ಹುಬ್ಬಳ್ಳಿ: ‘ವಿದ್ಯಾರ್ಥಿಗಳಿಗೆ ಅವರ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿಯಲು ಪ್ರೋತ್ಸಾಹಿಸಿದಾಗ ಮಾತ್ರ ಅವರು ಸಾಧನೆ ಮಾಡಲು ಸಾಧ್ಯ’ ಎಂದು ಮಜೇಥಿಯಾ ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ ಹೇಳಿದರು.
ಇಲ್ಲಿನ ಗೋಕುಲ ಗ್ರಾಮದ ಗುರು ಗೋರಕ್ಷನಾಥ ಕನ್ನಡ ಪ್ರಾಥಮಿಕ, ಪ್ರೌಢಶಾಲೆ ಸಭಾ ಗೃಹದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಗುರುವಾರ ಮಜೇಥಿಯಾ ಫೌಂಡೇಷನ್ ವತಿಯಿಂದ 450 ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ ಹಾಗೂ ಸಿಹಿ ವಿತರಿಸಿ ಅವರು ಮಾತನಾಡಿದರು.
‘ರಾಜ್ಯದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ. ಶ್ರೀಮಂತರು ಅವರೊಂದಿಗೆ ಕೈ ಜೋಡಿಸಿದಾಗ ಆ ಮಕ್ಕಳ ಭವಿಷ್ಯ ಹಾಗೂ ಸಂಸ್ಥೆಯ ಭವಿಷ್ಯ ಉಜ್ವಲವಾಗುತ್ತದೆ’ ಎಂದರು.
ಅತಿಥಿಯಾಗಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಗೀತಾ ಹೂಗಾರ ಮಾತನಾಡಿ, ‘ವಿದ್ಯಾರ್ಥಿಗಳಿಗಾಗಿ ಶ್ರಮಿಸುತ್ತಿರುವ ಸಂಸ್ಥೆಗಳು ಸರ್ಕಾರದ ಸೌಲಭ್ಯ ಬಳಸಿಕೊಂಡರೆ ಹಾಗೂ ದಾನಿಗಳಿಂದ ಸಹಕಾರ ಪಡೆದರೆ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸಾಧ್ಯ’ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಿ.ಪಿ.ಮಧೂರಕರ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಶಿವಾಜಿ ಮಧೂರಕರ ಮಾತನಾಡಿ, ‘ನಿರಂತರ 42 ವರ್ಷಗಳಿಂದ ಬಡ ವಿದ್ಯಾರ್ಥಿಗಳಿಗಾಗಿ ನಮ್ಮ ಸಂಸ್ಥೆ ಸೇವೆ ಸಲ್ಲಿಸುತ್ತಿದೆ. ಬಡಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ನಮ್ಮ ಸಂಕಲ್ಪ’ ಎಂದು ತಿಳಿಸಿದರು.
ಉದ್ಯಮಿಗಳಾದ ಪ್ರಕಾಶ ಸರಾಫ್, ಸಂಜು ಮೋನೆ, ರಮೇಶ ಮಧೂರಕರ ಹಾಗೂ ಮೆಜೇಥಿಯಾ ಫೌಂಡೇಷನ್ ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಮಜೇಥಿಯಾ ಫೌಂಡೇಷನ್ ಸಿಇಒ ಡಾ.ಸುನಿಲ ಕೂಕ್ಕನೂರ, ಬಾಲಕೃಷ್ಣ ಸರಾಫ್, ರೋಹನ ಗೊಂದಕರ ಇದ್ದರು.
ವೈ.ಬಿ.ಹುಲ್ಯಾಳ, ಕೆ.ಎನ್.ಕಾತೇನವರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಪಿ.ಜೋಗಾರ ನಿರೂಪಿಸಿದರು. ಬಿ.ಎಸ್. ಹೀರೆಮಠ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.