ಹುಬ್ಬಳ್ಳಿ: ‘ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಈ ಅನ್ಯಾಯವನ್ನು ಸರಿದೂಗಿಸಲು ರಾಜ್ಯಕ್ಕೆ ₹ 11,495 ಕೋಟಿ ವಿಶೇಷ ಅನುದಾನ ನೀಡಬೇಕೆಂದು 15ನೇ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ್ದರೂ ಕೇಂದ್ರ ಸರ್ಕಾರ ಕೊಟ್ಟಿಲ್ಲ. ಇದನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೇಳಬೇಕಲ್ಲವೇ? ಕೇಂದ್ರ ಸರ್ಕಾರ ಅನುದಾನ ಕೊಟ್ಟಿದ್ದರೆ ನಾನು ರಾಜಕೀಯ ಬಿಟ್ಟುಬಿಡುತ್ತೇನೆ. ಕೊಟ್ಟಿರದಿದ್ದರೆ ಜೋಶಿ ರಾಜಕೀಯ ಬಿಡುತ್ತಾರೆಯೇ, ರಾಜೀನಾಮೆ ಕೊಡುತ್ತಾರೆಯೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ತೆರಿಗೆ ಪಾಲಿನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು 15ನೇ ಹಣಕಾಸು ಆಯೋಗವು ಕೆಲವು ಶಿಫಾರಸ್ಸುಗಳನ್ನು ಮಾಡಿತ್ತು. ₹ 5,495 ಕೋಟಿ ವಿಶೇಷ ಅನುದಾನವಾಗಿ ಕೊಡಬೇಕು, ಪೆರಿಫೆರಲ್ ರಿಂಗ್ ರಸ್ತೆಗೆ ₹ 3 ಸಾವಿರ ಕೋಟಿ, ಕೆರೆ ಅಭಿವೃದ್ಧಿಗೆ ₹ 3 ಸಾವಿರ ಕೋಟಿ ಸೇರಿದಂತೆ ಒಟ್ಟು ₹ 11,495 ಕೋಟಿ ಕೊಡಬೇಕು ಎಂದು ಹೇಳಿತ್ತು. ಈ ಹಣ ಇದುವರೆಗೆ ರಾಜ್ಯಕ್ಕೆ ಬಂದಿಲ್ಲ’ ಎಂದು ಹೇಳಿದರು.
‘ಈ ಅನ್ಯಾಯದ ಬಗ್ಗೆ ಬಿಜೆಪಿಯವರು ಯಾರೂ ಮಾತನಾಡಲ್ಲ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಯಾವತ್ತಾದರೂ ಮಾತನಾಡಿದ್ದಾರಾ, ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಹೇಳಿದರೆ ಅದು ರಾಜಕೀಯ ಹೇಗಾಗುತ್ತದೆ, ಇದು ರಾಜಕೀಯ ಹೋರಾಟ ಅಲ್ಲ. ನ್ಯಾಯಗೋಸ್ಕರ ಹೋರಾಟ. ₹ 4.50 ಲಕ್ಷ ಕೋಟಿಗೂ ಹೆಚ್ಚು ತೆರಿಗೆಯನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತಿದ್ದೇವೆ. ವಾಪಸ್ ಬರುವುದು ಕೇವಲ ₹ 55ಸಾವಿರ ಕೋಟಿಯಿಂದ ₹ 60 ಸಾವಿರ ಕೋಟಿ ಬರುತ್ತಿದೆ. ಇದು ಅನ್ಯಾಯವಲ್ಲವೇ’ ಎಂದರು.
ಬಿಜೆಪಿ ಬಡವರ ವಿರೋಧಿ: ‘ಗ್ಯಾರಂಟಿ ಯೋಜನೆಗಳ ಮೂಲಕ ಎಲ್ಲ ಜಾತಿ– ಧರ್ಮದ ಬಡವರಿಗೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಶಕ್ತಿ ತುಂಬುತ್ತಿದ್ದೇವೆ. ಅವರು ಕೂಡ ಮುಖ್ಯವಾಹಿನಿಗೆ ಬರಬೇಕು ಎನ್ನುವುದು ನಮ್ಮ ಉದ್ದೇಶ. ಆದರೆ, ಬಿಜೆಪಿಯವರಿಗೆ ಇದು ಬೇಕಾಗಿಲ್ಲ. ಅವರಿಗೆ ಜನ ಬಡವರಾಗಿರಬೇಕು, ಅಸಮಾನತೆ ಇರಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಅವರು ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಾರೆ. ಅವರು ಬಡವರ ವಿರೋಧಿಗಳು’ ಎಂದು ಹರಿಹಾಯ್ದರು.
ಬಿಜೆಪಿಯವರು 600 ಭರವಸೆ ನೀಡಿದ್ದರು. ಏಷ್ಟು ಈಡೇರಿಸಿದ್ದಾರೆ. ಶೇ 10ರಷ್ಟೂ ಈಡೇರಿಸಿಲ್ಲ. ನಾವು 164 ಭರವಸೆ ನೀಡಿದ್ದೇವು. ಅದರಲ್ಲಿ 158 ಭರವಸೆ ಈಡೇರಿಸಿದ್ದೇವೆ. ನಾವು ಲೆಕ್ಕ ಕೊಡುತ್ತೇವೆ. ಅವರು ಕೊಡುತ್ತಾರೆಯೇ? ಅವರು ರಾಜಕೀಯಗೋಸ್ಕರ ಏನಾದರೂ ಮಾಡುತ್ತಾರೆ. ವಕ್ಫ್ ಆಸ್ತಿ ವಿಚಾರದಲ್ಲಿ ನಾವು ರೈತರನ್ನು ಒಕ್ಕಲೆಬ್ಬಿಸಲ್ಲ ಎಂದು ಹೇಳಿದರೂ ಪ್ರತಿಭಟನೆ ಮಾಡುತ್ತಿದ್ದಾರೆ ಏಕೆ? ರಾಜಕೀಯಗೋಸ್ಕರ ಪ್ರತಿಭಟನೆ ಮಾಡುತ್ತಿದ್ದಾರೆ. ಬಿ.ಎಸ್. ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ ಶೆಟ್ಟರ್ ಅವರ ಸರ್ಕಾರದಲ್ಲಿ 216 ವಕ್ಫ್ ಪ್ರಕರಣಗಳಲ್ಲಿ ಏಕೆ ನೋಟಿಸ್ ನೀಡಿದ್ದರು? ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.