ಹುಬ್ಬಳ್ಳಿ: ಕೆವೈಸಿ ಅಪ್‌ಡೇಟ್ ಮಾಡುವ ನೆಪದಲ್ಲಿ ಕೆನರಾ ಬ್ಯಾಂಕ್‌ನ ಮಹಿಳಾ ಗ್ರಾಹಕಿಯೊಬ್ಬರಿಗೆ ಕರೆ ಮಾಡಿದ ವಂಚಕ, ಮಹಿಳೆಯ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ ₹2.30 ಲಕ್ಷವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾನೆ. ಗ್ರಾಹಕಿ ಬಳಸುತ್ತಿದ್ದ ಗೂಗಲ್ ಪೇ ಆನ್‌ಲೈನ್ ಮನಿ ಆ್ಯಪ್ ಸ್ಥಗಿತಗೊಂಡಿತ್ತು. ಇದೇ ಸಂದರ್ಭದಲ್ಲಿ ವಂಚಕ, ಅವರ ಮೊಬೈಲ್ ಸಂಖ್ಯೆಗೆ 24 ತಾಸಿನೊಳಗೆ ನಿಮ್ಮ ಬ್ಯಾಂಕಿನ ಕೆವೈಸಿ ಅಪ್‌ಡೇಟ್ ಮಾಡುವಂತೆ ಲಿಂಕ್ ಶೇರ್ ಮಾಡಿದ್ದಾನೆ.
ಮಾರನೆಯ ದಿನ ಕರೆ ಮಾಡಿ ಕೆವೈಸಿ ಅಪ್‌ಡೇಟ್ ಮಾಡುವುದಾಗಿ ಹೇಳಿ, ಗ್ರಾಹಕಿಯ ಬ್ಯಾಂಕ್ ಖಾತೆಯ ವಿವರ ಹಾಗೂ ಒಟಿಪಿ ಮಾಹಿತಿ ಪಡೆದಿದ್ದಾನೆ. ನಂತರ ಹಂತ ಹಂತವಾಗಿ ಅವರ ಖಾತೆಯಿಂದ ತನ್ನ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾನೆ. ಈ ಕುರಿತು ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಗಳ್ಳತನ:ತಾಲ್ಲೂಕಿನ ಬ್ಯಾಹಟ್ಟಿಯಲ್ಲಿ ಬೈಕ್‌ನಲ್ಲಿ ಬಂದ ಅಪರಿಚಿತರಿಬ್ಬರು, ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸುಜಾತ ಎಂಬುವರ ಕೊರಳಿನಲ್ಲಿದ್ದ 35 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಗ್ರಾಮದ ಶೀಲವಂತದೇವರ ಬಾವಿ ಬಳಿಸುಜಾತ ಅವರು ನಡೆದುಕೊಂಡು ಹೋಗುತ್ತಿದ್ದಾಗ, ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದಿರುವ ಇಬ್ಬರು ಕೃತ್ಯ ಎಸಗಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ ಸಲ್ಲಿಕೆ:ನಗರದ ವಿಮಾನ ನಿಲ್ದಾಣದಲ್ಲಿ ಇಂಡಿಯೊ ವಿಮಾನದ ಟೈರ್ ಸ್ಫೋಟಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ತಂತ್ರಜ್ಞರ ತಂಡ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯಕ್ಕೆ (ಡಿಜಿಸಿಎ) ವರದಿ ಸಲ್ಲಿಸಿದೆ.
ಕಳೆದ ಜೂನ್‌ನಲ್ಲಿ ಕೇರಳದ ಕಣ್ಣೂರಿನಿಂದ ಹುಬ್ಬಳ್ಳಿಗೆ ರಾತ್ರಿ ಬಂದಿದ್ದ ವಿಮಾನವು ರನ್‌ವೇನಲ್ಲಿ ಇಳಿಯುವಾಗ ಟೈರ್ ಸ್ಫೋಟಗೊಂಡಿತ್ತು.ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಡಿಜಿಸಿಎ, ಘಟನೆಯ ಸಮಗ್ರ ತನಿಖೆ ನಡೆಸಿ ವರದಿ ನೀಡಲು ತಂತ್ರಜ್ಞರ ತಂಡವನ್ನು ನೇಮಿಸಿತ್ತು. ಮೂರು ತಿಂಗಳು ತನಿಖೆ ನಡೆಸಿದ್ದ ತಂಡ ಇದೀಗ ವರದಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.
ಸುಳ್ಳು ಪೋಸ್ಟ್:ಲವ್ ಜಿಹಾದ್ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪೋಸ್ಟ್ ಹಾಕಿದ್ದ ಪವನ ಎಂಬ ಯುವಕನ ವಿರುದ್ಧ ನಗರದ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಮದುವೆಯಾಗಿದ್ದ ನವ ಜೋಡಿಯೊಂದರ ಫೋಟೊದೊಂದಿಗೆ ‘ಅನದರ್ ಲವ್ ಜಿಹಾದ್ ಕಮಿಂಗ್ ಸೂನ್, ಫಾರ್ವರ್ಡ್ ಟು ಆಲ್’ ಎಂದು ಬರೆದಿದ್ದ ಆರೋಪಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧನ:ನಗರದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ, ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಆನಂದನಗರದಗೌಸ್ ಸೌದಾಗರ ಬಂಧಿತನಾಗಿದ್ದು, ಒಟ್ಟು ಬಂಧಿತರ ಸಂಖ್ಯೆ 155ಕ್ಕೆ ಏರಿಕೆಯಾಗಿದೆ.
ಘಟನೆ ನಡೆದ ದಿನ ಆರೋಪಿ ಜನರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿದ್ದ. ಈ ಕುರಿತು ಸಿಕ್ಕ ಮಾಹಿತಿ ಆಧಾರದ ಮೇಲೆ ಗೌಸ್‌ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.