ADVERTISEMENT

ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿ: ತಮಿಳುನಾಡು ತಂಡ ಬಿಗಿ ಹಿಡಿತ

ಸತೀಶ ಬಿ.
Published 15 ಅಕ್ಟೋಬರ್ 2024, 18:41 IST
Last Updated 15 ಅಕ್ಟೋಬರ್ 2024, 18:41 IST
ಐದು ವಿಕೆಟ್ ಪಡೆದ ಕರ್ನಾಟಕ ತಂಡದ ಕೆ.ಶಶಿಕುಮಾರ್
ಪ್ರಜಾವಾಣಿ ಚಿತ್ರ; ಗುರು ಹಬೀಬ
ಐದು ವಿಕೆಟ್ ಪಡೆದ ಕರ್ನಾಟಕ ತಂಡದ ಕೆ.ಶಶಿಕುಮಾರ್ ಪ್ರಜಾವಾಣಿ ಚಿತ್ರ; ಗುರು ಹಬೀಬ   

ಹುಬ್ಬಳ್ಳಿ: ಮಧ್ಯಮ ಕ್ರಮಾಂಕದ ಆಟಗಾರ ಎಸ್.ರಿತಿಕ್ ಈಶ್ವರನ್ (87; 164 ಎ) ಅರ್ಧಶತಕ ಮತ್ತು ಬೌಲರ್‌ಗಳ ಚುರುಕಿನ ದಾಳಿಯ ಬಲದಿಂದ ತಮಿಳುನಾಡು ತಂಡ ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕ ತಂಡದ ಮೇಲೆ ಬಿಗಿ ಹಿಡಿತ ಸಾಧಿಸಿತು.

ತಮಿಳುನಾಡು ತಂಡ ಗಳಿಸಿದ್ದ 312 ರನ್‌ಗಳಿಗೆ ಉತ್ತರವಾಗಿ ಕರ್ನಾಟಕ ತಂಡ ಮಂಗಳವಾರ ಮೂರನೇ ದಿನದಾಟದ ಅಂತ್ಯಕ್ಕೆ 13 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 42 ರನ್ ಗಳಿಸಿದೆ.

ಇನ್ನೂ ಒಂದು ದಿನದ ಆಟ ಬಾಕಿ ಇದ್ದು, ಇನಿಂಗ್ಸ್ ಹಿನ್ನಡೆ ತಪ್ಪಿಸಿಕೊಳ್ಳಲು ಕರ್ನಾಟಕ ತಂಡ 270 ರನ್‌ ಗಳಿಸಬೇಕಿದೆ. ತಂಡದ ನಾಯಕ ಅನೀಶ್ವರ್ ಗೌತಮ್‌ (5) ಮತ್ತು ಹರ್ಷಿಲ್ ಧರ್ಮಾನಿ (6) ಬುಧವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ADVERTISEMENT

ವೇಗಿ ಸನ್ನಿ ಮೂರನೇ ಓವರ್‌ನಲ್ಲಿ ಕರ್ನಾಟಕ ತಂಡಕ್ಕೆ ಪೆಟ್ಟು ಕೊಟ್ಟರು. ಆರಂಭಿಕ ಆಟಗಾರ ಪ್ರಕರ್‌ ಚತುರ್ವೇದಿ (4) ಕೀಪರ್‌ ರಿತಿಕ್‌ ಈಶ್ವರನ್‌ಗೆ ಕ್ಯಾಚಿತ್ತರು.  ನಂತರ ಮ್ಯಾಕ್ನಿಲ್ ನೊರೊನ್ಹಾ (8), ವಿಶಾಲ್ ಓನತ್‌ (15) ಬೇಗನೆ ನಿರ್ಗಮಿಸಿದರು.

