ಎಲ್.ಮಂಜುನಾಥ
ಹುಬ್ಬಳ್ಳಿ: ಬದಲಾದ ಹವಾಮಾನದಿಂದ ವೈರಾಣು ಜ್ವರದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ತುಂತುರು ಮಳೆ, ಬೀಸುವ ತಂಗಾಳಿ, ಚಳಿ ವಾತಾವರಣವು ಮಕ್ಕಳು ಸೇರಿದಂತೆ ಹಿರಿಯರ ಮೇಲೆ ಪ್ರಭಾವ ಬೀರುತ್ತಿದೆ. ಅಸ್ವಸ್ಥರ ಸಂಖ್ಯೆ ಹೆಚ್ಚುತ್ತಿದ್ದು, ಚಿಕಿತ್ಸೆಗಾಗಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಮೊರೆ ಹೋಗುತ್ತಿದ್ದಾರೆ.
ಕೆಲವರಲ್ಲಿ ಶೀತ, ಇನ್ನೂ ಕೆಲವರಲ್ಲಿ ಜ್ವರ ಕಾಣಿಸಿಕೊಂಡಿದೆ. ಜೊತೆಗೆ ಬಹುತೇಕ ಮಂದಿಗೆ ಮೈಕೈ ನೋವು ಇದೆ. ಆರೋಗ್ಯದಿಂದ ಓಡಾಡಲು ಆಗುತ್ತಿಲ್ಲ. ಸ್ನೇಹಿತರು ಮತ್ತು ಸಂಬಂಧಿಕರ ನೆರವಿನೊಂದಿಗೆ ಕೆಲವರು ವೈದ್ಯರ ಬಳಿ ತೆರಳಿದರೆ, ಇನ್ನೂ ಕೆಲವರು ನೇರವಾಗಿ ಔಷಧಿ ಅಂಗಡಿಗಳಿಂದ ಔಷಧಿ ಪಡೆಯುತ್ತಿದ್ದಾರೆ.
ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಕಿಮ್ಸ್) ಹೊರರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಆಸ್ಪತ್ರೆಯ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ‘ಆತಂಕಗೊಳ್ಳಬೇಡಿ. ಬೇಗ ಗುಣಮುಖ ಆಗುವಿರಿ’ ಎಂದು ಧೈರ್ಯ ಹೇಳಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಜ್ವರ, ಕೆಮ್ಮು, ಶೀತ ಸೇರಿದಂತೆ ಇತರ ಕಾಯಿಲೆ ಚಿಕಿತ್ಸೆಗಾಗಿ ಮಕ್ಕಳು ಸೇರಿ ಎಲ್ಲಾ ವಯೋಮಾನದವರು ಕಿಮ್ಸ್‌ನಲ್ಲಿ ಮೇ ತಿಂಗಳಲ್ಲಿ 10,472 ಜನರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದರೆ, 1,817 ಮಂದಿ ದಾಖಲಾಗಿದ್ದಾರೆ. ಜೂನ್ ತಿಂಗಳಲ್ಲಿ 10,880 ಜನರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದರೆ, 1,772 ಜನರು ದಾಖಲಾಗಿದ್ದಾರೆ.
ಕೆಲ ದಿನಗಳಿಂದ ಹೊರರೋಗಿಗಳ ದಾಖಲಾತಿಯಲ್ಲಿ ಹೆಚ್ಚಳವಾಗಿದೆ. ಇವರಲ್ಲಿ ಬಹುತೇಕರು ಜ್ವರ ಕೆಮ್ಮು ನೆಗಡಿಯಂತಹ ಸಾಮಾನ್ಯ ಕಾಯಿಲೆಗಳ ಚಿಕಿತ್ಸೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ.ಕಿಮ್ಸ್ ಸಿಬ್ಬಂದಿ
ಶೇ 3ರಷ್ಟು ಹೆಚ್ಚಳ
ಮೇ ತಿಂಗಳಿಗೆ ಹೊಲಿಕೆ ಮಾಡಿದರೆ ಜೂನ್ ತಿಂಗಳಲ್ಲಿ ಹೊರರೋಗಿಗಳ ಸಂಖ್ಯೆಯಲ್ಲಿ ಶೇ 3ರಷ್ಟು ಹೆಚ್ಚಳವಾಗಿದೆ. ಹೆಚ್ಚು ಮಳೆ ಸುರಿದರಂತೂ ಅಲ್ಲಲ್ಲಿ ನೀರು ನಿಲ್ಲುತ್ತದೆ. ವಾತಾವರಣದಲ್ಲಿ ಸ್ವಚ್ಛತೆ ಇರುವುದಿಲ್ಲ. ಕುಡಿಯುವ ನೀರು ಸಹ ಕಲುಷಿತಗೊಳ್ಳುವ ಸಾಧ್ಯತೆ ಇರುತ್ತದೆ. ಅದೇ ನೀರು ಕುಡಿಯುವ ಸಾಧ್ಯತೆ ಇರುತ್ತದೆ.
