ಹುಬ್ಬಳ್ಳಿ: ನಗರದ ಅಮರಗೋಳದ ಎಪಿಎಂಸಿ ದಾಸ್ತಾನು ಮಳಿಗೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಐವರನ್ನು ಬಂಧಿಸಿ 450 ಚೀಲ ಅಕ್ಕಿ, ₹5 ಲಕ್ಷ ನಗದು ಹಾಗೂ 4 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ, ಎಸಿಪಿ ನಾರಾಯಣ ಬರಮನಿ ನೇತೃತ್ವದ ತಂಡ ದಾಳಿ ನಡೆಸಿದೆ.
ಸರ್ಕಾರದಿಂದ ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ಪೂರೈಸುವ ಪಡಿತರ ಅಕ್ಕಿಯನ್ನು ಆರೋಪಿ ಷಣ್ಮುಖಪ್ಪ ಬೆಟಗೇರಿ ಎಂಬಾತ ₹10ರಿಂದ ₹15 ಕೊಟ್ಟು ಖರೀದಿಸುತ್ತಿದ್ದ. ಬಳಿಕ, ಮಂಜುನಾಥ ಹರ್ಲಾಪುರ ಎಂಬುವವರಿಗೆ ಮಾರಾಟ ಮಾಡುತ್ತಿದ್ದ. ಈತ ₹35ರಿಂದ ₹40 ಬೆಲೆಗೆ ಮಾಹಾರಾಷ್ಟ್ರದಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯ ತಂಡದಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್ ರಮೇಶ ಕಾಂಬಳೆ, ಗೋಪಾಲ ರಾಠೋಡ, ಎಸ್.ಎಚ್. ಸಾಳುಂಕೆ, ಬಿ.ಎನ್. ಲಂಗೋಟಿ, ಎನ್.ಓ. ಜಾಧವ, ಎಸ್.ಸಿ. ಜಾಲವಾಡಗಿ, ಉಮೇಶ ದೊಡ್ಡಮನಿ, ಬಿ.ಎಫ್. ಬೆಳಗಾವಿ, ಮಾರುತಿ ಭಜಂತ್ರಿ, ರಾಜೀವ ಬಿಷ್ಟಂಡೇರ, ಎಫ್.ಬಿ. ಕುರಿ, ಅನೀಲ ಹುಗ್ಗಿ, ಡಿ.ಎನ್.ಗುಂಡಗೈ, ಎಸ್.ಎಚ್. ಕೆಂಪಡಿ ಹಾಗೂ ಆರ್.ಎಸ್. ಗುಂಜಳ ಇದ್ದರು.
ನವನಗರ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.