ಇದಕ್ಕೂ ಮುನ್ನ 4ಕ್ಕೆ 165 ರನ್‌ಗಳೊಂದಿಗೆ ಮಂಗಳವಾರ ಮೂರನೇ ದಿನದಾಟ ಆರಂಭಿಸಿದ ತಮಿಳುನಾಡು ತಂಡ, 97.2 ಓವರ್‌ಗಳಲ್ಲಿ 312 ರನ್‌ ಗಳಿಸಿತು.

ತಮಿಳುನಾಡು ತಂಡ 92.4 ಓವರ್‌ಗಳಲ್ಲಿ 8 ವಿಕೆಟ್‌ಗೆ 297 ರನ್‌ ಗಳಿಸಿದ್ದ ವೇಳೆ (ಮಧ್ಯಾಹ್ನ 1.25) ಮಳೆ ಸುರಿಯಿತು. ಇದರಿಂದ ಎರಡೂವರೆ ಗಂಟೆ ಪಂದ್ಯ ಸ್ಥಗಿತವಾಗಿತ್ತು. ಉತ್ತಮವಾಗಿ ಆಡುತ್ತಿದ್ದ ರಿತಿಕ್ ಈಶ್ವರನ್‌, ಸ್ಪಿನ್ನರ್‌ ಶಶಿಕುಮಾರ್ ಎಸೆತದಲ್ಲಿ ವಿಕೆಟ್ ಕೀಪರ್‌ ಕೃತಿಕ್ ಕೃಷ್ಣಗೆ ಕ್ಯಾಚಿತ್ತರು. ಅವರು ಎಂಟು ಬೌಂಡರಿ, ಎರಡು ಸಿಕ್ಸರ್ ಬಾರಿಸಿದರು.

ಕರ್ನಾಟಕ ತಂಡದ ಪರ ಕೆ.ಶಶಿಕುಮಾರ್ 5 ಮತ್ತು ಪಾರಸ್‌ ಗುರುಬಕ್ಷ್‌ ಆರ್ಯ 4 ವಿಕೆಟ್‌ ಕಿತ್ತರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ತಮಿಳುನಾಡು 97.2 ಓವರ್‌ಗಳಲ್ಲಿ 312 (ಸೋಮವಾರ 49 ಓವರ್‌ಗಳಲ್ಲಿ 4ಕ್ಕೆ 165) (ರಿತಿಕ್ ಈಶ್ವರನ್‌ 87, ಕೆ.ಟಿ.ಎ.ಮಾಧವ ಪ್ರಸಾದ್‌ 27, ಸನ್ನಿ 24, ಲಕ್ಷಯ್ ಜೈನ್ 9, ಪಿ.ವಿಗ್ನೇಶ 6, ಜಿ.ಗೋವಿಂತ್ 2, ಸಿ.ವಿ.ಅಚ್ಯುತ್ ಅಜೇಯ 1; ಕೆ.ಶಶಿಕುಮಾರ್ 83ಕ್ಕೆ 5, ಪಾರಸ್ ಗುರುಬಕ್ಷ್ ಆರ್ಯ 72ಕ್ಕೆ 4).  ಮೊದಲ ಇನಿಂಗ್ಸ್‌: ಕರ್ನಾಟಕ: 13 ಓವರ್‌ಗಳಲ್ಲಿ 3ಕ್ಕೆ 42 (ಮ್ಯಾಕ್ನಿಲ್ ನೊರೊನ್ಹಾ8, ಪ್ರಕರ್ ಚತುರ್ವೇದಿ 4, ವಿಶಾಲ್ ಓನತ್‌ 15, ಹರ್ಷಿಲ್ ಧರ್ಮಾನಿ ಬ್ಯಾಟಿಂಗ್ 6, ಅನೀಶ್ವರ್ ಗೌತಮ್‌ ಬ್ಯಾಟಿಂಗ್ 5; ಸನ್ನಿ 16ಕ್ಕೆ 1, ಗೋವಿಂತ್ 13ಕ್ಕೆ 1, ‍‍ಪಿ.ವಿಗ್ನೇಶ್‌ 3ಕ್ಕೆ 1).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.