ಹುಬ್ಬಳ್ಳಿ: ಕೋಳಿ ಮಾಂಸದ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು, ಮಾಂಸ ಪ್ರಿಯರಿಗೆ ಹೊರೆಯಾಗಿ ಪರಿಣಮಿಸಿದೆ. ಹುಬ್ಬಳ್ಳಿ ನಗರದಲ್ಲಿ ಕೋಳಿ ಮಾಂಸದ (ರೆಡಿ ಚಿಕನ್) ಬೆಲೆ ಕೆ.ಜಿಗೆ ₹260ಕ್ಕೆ ತಲುಪಿದೆ. ಕೆ.ಜಿಗೆ ₹180ರ ಆಸುಪಾಸಿನಲ್ಲಿರುತ್ತಿದ್ದ ಬೆಲೆ ಕೆಲ ದಿನಗಳಿಂದ ಏರುಗತಿಯಲ್ಲೇ ಸಾಗಿದೆ.
ಬೆಲೆ ಏರಿಕೆ ವ್ಯಾಪಾರಕ್ಕೆ ಹೊಡೆತ ನೀಡಿದ್ದು, ವಹಿವಾಟಿನಲ್ಲಿ ಇಳಿಕೆಯಾಗುತ್ತಿದೆ. ಕೋಳಿ ಫಾರಂ ಮಾಲೀಕರು, ಕೋಳಿ ಆಹಾರ ತಯಾರಕರು, ಸಗಟು– ಚಿಲ್ಲರೆ ವ್ಯಾಪಾರಿಗಳ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರಿದೆ.
ಕೋಳಿ ಆಹಾರದ ದರದಲ್ಲಿ ದಿಢೀರ್ ಏರಿಕೆಯಾಗಿರುವುದೇ ಕೋಳಿ ಮಾಂಸದ ಬೆಲೆ ಏರಿಕೆಯಾಗಲು ಕಾರಣ. ಆಹಾರ ತಯಾರಿಕೆಗೆ ಬಳಸುವ ಸೋಯಾ ಹಿಂಡಿ, ಮೆಕ್ಕೆಜೋಳ ಹಾಗೂ ಖಾದ್ಯ ತೈಲದ ಬೆಲೆ ಹೆಚ್ಚಳ ಕೋಳಿ ಆಹಾರದ ದರ ಏರಿಕೆಯಾಗಲು ಕಾರಣ ಎನ್ನುತ್ತಾರೆ ಫೀಡ್ಸ್ ತಯಾರಿಕಾ ಕಂಪನಿಗಳ ಮಾಲೀಕರು.
‘ಕೆ.ಜಿಗೆ ₹32 ಇದ್ದ ಸೋಯಾ ಹಿಂಡಿಯ ಬೆಲೆ ₹96, ಕೆ.ಜಿಗೆ ₹14 ಇದ್ದ ಮೆಕ್ಕೆಜೋಳದ ಬೆಲೆ ₹22 ಹಾಗೂ ಲೀಟರ್‌ಗೆ ₹65 ಇದ್ದ ಖಾದ್ಯ ತೈಲದ ಬೆಲೆ ₹110 ಆಗಿದೆ. ಆದ್ದರಿಂದ ಅನಿವಾರ್ಯವಾಗಿ ಫೀಡ್ಸ್ ಬೆಲೆ ಹೆಚ್ಚಳವಾಗಿದೆ. ಈ ಹಿಂದೆ ₹1,400 ಇದ್ದ 50 ಕೆಜಿ ಚೀಲದ ಫೀಡ್ಸ್ ಬೆಲೆ ₹2,400 ಆಗಿದೆ’ ಎನ್ನುತ್ತಾರೆ ಹುಬ್ಬಳ್ಳಿಯ ರೇಣುಕಾ ಫೀಡ್ಸ್ ಮಾಲೀಕ ರವೀಂದ್ರ ತುಕಾರಾಂ ಪಟ್ಟಣ್.
ಕೋಳಿ ಬೆಲೆ ಏರಿಕೆಯ ಬಿಸಿ ಮಾಂಸಾಹಾರ ಹೋಟೆಲ್‌ಗಳಿಗೂ ತಟ್ಟಿದೆ. ಬಿರಿಯಾನಿ ಹಾಗೂ ಕೋಳಿ ಮಾಂಸದ ವಿವಿಧ ಖಾದ್ಯ ತಯಾರಿಸುವ ಹೋಟೆಲ್‌ಗಳ ಮಾಲೀಕರು ನಷ್ಟ ಅನುಭವಿಸುವಂತಾಗಿದೆ. ‘ಮಾಂಸದ ಬೆಲೆಯಲ್ಲಿ ಏರಿಕೆಯಾದೊಡನೆ ಖಾದ್ಯದ ಬೆಲೆ ಏರಿಕೆ ಮಾಡಲು ಸಾಧ್ಯವಾಗದು. ಇದರಿಂದಾಗಿ ನಷ್ಟ ಅನುಭವಿಸಬೇಕಾಗಿದೆ’ ಎನ್ನುತ್ತಾರೆ ಹೋಟೆಲ್ ಮಾಲೀಕರು.
