ADVERTISEMENT

ವಿದೇಶದಲ್ಲಿ ಪಿಎಚ್.ಡಿ ಸಹಾಯಧನ ರದ್ದು: SC, ST ವಿದ್ಯಾರ್ಥಿಗಳಿಗೆ ತಪ್ಪಿದ ಅವಕಾಶ

‘ಪ್ರಬುದ್ಧ’ ಯೋಜನೆಗೂ ಕತ್ತರಿ: ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ತಪ್ಪಿದ ಅವಕಾಶ

ಮಹಮ್ಮದ್ ಶರೀಫ್
Published 20 ಜುಲೈ 2024, 5:19 IST
Last Updated 20 ಜುಲೈ 2024, 5:19 IST
ವಿದೇಶಿ ವಿ.ವಿಗಳಲ್ಲಿ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಪಿಎಚ್‌.ಡಿ ಅಧ್ಯಯನ ನಡೆಸಲು ನೀಡಲಾಗುವ ಸಹಾಯಧನ ಕೈಬಿಡುವ ಕುರಿತು ಸಮಾಜ ಕಲ್ಯಾಣ ಇಲಾಖೆಯ ಆದೇಶ ಪತ್ರ
ವಿದೇಶಿ ವಿ.ವಿಗಳಲ್ಲಿ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಪಿಎಚ್‌.ಡಿ ಅಧ್ಯಯನ ನಡೆಸಲು ನೀಡಲಾಗುವ ಸಹಾಯಧನ ಕೈಬಿಡುವ ಕುರಿತು ಸಮಾಜ ಕಲ್ಯಾಣ ಇಲಾಖೆಯ ಆದೇಶ ಪತ್ರ   

ಹುಬ್ಬಳ್ಳಿ: ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪಿಎಚ್.ಡಿ ಅಧ್ಯಯನಕ್ಕೆ ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಶೋಧನಾರ್ಥಿಗಳಿಗೆ ‘ಪ್ರಬುದ್ಧ’ ಯೋಜನೆಯಡಿ ನೀಡುತ್ತಿದ್ದ ಸಹಾಯಧನವನ್ನು ರದ್ದುಪಡಿಸಿದೆ.

ತಳ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಅಧ್ಯಯನದ ಆರ್ಥಿಕ ಸ್ಥಿತಿಗತಿಯ ಲೆಕ್ಕಾಚಾರ ಹಾಕಿ ಆದೇಶ‍ ಪತ್ರ ಹೊರಡಿಸಿರುವ ಇಲಾಖೆ, ‘ಪಿಎಚ್.ಡಿಯ ಒಬ್ಬ ಅಭ್ಯರ್ಥಿಗೆ ನೀಡುವ ಸಹಾಯಧನದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುವ ಕನಿಷ್ಠ ಇಬ್ಬರು ಅಥವಾ ಮೂವರು ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಬಹುದು’ ಎಂದು ಉಲ್ಲೇಖಿಸಿದೆ.

ಕಳೆದ ಮೂರು ವರ್ಷದಲ್ಲಿ ಪಿಎಚ್.ಡಿ ಅಧ್ಯಯನಕ್ಕೆ ಆಯ್ಕೆಯಾದವರ ಮಾಹಿತಿಯನ್ನು ದಾಖಲಿಸಿರುವ ಇಲಾಖೆ, ‘9 ಅಭ್ಯರ್ಥಿಗಳ ತಲಾವಾರು ವೆಚ್ಚ ₹95,66,731 ಆಗಿದ್ದು, ಒಂದು ವರ್ಷದ ಸ್ನಾತಕೋತ್ತರ ಕೋರ್ಸ್‌ಗೆ ಸರಾಸರಿ ₹35 ಲಕ್ಷದಿಂದ ₹40 ಲಕ್ಷ ವೆಚ್ಚವಾಗುತ್ತದೆ. ಎರಡು ವರ್ಷಕ್ಕೆ ₹50 ಲಕ್ಷದಿಂದ ₹60 ಲಕ್ಷವಾಗುತ್ತದೆ’ ಎಂದಿದೆ.

