇದನ್ನು ಯಾರು ಸಹಿಸುವುದಿಲ್ಲ’ ಎಂದು ಚಿಂಚೋರೆ ಹೇಳಿದರು.

‘ಕಟ್ಟಡ ದುರಂತಕ್ಕೆ ವಿನ್ಯಾಸಗಾರರೇ ಹೊಣೆಗಾರರಾಗಿದ್ದು, ಅವರ ವಿರುದ್ಧ ಕಠಣ ಕ್ರಮ ಕೈಗೊಳ್ಳಬೇಕು. ಇನ್ನಾದರೂ ಪಾಲಿಕೆ ವಾಣಿಜ್ಯ ಕಟ್ಟಡಗಳ ನಿರ್ಮಾಣದ ಕುರಿತಂತೆ ಎಚ್ಚೆತ್ತು ಸ್ಥಳ ಪರಿಶೀಲನೆ ಮಾಡಬೇಕು’ ಎಂದರು.

ಕಾಂಗ್ರೆಸ್‌ ಮುಖಂಡರಾದ ಯಾಸೀನ್‌ ಹಾವೇರಿಪೇಟ್, ಆನಂದ ಸಿಂಗನಾಥ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.