’ಕಿಮ್ಸ್‌ನ 9 ಹೊರರೋಗಿಗಳ ನೋಂದಣಿ ಕೇಂದ್ರಗಳಲ್ಲಿ ನಿತ್ಯ ಕನಿಷ್ಠ 800ಕ್ಕೂ ಅಧಿಕ ಜನರು ವಿವಿಧ ಕಾಯಿಲೆಗಳ ಚಿಕಿತ್ಸೆಗೆ ನೋಂದಣಿ ಮಾಡಿಸಿಕೊಳ್ಳುತ್ತಾರೆ. ಅವರಲ್ಲಿ 400ಕ್ಕೂ ಹೆಚ್ಚು ಜನ ಜ್ವರ, ಕೆಮ್ಮು, ಶೀತದಂತಹ ಕಾಯಿಲೆಗೆ ತುತ್ತಾಗಿರುವವರೆ ಹೆಚ್ಚು’ ಎಂದು ಕಿಮ್ಸ್ ಒಪಿಡಿ ನೋಂದಣಿ ಕೇಂದ್ರದ ಸಿಬ್ಬಂದಿ ತಿಳಿಸಿದರು.
ಮನೆಯಲ್ಲಿ ಯಾರಿಗಾದರೂ ಜ್ವರ ಕೆಮ್ಮು ಕಾಣಿಸಿಕೊಂಡರೆ ಅವರಿಂದ ಅಂತರವನ್ನು ಕಾಯ್ದುಕೊಳ್ಳಬೇಕು. ಜೊತೆಗೆ ಹೊರಗೆ ಬಂದಾಗ ಮಾಸ್ಕ್ ಧರಿಸಬೇಕು ಎಂದು ಸಲಹೆ ನೀಡುತ್ತಾರೆ.ಡಾ.ಸಿದ್ದೇಶ್ವರ ಬಿ.ಕಟಕೋಳ, ಸ್ಥಳೀಯ ವೈದ್ಯಾಧಿಕಾರಿ, ಕಿಮ್ಸ್ ಆಸ್ಪತ್ರೆ.
‘ಮಳೆಗಾಲದ ವೇಳೆ ಬಹುತೇಕರಲ್ಲಿ ಅದರಲ್ಲೂ ಅದರಲ್ಲೂ ಮಕ್ಕಳಲ್ಲಿ ಹಾಗೂ ವಯಸ್ಸಾದವರಲ್ಲಿ ರೋಗನಿರೋಧಕ ಶಕ್ತಿ ಕುಗ್ಗುತ್ತದೆ. ಅವರು ಬೇಗನೇ ಜ್ವರದಂತಹ ಸಾಮಾನ್ಯ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಮೊದಲು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಜ್ವರವು ಬಳಿಕ ಮನೆಮಂದಿಗೆಲ್ಲಾ ಹರಡುತ್ತದೆ. ಅದಕ್ಕೆ ಬೇಗನೇ ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೆಯದು’ ಎಂದು ಸ್ಥಳೀಯ ವೈದ್ಯಾಧಿಕಾರಿ ಡಾ.ಸಿದ್ದೇಶ್ವರ ಬಿ.ಕಟಕೋಳ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮೇ ತಿಂಗಳಿಗೆ ಹೋಲಿಸಿದರೆ, ಜೂನ್ ತಿಂಗಳಲ್ಲಿ ಹೊರರೋಗಿಗಳ ಸಂಖ್ಯೆಯಲ್ಲಿ ಸ್ವಲ್ಪಮಟ್ಟಿಗೆ ಹೆಚ್ಚಳವಾಗಿದೆ. ಆದರೆ, ಆತಂಕಪಡಬೇಕಿಲ್ಲ. ಆದಷ್ಟು ಸ್ವಚ್ಛತೆ ಕಾಪಾಡಿಕೊಂಡು ಬಿಸಿಯಾದ ಗುಣಮಟ್ಟದ ಆಹಾರ ಸೇವಿಸಬೇಕು. ಸ್ವಚ್ಛತೆ ಕಾಯ್ದುಕೊಳ್ಳಬೇಕು. ಇದರಿಂದ ಬಹುತೇಕ ಕಾಯಿಲೆಗಳನ್ನು ದೂರವಿಡಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.