ಫೀಡ್ಸ್ ಬೆಲೆ, ಸಾಗಣೆ ವೆಚ್ಚ, ವಿದ್ಯುತ್ ಶುಲ್ಕ ಹೀಗೆ ಎಲ್ಲವೂ ಏರಿಕೆಯಾಗಿರುವುದರಿಂದ ಕೋಳಿ ಸಾಕಣೆ ಉದ್ಯಮ ಸಮಸ್ಯೆ ಎದುರಿಸುವಂತಾಗಿದೆ. ಮರಿ ಬೆಳೆದು ಒಂದು ಕೆಜಿ ತೂಕದ ಕೋಳಿ ಆಗುವವರೆಗೆ ಫಾರಂ ಮಾಲೀಕರಿಗೆ ₹110 ಖರ್ಚು ಬರುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಜೀವದ ಕೋಳಿ ಕೆ.ಜಿಗೆ ₹122ರ ವರೆಗೆ ಮಾರಾಟವಾಗುತ್ತಿದೆ. ಕೆಲ ತಿಂಗಳ ಹಿಂದೆ ಇದರ ಬೆಲೆ ₹90ರ ವರೆಗೆ ಇತ್ತು ಎನ್ನುತ್ತಾರೆ ಸೋಹೆಲ್ ಪೌಲ್ಟ್ರಿ ಮಾಲೀಕ ಗೌಸ್ ಕುಮಟಾಕರ್.
ಶೇ5 ಜಿಎಸ್‌ಟಿ ಹೊಡೆತ
ಕೋಳಿ ಆಹಾರ ತಯಾರಿಕೆಯಲ್ಲಿ ಪ್ರಮುಖವಾಗಿ ಸೋಯಾ ಹಿಂಡಿ ಬಳಸಲಾಗುತ್ತದೆ. ಜಿಎಸ್‌ಟಿ ಪೂರ್ವದಲ್ಲಿ ಇದಕ್ಕೆ ತೆರಿಗೆ ಇರಲಿಲ್ಲ. ಆದರೆ ಈಗ ಶೇ5ರಷ್ಟು ಜಿಎಸ್‌ಟಿ ವಿಧಿಸಿರುವುದು ಉದ್ಯಮದ ಪಾಲಿಕೆ ಕಂಟಕವಾಗಿ ಪರಿಣಮಿಸಿದೆ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಫೀಡ್ಸ್ ಕಂಪನಿ ಮಾಲೀಕರೊಬ್ಬರು.
ಎಲ್ಲ ಖರ್ಚು ಕಳೆದು ಶೇ5ರಷ್ಟು ಲಾಭ ಉಳಿಯುತ್ತಿತ್ತು, ಆದರೆ ಈಗ ಅದನ್ನೂ ಜಿಎಸ್‌ಟಿ ಕಟ್ಟಿ ಖಾಲಿ ಕೈಯಲ್ಲಿ ಕೂರಬೇಕಾದ ಸ್ಥಿತಿ ಇದೆ. ಜಿಎಸ್‌ಟಿ ರಿಯಾಯಿತಿ ನೀಡಿದರೆ ಈ ಉದ್ಯಮಕ್ಕೆ ದೊಡ್ಡ ಪ್ರೋತ್ಸಾಹ ಸಿಗಲಿದೆ ಎಂದು ಅವರು ತಿಳಿಸಿದರು.
*
ಕೋಳಿ ಮಾಂಸದ ಬೆಲೆ ಏರಿಕೆಯಾಗಿರುವುದು ಹೊರೆಯಾಗಿದೆ. ಮಾಂಸ ಖರೀದಿ ಪ್ರಮಾಣ ಕಡಿಮೆ ಮಾಡದೆ ವಿಧಿಯಿಲ್ಲ.
–ಶಿವಕುಮಾರ್ ಕದಂ ಆಟೊ ಚಾಲಕ. ಹುಬ್ಬಳ್ಳಿ
*
ಬೆಲೆ ಏರಿಕೆಯಿಂದಾಗಿ ಮಾರಾಟ ಕುಸಿತ ಕಂಡಿದೆ. ಮೊದಲು 20 ಕೋಳಿ ಮಾರಾಟವಾಗುತ್ತಿದ್ದವು. ಈಗ 10ರಿಂದ 12 ಕೋಳಿ ಮಾರಾಟವಾಗುತ್ತಿವೆ.
–ರಿಹಾನ್, ಕೋಳಿ ಮಾಂಸದ ಅಂಗಡಿ ಮಾಲೀಕ, ಹುಬ್ಬಳ್ಳಿ
*
ಮಾಂಸದ ಬೆಲೆ ಏರಿಕೆ ಆಯಿತೆಂದು ನಾವೂ ಖಾದ್ಯದ ಬೆಲೆ ಏರಿಕೆ ಮಾಡಿದರೆ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತದೆ. ಬೆಲೆ ಏರಿಕೆ ಲಾಭವನ್ನು ಕಸಿದುಕೊಂಡಿದೆ.
–ಸುರೇಶ, ಮಾಲೀಕ, ಎಸ್‌ಆರ್ ಬಿರಿಯಾನಿ ಪಾಯಿಂಟ್ ಹುಬ್ಬಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.