ADVERTISEMENT

‘ಪ್ರಬುದ್ಧ ಯೋಜನೆಯಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಧನಸಹಾಯ ಮಂಜೂರು ಮಾಡುವುದು ಮತ್ತು 2023-24ನೇ ಸಾಲಿನಲ್ಲಿ ಪಿಎಚ್.ಡಿ ಅಧ್ಯಯನಕ್ಕೆ ಅರ್ಜಿ ಸಲ್ಲಿಸಿ ಆಯ್ಕೆಗೆ ಬಾಕಿ ಇರುವ ಪ್ರಕರಣಗಳು ಸರ್ಕಾರದ ಅಂತಿಮ ನಿರ್ಣಯಕ್ಕೆ ಒಳಪಟ್ಟಿರುತ್ತದೆ’ ಎಂದು ಇಲಾಖೆ ತಿಳಿಸಿದೆ.

‘ಇಲ್ಲಿ ಸಂಶೋಧನೆಗೆ ಉತ್ತಮ ವ್ಯವಸ್ಥೆ ಇಲ್ಲ‌. ಸೂಕ್ತ ಮಾರ್ಗದರ್ಶಕರ ಕೊರತೆ ಇದೆ. ದಲಿತ ವಿದ್ಯಾರ್ಥಿಗಳನ್ನು ಸಂಶೋಧಕರನ್ನಾಗಿ ತೆಗೆದುಕೊಳ್ಳುತ್ತಿಲ್ಲ. ಸಂದರ್ಶನದಲ್ಲಿ ಆಯ್ಕೆ ಮಾಡದೆ, ಥೀಸಿಸ್ ಬರೆಯಲು ಕೊಡದೆ ತಾರತಮ್ಯ ಮಾಡಲಾಗುತ್ತದೆ. ಹೀಗಿರುವಾಗ ವಿದೇಶದಲ್ಲಿ ಪಿಎಚ್.ಡಿ ಮಾಡುವ ಅವಕಾಶ ಕಸಿದುಕೊಂಡರೆ ಹೇಗೆ?’ ಎಂದು ಶಿಕ್ಷಣ ತಜ್ಞ ಬಿ.ಶ್ರೀಪಾದ ಭಟ್ ‘ಪ್ರಜಾವಾಣಿ’ಗೆ  ಹೇಳಿದರು.

‘ಸ್ನಾತಕೋತ್ತರ ಪದವಿಯನ್ನು ಇಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಮಾಡಬಹುದು. ಪಿಎಚ್.ಡಿ ಮತ್ತು ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ವ್ಯತ್ಯಾಸ ಇದೆ. ಪಿಎಚ್.ಡಿ ಕಲಿಕೆಯಿಂದ ವಿದ್ಯಾರ್ಥಿಗಳ ಉದ್ಯೋಗ ಬದುಕಿಗೆ ಅನುಕೂಲವಾಗುತ್ತದೆ’ ಎಂದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಕರೆ ಮಾಡಿದಾಗ, ಅಧಿಕಾರಿಗಳು ಸಂಪರ್ಕಕ್ಕೆ ಸಿಗಲಿಲ್ಲ.

ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಪಿಎಚ್.ಡಿ ಮಾಡಲು ಅವಕಾಶ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ‌. ಅದರ ಹಣ ಉಳಿಸಿ ‘ಗ್ಯಾರಂಟಿ’ ಯೋಜನೆಗೆ ಬಳಸುತ್ತಿರುವ ಬಗ್ಗೆ ಅನುಮಾನವಿದೆ
– ಬಿ.ಶ್ರೀಪಾದ ಭಟ್ ಶಿಕ್ಷಣ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.