ADVERTISEMENT

ಹುಬ್ಬಳ್ಳಿ: ನಗರ ಚಿಕಿತ್ಸಾಲಯ ನಿಷ್ಕ್ರಿಯ

ಉದ್ಘಾಟನೆಯಾಗಿ ವರ್ಷ ಕಳೆದರೂ ಕಾರ್ಯಾರಂಭವಿಲ್ಲ; ಸ್ಥಳೀಯರ ಆಕ್ರೋಶ

ಗೋವರ್ಧನ ಎಸ್‌.ಎನ್‌.
Published 20 ಜೂನ್ 2024, 6:59 IST
Last Updated 20 ಜೂನ್ 2024, 6:59 IST
ಹುಬ್ಬಳ್ಳಿಯ ಹೊಸ ಮೇದಾರ ಓಣಿಯಲ್ಲಿರುವ ನಗರ ಚಿಕಿತ್ಸಾಲಯದ ಕಟ್ಟಡ ಪ್ರಜಾವಾಣಿ ಚಿತ್ರ–ಗುರು ಹಬೀಬ
ಹುಬ್ಬಳ್ಳಿಯ ಹೊಸ ಮೇದಾರ ಓಣಿಯಲ್ಲಿರುವ ನಗರ ಚಿಕಿತ್ಸಾಲಯದ ಕಟ್ಟಡ ಪ್ರಜಾವಾಣಿ ಚಿತ್ರ–ಗುರು ಹಬೀಬ   

ಹುಬ್ಬಳ್ಳಿ: ಸಾರ್ವಜನಿಕರಿಗೆ ತಕ್ಷಣದ ಆರೋಗ್ಯ ಸೇವೆ ಒದಗಿಸಲು ಅಭಿವೃದ್ಧಿಪಡಿಸಲಾದ ಇಲ್ಲಿನ ಹೊಸ ಮೇದಾರ ಓಣಿಯ ನಗರ ಚಿಕಿತ್ಸಾಲಯ ಇನ್ನೂ ಕಾರ್ಯಾರಂಭ ಮಾಡಿಲ್ಲ. 

ಸ್ಮಾರ್ಟ್‌ ಸಿಟಿ ಯೋಜನೆಯಡಿ ₹4 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡ ಉದ್ಘಾಟನೆಯಾಗಿ ವರ್ಷವಾಗಿದೆ. ಆದರೆ, ಈವರೆಗೆ ಇಲ್ಲಿ ಆರೋಗ್ಯ ಸೇವೆ ಲಭ್ಯವಾಗಿಲ್ಲ. ಇದರಿಂದ ಸುತ್ತಲಿನ ವ್ಯಾಪಾರಸ್ಥರು, ಗ್ರಾಹಕರು, ನಿವಾಸಿಗಳು ಚಿಕ್ಕ–ಪುಟ್ಟ ಚಿಕಿತ್ಸೆಗೂ ಕಿಮ್ಸ್‌ಗೆ ಹೋಗಬೇಕು ಇಲ್ಲವೇ ಖಾಸಗಿ ಆಸ್ಪತ್ರೆಗೆ ತೆರಳಿ ಹೆಚ್ಚು ಹಣ ನೀಡಬೇಕು.

‘ಬಹಳ ವರ್ಷಗಳಿಂದ ಇಲ್ಲಿ ಆಸ್ಪತ್ರೆ ಇತ್ತು. ಸುತ್ತಲಿನವರು ಅಗತ್ಯ ಚಿಕಿತ್ಸೆಗೆ ಈ ಆಸ್ಪತ್ರೆಗೆ ಹೋಗುತ್ತಿದ್ದರು. ಆಸ್ಪತ್ರೆ ಕಟ್ಟಡ ಇದ್ದ ವಾಣಿಜ್ಯ ಮಳಿಗೆಗಳ ಸಾಲು ಕುಸಿದ ಕಾರಣಕ್ಕೆ ಆಸ್ಪತ್ರೆ ಕೆಡವಿದರು. ಕಟ್ಟಡ ಕಡೆವಲೂ ವರ್ಷಗಟ್ಟಲೇ ಸಮಯ ಬೇಕಾಯಿತು. ಹೊಸ ಕಟ್ಟಡ ನಿರ್ಮಿಸಲೂ ವರ್ಷಗಟ್ಟಲೆ ಸಮಯ ತೆಗೆದುಕೊಂಡರು’ ಎಂದು ಸ್ಥಳೀಯರಾದ ಜಯದೇವಯ್ಯ ಹಿರೇಮಠ ತಿಳಿಸಿದರು.

