ಹುಬ್ಬಳ್ಳಿ: ‘ವಕ್ಫ್ ಆಸ್ತಿ ಹೆಸರಲ್ಲಿ ರೈತರಿಗೆ ಕೊಟ್ಟಿರುವ ನೋಟಿಸ್ ವಾಪಸ್ ಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಕಣ್ಣೊರೆಸುವ ತಂತ್ರವಷ್ಟೇ. ಉಪ ಚುನಾವಣೆ ಬಳಿಕ ರೈತರಿಗೆ ಮತ್ತೆ ನೋಟಿಸ್ ಕೊಡುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರಿಗೆ ರೈತರ ಮೇಲೆ ನಿಜಕ್ಕೂ ಕಾಳಜಿ ಇದ್ದರೆ, ರೈತರ ಆಸ್ತಿ ಉಳಿಸಬೇಕೆಂದಿದ್ದರೆ ಕೂಡಲೇ ವಕ್ಫ್ ಗೆಜೆಟ್ ನೋಟಿಫಿಕೇಷನ್ ರದ್ದು ಮಾಡಬೇಕು. ಯಾವುದೇ ಕಾರಣಕ್ಕೂ ರೈತರಿಗೆ ನೋಟಿಸ್ ನೀಡಬಾರದು’ ಎಂದು ಆಗ್ರಹಿಸಿದರು.
‘ನಾನು ವಕ್ಪ್ ಬೋರ್ಡ್‌ನ ಯಾವುದೇ ಸಭೆ ಮಾಡಿಲ್ಲ. ಈ ಹಿಂದೆ ವಕ್ಫ್ ಸಮಾರಂಭದಲ್ಲಿ ಮಾತನಾಡಿದ ವಿಡಿಯೊವನ್ನು ಸಚಿವ ಜಮೀರ್ ಅಹ್ಮದ್ ಖಾನ್ ಈಗ ಬಿಡುಗಡೆ ಮಾಡಿ, ರೈತರ ಜಮೀನು ವಶಪಡಿಸಿಕೊಳ್ಳಲು ವಕ್ಫ್‌ಗೆ ಹೇಳಿದ್ದೆ ಎಂದು ಸುಳ್ಳು ಸುದ್ದಿ ಪ್ರಚಾರ ಮಾಡಿ ಜನರ ದಾರಿತಪ್ಪಿಸುತ್ತಿದ್ದಾರೆ’ ಎಂದು ದೂರಿದರು.
‘ವಕ್ಫ್ ಸಮಾರಂಭವೊಂದರಲ್ಲಿ ಅನ್ವರ್ ಮಾನಪ್ಪಾಡಿ ವರದಿ ಬಗ್ಗೆ ಮಾತನಾಡಿದ್ದೆ. ವರದಿಯಲ್ಲಿ ಇರುವಂತೆ ವಕ್ಪ್ ಆಸ್ತಿ ಕಬಳಿಸಿರುವ ಕಾಂಗ್ರೆಸ್ ನಾಯಕರಿಂದ ಅದನ್ನು ವಶಪಡಿಸಿಕೊಳ್ಳುವಂತೆ ಹೇಳಿದ್ದೇನೆಯೇ ಹೊರತು ರೈತರ ಆಸ್ತಿಯನ್ನಲ್ಲ. ರೈತರ ವಿಚಾರದಲ್ಲಿ ಬಿಜೆಪಿ ಸರ್ಕಾರ ನೋಟಿಸ್ ಕೊಟ್ಟಿಲ್ಲ’ ಎಂದು ಸ್ಪಷ್ಟಪಡಿಸಿದರು.
ಶೋಭೆ ತರುವಂಥದ್ದಲ್ಲ:
ಪ್ರಧಾನಿ ಮೋದಿ ಟ್ವೀಟ್ ವಿಚಾರಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ಕುರಿತು ಮಾತನಾಡಿದ ಬೊಮ್ಮಾಯಿ, ‘ಅಭಿಪ್ರಾಯದಲ್ಲಿ ಭಿನ್ನಾಭಿಪ್ರಾಯ ಇರಬಹುದು. ಆದರೆ ನಾವು ಮುಖ್ಯಮಂತ್ರಿಗಳನ್ನು ಹೇಗೆ ಗೌರವಿಸುತ್ತೇವೆಯೋ, ಅವರು ಕೂಡ ಪ್ರಧಾನಿ ಅವರನ್ನು ಗೌರವಿಸಬೇಕು. ಪ್ರಧಾನಮಂತ್ರಿ ಅವರನ್ನು ಯಾವ ರೀತಿ ಸಂಬೋಧಿಸಬೇಕು ಎಂದು ಗೊತ್ತಿಲ್ಲದಿರುವುದು ದುರ್ದೈವದ ಸಂಗತಿ. ಸಿದ್ದರಾಮಯ್ಯ ಅವರಿಗೆ ಇಷ್ಟು ಕೂಡ ಸೌಜನ್ಯ ಇಲ್ಲದಿದ್ದರೆ ಹೇಗೆ? ಪ್ರಜಾಪ್ರಭುತ್ವಕ್ಕೆ ಹಾಗೂ ಒಕ್ಕೂಟ ವ್ಯವಸ್ಥೆಗೆ ಇದು ಶೋಭೆ ತರುವಂಥದ್ದಲ್ಲ’ ಎಂದರು.
ಬಿಜೆಪಿಯಿಂದ ಗೊಂದಲ ಸೃಷ್ಟಿ: ಸವದಿ
‘ಬಿಜೆಪಿಯವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಉಪಚುನಾವಣೆ ಇರುವ ಕಾರಣಕ್ಕೆ ವಕ್ಫ್ ವಿಚಾರ ಮುಂದಿಟ್ಟುಕೊಂಡು ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಪ್ರತಿಭಟನೆಗೆ ಮುಂದಾಗಿದ್ದಾರೆ. ಚುನಾವಣೆ ಇಲ್ಲದಿದ್ದರೆ ಈ ಬಗ್ಗೆ ಮಾತನಾಡುತ್ತಿರಲಿಲ್ಲ’ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಶಿಗ್ಗಾವಿ ಕ್ಷೇತ್ರದಲ್ಲಿ ಬೊಮ್ಮಾಯಿ ವಿರೋಧಿ ಅಲೆ ಇದೆ. ಹೀಗಾಗಿ ಇಲ್ಲಿ ನಾವೇ ಗೆಲ್ಲುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.