ಹುಬ್ಬಳ್ಳಿ: 'ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಸೋಲುವುದು ಖಚಿತವಾಗಿದ್ದರಿಂದ, ಕೋವಿಡ್ ಸಂದರ್ಭ ಬಿಜೆಪಿ ಹಗರಣದ ನಡೆಸಿದೆ ಎಂದು ಆರೋಪ ಮಾಡುತ್ತಿದೆ' ಎಂದು ಬಿಜೆಪಿ ಸಂದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಉಪ ಚುನಾವಣಾ ಫಲಿತಾಂಶ ಬಂದ ನಂತರ ಈ ಎಲ್ಲ ಆರೋಪಕ್ಕೆ ಉತ್ತರ ಸಿಗಲಿದೆ. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಹೇಳಿಕೆ ನೀಡುತ್ತಾರೆ ಎಂದು ನೋಡೋಣ' ಎಂದರು.
'ಶಿಗ್ಗಾವಿ, ಚನ್ನಪಟ್ಟಣ, ಸಂಡೂರಿನಲ್ಲಿ ಸಿಎಂ ಸಿದ್ದರಾಮಯ್ಯ ಪ್ರವಾಸ ಮಾಡಿದ್ದು, ಅವರಿಗೆ ಸೋಲಿನ ಭಯ ಉಂಟಾಗಿದೆ. ಸಂಡೂರಿನಲ್ಲಿ ನಾಲ್ಕು-ಐದು ದಿನ ಬೀಡು ಬಿಟ್ಟು ಪ್ರಚಾರ ಮಡೆಸಿದ್ದಾರೆ. ಎಷ್ಟೇ ಪ್ರಯತ್ನ ಮಾಡಿದ್ದರೂ ಕಾಂಗ್ರೆಸ್‌ಗೆ ಸೋಲು ಖಚಿತ. ಭ್ರಷ್ಟ ಸರ್ಕಾರದ ವಿರುದ್ಧ ಜನರು ಅಕ್ರೋಶಗೊಂಡಿದ್ದಾರೆ. ಚುನಾವಣಾ ಫಲಿತಾಂಶ ಬಂದ ನಂತರ ಸಿಎಂಗೆ ಅರ್ಥ ಆಗಲಿದೆ, ಈ ಭ್ರಷ್ಟಾಚಾರ ಹಗರಣದಲ್ಲಿ ಸಿಲುಕಿದ ಕಾರಣಕ್ಕೆ ಜನ ಹೇಗೆ ತಿರುಗಿ ಬಿದ್ದಿದ್ದಾರೆ ಎನ್ನುವುದು' ಎಂದರು.
'ಶಿಗ್ಗಾವಿಯಲ್ಲಿ ಸಿಎಂ ಮೂರು, ನಾಲ್ಕು ದಿನ ಇದ್ದು ಪ್ರಚಾರ ನಡೆಸಿದರೂ ನಿರೀಕ್ಷಿತ ಜನ ಬೆಂಬಲ ಸಿಕ್ಕಿಲ್ಲ. ಜನರಿಗೆ ಹಣ ಕೊಟ್ಟರೂ ಪ್ರಚಾರಕ್ಕೆ ಬರಲಿಲ್ಲ. ಇದರಿಂದ ಸಿಎಂ ಹತಾಶರಾಗಿ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಅಬಕಾರಿ ಇಲಾಖೆಯೊಂದರಲ್ಲಿಯೇ ಎಷ್ಟೊಂದು ಲೂಟಿ ಆಗಿದೆ ಎಂದು ಗುತ್ತುಗೆದಾರರೇ ಹೇಳುತ್ತಿದ್ದಾರೆ. ಇದೆಲ್ಲದರ ಪರಿಣಾಮ ಚುನಾವಣೆ ಫಲಿತಾಂಶದಲ್ಲಿ ಗೊತ್ತಾಗಲಿದೆ' ಎಂದು ಯಡಿಯೂರಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.