ADVERTISEMENT

‘ಇಲ್ಲಿದ್ದ ಆಸ್ಪತ್ರೆಯನ್ನು ರಾಜನಗರಕ್ಕೆ ಸ್ಥಳಾಂತರಿಸಲಾಗಿದೆ. ಹೊಸ ಕಟ್ಟಡ ಪೂರ್ಣಗೊಂಡು, ಉದ್ಘಾಟನೆ ಮಾಡಿದರೂ, ಆಸ್ಪತ್ರೆ ಕಾರ್ಯಾರಂಭ ಮಾಡಿಲ್ಲ. ರಾಜನಗರದಲ್ಲಿರುವ ಆಸ್ಪತ್ರೆಯನ್ನು ಸ್ಥಳಾಂತರಿಸುವುದಾಗಿ ಪಾಲಿಕೆ ಅಧಿಕಾರಿಗಳು ಹೇಳುತ್ತಿದ್ದಾರೆ. ಸುತ್ತಲಿನ ವ್ಯಾಪಾರಸ್ಥರು ಸಹ ಈ ಬಗ್ಗೆ ಅಧಿಕಾರಿಗಳಿಗೆ ಮೌಖಿಕವಾಗಿ ಮನವಿ ಮಾಡಿದ್ದಾರೆ. ಯಾವಾಗ ಆಸ್ಪತ್ರೆ ತೆರೆಯುವುದೋ ಎಂದು ಕಾಯುತ್ತಿದ್ದೇವೆ’ ಎಂದು ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಹುಬ್ಬಳ್ಳಿ–ಧಾರವಾಡ ಮಹಾನಗರಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ‘ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಿದ ನಗರ ಆರೋಗ್ಯ ಕೇಂದ್ರ ಸೇರಿದಂತೆ ವಿವಿಧ ಯೋಜನೆಗಳ ಹಸ್ತಾಂತರ ಪ್ರಕ್ರಿಯೆ ಸದ್ಯ ನಡೆಯುತ್ತಿದೆ. ₹1 ಕೋಟಿ ಮೊತ್ತದ ವೈದ್ಯಕೀಯ ಸಲಕರಣೆಗೆ ಪ್ರಸ್ತಾವ ಸಲ್ಲಿಸಿದ್ದೇವೆ. ಹಣ ಮಂಜೂರಾಗಿ, ವೈದ್ಯಕೀಯ ಸಲಕರಣೆಗಳನ್ನು ಖರೀದಿಸಿದ ಬಳಿಕ ಆಸ್ಪತ್ರೆ ಆರಂಭಿಸಲಾಗುತ್ತದೆ’ ಎಂದರು.

‘ಇಲ್ಲಿಂದ ರಾಜನಗರಕ್ಕೆ ಸ್ಥಳಾಂತರಗೊಂಡ ಆಸ್ಪತ್ರೆಯನ್ನು ಅಲ್ಲಿಯೇ ಉಳಿಸಬೇಕೆಂಬ ಆಗ್ರಹವೂ ಇದೆ. ಹೊಸ ಮೇದಾರ ಓಣಿಯಲ್ಲಿರುವ ಕಟ್ಟಡದಲ್ಲಿ ಹೊಸದಾಗಿ ಚಿಕಿತ್ಸಾಲಯ ತೆರೆಯಲು ಆರೋಗ್ಯ ಇಲಾಖೆಯಿಂದ ಮಂಜೂರಾತಿ ಅವಶ್ಯವಿದೆ. ಈ ಪ್ರಕ್ರಿಯೆಗೆ ಸಮಯ ಹಿಡಿಯುತ್ತದೆ. ಹಾಗಾಗಿ, ರಾಜನಗರದಿಂದಲೇ ಚಿಕಿತ್ಸಾಲಯ ಸ್ಥಳಾಂತರ ಮಾಡುವ ಚಿಂತನೆ ಇದೆ’ ಎಂದು ಮಾಹಿತಿ ನೀಡಿದರು.

ಹುಬ್ಬಳ್ಳಿಯ ಹೊಸ ಮೇದಾರ ಓಣಿಯಲ್ಲಿರುವ ನಗರ ಚಿಕಿತ್ಸಾಲಯದ ಆವರಣದಲ್ಲಿ ಕಟ್ಟಡ ಲೋಕಾರ್ಪಣೆಯ ಮಾಹಿತಿಯುಳ್ಳ ಶಿಲಾಫಲಕವನ್ನು ಕೆಳಗಿಡಲಾಗಿದೆ
ನಗರ ಚಿಕಿತ್ಸಾಲಯಕ್ಕೆ ಅಗತ್ಯವಿರುವಷ್ಟು ಸಿಬ್ಬಂದಿ ಇದ್ದಾರೆ. ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಗತ್ಯವಿರುವ ಎಲ್ಲಾ ಸೌಲಭ್ಯ ಒದಗಿಸಲಾಗುತ್ತದೆ.
-ಶ್ರೀಧರ ದಂಡಪ್ಪನವರ, ಮುಖ್ಯ ವೈದ್ಯಾಧಿಕಾರಿ ಹು–ಧಾ ಮಹಾನಗರ ಪಾಲಿಕೆ
ಹತ್ತಿರದಲ್ಲೇ ನಗರ ಚಿಕಿತ್ಸಾಲಯ ಇದ್ದ ಕಾರಣ ಸ್ಥಳೀಯರು ವ್ಯಾಪಾರಸ್ಥರು ಗ್ರಾಹಕರಿಗೆ ಸಾಕಷ್ಟು ಅನುಕೂಲವಾಗಿತ್ತು. ಶೀಘ್ರ ಪುನರಾರಂಭಿಸಬೇಕು
-ಬಾಬು, ಸ್ಥಳೀಯ ನಿವಾಸಿ
ಅಗತ್ಯ ಇರುವೆಡೆ ಆಸ್ಪತ್ರೆಗಳನ್ನು ತೆರೆಯುವುದು ಜನರಿಗೆ ವೈದ್ಯಕೀಯ ಸೌಲಭ್ಯ ಒದಗಿಸುವುದು ಸ್ಥಳೀಯ ಆಡಳಿತದ ಕರ್ತವ್ಯ. ನಿರ್ಲಕ್ಷ್ಯ ಮಾಡಬಾರದು
- ಲಿಂಗರಾಜ ಧಾರವಾಡಶೆಟ್ಟರ್‌, ಸಂಚಾಲಕರು ವಾರ್ಡ್‌ ಸಮಿತಿ ಬಳಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.