ಹುಬ್ಬಳ್ಳಿ: ಕೋಳಿ ಮಾಂಸದ ದರವು ವಾರಾಂತ್ಯದಲ್ಲಿ ಕೆ.ಜಿ.ಗೆ ₹ 300ರ ಗಡಿ ದಾಟಿದೆ. ಕಳೆದ ಏಳೆಂಟು ತಿಂಗಳಲ್ಲಿ ದರದಲ್ಲಿ ಆಗಿರುವ ದಾಖಲೆಯ ಏರಿಕೆ ಇದು. ಈ ಏಕಾಏಕಿ ಏರಿಕೆಯು ಮಾಂಸಪ್ರಿಯರ ಹುಬ್ಬೇರುವಂತೆ ಮಾಡಿದೆ. ಎರಡು ವಾರಗಳ ಹಿಂದೆ ಕೆ.ಜಿ.ಗೆ ₹220 ಇದ್ದ ದರವು, ವಾರದ ಹಿಂದೆ ₹280ಕ್ಕೆ ಜಿಗಿಯಿತು.
‘ಬಡವರ ಕೈಗೆಟಕುವ ಏಕೈಕ ಮಾಂಸಾಹಾರ ಚಿಕನ್. ಹಲವು ವರ್ಷಗಳಿಂದ ಕೆ.ಜಿ.ಗೆ ₹200ಕ್ಕಿಂತಲೂ ಕಡಿಮೆ ಇದ್ದ ಮಾಂಸದ ದರವು, ಇತ್ತೀಚಿನ ವರ್ಷಗಳಲ್ಲಿ ಏರುಗತಿಯಲ್ಲಿ ಸಾಗುತ್ತಿದೆ. ಈ ದರವು ₹200ಕ್ಕಿಂತ ಕಡಿಮೆಯಾಗಿದ್ದೇ ಅಪರೂಪ’ ಎಂದು ಹುಬ್ಬಳ್ಳಿಯ ಅಂಗಡಿಯೊಂದಕ್ಕೆ ಕೋಳಿ ಮಾಂಸ ಖರೀದಿಸಲು ಬಂದಿದ್ದ ಗ್ರಾಹಕ ಯಲ್ಲಪ್ಪ ವಾಲೀಕಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಈಗಾಗಲೇ ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ಅಡುಗೆ ಅನಿಲ,ದಿನಸಿ ಹಾಗೂ ತರಕಾರಿಗಳ ಬೆಲೆಯೂ ಗಗನಮುಖಿಯಾಗಿದೆ. ಬಡವರು, ಮಧ್ಯಮ ವರ್ಗದವರ ದುಡಿಮೆಯ ಬಹುಪಾಲು ಇವುಗಳಿಗೇ ವಿನಿಯೋಗವಾಗುತ್ತಿದೆ. ಇದೀಗ ಕೋಳಿ ಮಾಂಸ ದರವೂ ಕೆ.ಜಿ.ಗೆ ₹ 320ರ ಆಗಿರುವುದು ವಾರಕ್ಕೊಮ್ಮೆ ಕೋಳಿ ಮಾಂಸ ತಿನ್ನುವ ನಮ್ಮಂತಹವರ ಆಸೆಗೆ ತಣ್ಣೀರು ಎರಚಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಕೋಳಿ ಮಾಂಸ ದರ ಏರಿಕೆಗೆ ಪೂರೈಕೆಯಲ್ಲಾಗಿರುವ ವ್ಯತ್ಯಯವೇ ಕಾರಣ. ಕೆಲವೊಮ್ಮೆ ಬೇಸಿಗೆಯೂ ಕಾರಣವಾಗುತ್ತದೆ. ಆದರೆ, ಈ ದರ ಎಷ್ಟು ದಿನ ಸ್ಥಿರವಾಗಿರುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಒಂದೆರಡು ದಿನದಲ್ಲೇ ಕಡಿಮೆಯೂ ಆಗಬಹುದು ಅಥವಾ ಇನ್ನೂ ಹೆಚ್ಚಾಗಬಹುದು’ ಎಂದು ಹುಬ್ಬಳ್ಳಿ ಮಹಾನಗರ ಚಿಕನ್ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ನಾಗರಾಜ ಪಟ್ಟಣ ಹೇಳಿದರು.
‘ಸ್ಥಳೀಯ ಕೋಳಿ ಸಾಕಾಣಿಕೆಯಷ್ಟೇ ಅಲ್ಲದೆ, ಸುತ್ತಮುತ್ತಲಿನ ರಾಜ್ಯಗಳಲ್ಲಿನ ಕೋಳಿ ಸಾಕಣೆಯೂ ದರ ಏರಿಕೆ ಮೇಲೆ ಪ್ರಭಾವ ಬೀರುತ್ತದೆ. ಕೆಲವೊಮ್ಮೆ ಬೇಡಿಕೆ ಹೆಚ್ಚಾದಾಗಲೂ ಹೀಗಾಗುವುದುಂಟು. ಕೋಳಿ ಸಾಕಣೆದಾರರು ಹಾಗೂ ಕಂಪನಿಗಳು ನಿತ್ಯ ಕೆ.ಜಿ.ಗೆ ಎಷ್ಟು ದರ ನಿಗದಿಪಡಿಸುತ್ತವೊ ಅದೇ ದರದಲ್ಲಿ ವ್ಯಾಪಾರಸ್ಥರು ಮಾರಾಟ ಮಾಡುತ್ತಾರೆ. ಇದರಲ್ಲಿ ವ್ಯಾಪಾರಿಗಳ ಪಾತ್ರವೇನೂ ಇರುವುದಿಲ್ಲ. ದರ ಏರಿದಾಗ ಗ್ರಾಹಕರು ಮೀನಿನತ್ತ ಮನಸ್ಸು ಮಾಡುವುದುಂಟು. ಕೆಲವರು ಮಾಂಸ ಖರೀದಿಯ ಗೊಡವೆಗೆ ಹೋಗುವುದೇ ಇಲ್ಲ. ಹಾಗಾಗಿ, ದರ ಏರಿಕೆಯು ಗ್ರಾಹಕರಿಗಷ್ಟೇ ಅಲ್ಲದೆ, ವ್ಯಾಪಾರಿಗಳಿಗೂ ನುಂಗಲಾರದ ತುತ್ತಾಗಿದೆ’ ಎಂದರು.
‘ಕೋಳಿ ಮಾಂಸದ ದರದಲ್ಲೂ ಆಗಾಗ ಈ ರೀತಿಯ ಏರುಪೇರಾಗುತ್ತಿರುತ್ತದೆ. ದರ ಎಷ್ಟು ಬೇಗ ಏರುತ್ತದೊ, ಅಷ್ಟೇ ಬೇಗ ಕುಸಿಯುತ್ತದೆ. ಯಾವುದೂ ಸ್ಥಿರವಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.